ವಾಣಿಜ್ಯ

51 ಲಕ್ಷ ಉದ್ಯೋಗ ನಷ್ಟ

ಮುಂದಿನ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ 51 ಲಕ್ಷ ಉದ್ಯೋಗ ನಷ್ಟವಾಗಲಿದೆ. ಶ್ರೀಮಂತರ ಸಂಪತ್ತಿನಲ್ಲಿ ಇನ್ನಷ್ಟು ಏರಿಕೆ ಕಂಡರೆ ಬಡವರು ಇನ್ನಷ್ಟು ಬಡವರಾಗಿದ್ದಾರೆ. ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್)ನ ಐದು...

51 ಲಕ್ಷ ಉದ್ಯೋಗ ನಷ್ಟ
ಸಾಂದರ್ಭಿಕ ಚಿತ್ರ
Published On :

ದಾವೋಸ್: ಮುಂದಿನ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ 51 ಲಕ್ಷ ಉದ್ಯೋಗ ನಷ್ಟವಾಗಲಿದೆ. ಶ್ರೀಮಂತರ ಸಂಪತ್ತಿನಲ್ಲಿ ಇನ್ನಷ್ಟು ಏರಿಕೆ ಕಂಡರೆ ಬಡವರು ಇನ್ನಷ್ಟು ಬಡವರಾಗಿದ್ದಾರೆ. ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್)ನ ಐದು ದಿನಗಳ ಸಭೆ ಇಂದಿನಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ ಕುರಿತು ಬಿಡುಗಡೆ ಮಾಡಿರುವ `ಫಂಡ್ಸ್ ಆಫ್ ಜಾಬ್ಸ್' ವರದಿ ಈ ಕುರಿತು ವಿವರಿಸಿದೆ.

ಮುಂದಿನ ಐದು ವರ್ಷಗಳಲ್ಲಿ 71 ಲಕ್ಷ ಉದ್ಯೋಗಗಳು ನಷ್ಟವಾಗಲಿವೆ. ಇದೇ ಅವಧಿಯಲ್ಲಿ 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವುದರಿಂದ ಒಟ್ಟಾರೆ ಉದ್ಯೋಗ ನಷ್ಟ 51ಲಕ್ಷ ಇರಲಿದೆ ಎಂದು ಹೇಳಿದೆ.

ಪ್ರಮುಖ 15 ಅಭಿವೃದ್ಧಿಹೊಂದಿದ ದೇಶಗಳು ಮತ್ತು ಭಾರತ ಸೇರಿದಂತೆ ವೇಗವಾಗಿ ಅಭಿವೃದ್ಧಿಕಾಣುತ್ತಿರುವ ದೇಶಗಳಲ್ಲಿ ಡಬ್ಲ್ಯುಇಎಫ್ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ಭಾರತ ಸೇರಿದಂತೆ ಐದು ದೇಶಗಳಲ್ಲಿ ಮಾತ್ರ ಉದ್ಯೋಗ ಮಾರುಕಟ್ಟೆ ಸಕಾರಾತ್ಮಕವಾಗಿದೆ. ಮೆಕ್ಸಿಕೊ, ಟರ್ಕಿ ಮತ್ತು ಕೊಲ್ಲಿ ವಲಯದಲ್ಲಿ ಉದ್ಯೋಗ ಸೃಷ್ಟಿ ಆಶಾದಾಯಕವಾಗಿದೆ. ಆದರೂ ಈ ದೇಶಗಳಲ್ಲೂ ವಿವಿಧ ವಲಯಗಳಲ್ಲಿ ಉದ್ಯೋಗ ನಾಶ ಕಾಣಲಿದೆ ಎಂದು ವರದಿ ವಿವರಿಸಿದೆ.

ನಿರ್ಮಾಣ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಸ್ವಯಂಚಾಲಿತಗೊಳಿಸುತ್ತಿರುವುದರಿಂದ, ಎಲ್ಲ ವಾಣಿಜ್ಯ ಸರಪಳಿಗಳಲ್ಲಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ಕಾರ್ಯತಂತ್ರಗಳನ್ನು ರೂಪಿಸುತ್ತಿರುವುದರಿಂದ ಡೀಲರ್‍ಶಿಪ್‍ಗಳು ಇಲ್ಲವಾಗುವುದು, ಆಡಳಿತಾತ್ಮಕ ಹುದ್ದೆಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಕಡಿಮೆ ಮಾಡುತ್ತಿರುವುದರಿಂದ ಉದ್ಯೋಗ ನಷ್ಟ ಕಾಣಲಿದೆ
ಎಂದು ವರದಿ ಹೇಳಿದೆ.

ಇನ್ನಷ್ಟು ಬಡವಾದ ಬಡವರು: ಭಾರತ ಸೇರಿದಂತೆ ಜಗತ್ತಿನಾದ್ಯಂತ ಆದಾಯ ಗಳಿಕೆ ಅಸಮಾನತೆ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಜಗತ್ತಿನಲ್ಲಿನ 62 ಅತಿದೊಡ್ಡ ಶ್ರೀಮಂತರ ಸಂಪತ್ತು ಇಡೀ ಜಗತ್ತಿನ ಅರ್ಧದಷ್ಟು ಬಡಜನರ ಸಂಪತ್ತಿಗೆ ಸಮನಾಗಿದೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಈ 62 ಶ್ರೀಮಂತರ ಪೈಕಿ ಮಹಿಳೆಯರು ಒಂಬತ್ತು ಮಂದಿ ಮಾತ್ರ ಇದ್ದಾರೆ. ಈ ಶ್ರೀಮಂತರ ಸಂಪತ್ತು 2010ರಿಂದ ಅರ್ಧಲಕ್ಷ ಕೋಟಿ ಡಾಲರ್ ಏರಿಕೆ ಕಂಡಿದ್ದು 1.76 ಲಕ್ಷ ಕೋಟಿ ಡಾಲರ್‍ಗೆ ತಲುಪಿದೆ. ಇದೇ ಅವಧಿಯಲ್ಲಿ ಬಡವರ ಸಂಪತ್ತಿನಲ್ಲಿ ಶೇ.41ರಷ್ಟು ನಷ್ಟವಾಗಿದೆ ಎಂದು ಆಕ್ಸ್ಫಮ್ ಗ್ರೂಪ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

2010ರಲ್ಲಿ ಈ ಶ್ರೀಮಂತರ ಸಂಖ್ಯೆ 388 ಇತ್ತು. ನಂತರ ಪ್ರತಿ ವರ್ಷವೂ ಈ ಶ್ರೀಮಂತರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಾ ಬಂದಿದೆ. ಆದರೆ ಉಳಿದವರಲ್ಲಿ ಸಂಪತ್ತು ಕ್ರೋಡೀಕರಣ
ಪ್ರಮಾಣ ಏರಿಕೆ ಕಂಡಿದೆ. ಅಂದರೆ ಈ ಶ್ರೀಮಂತರ ಸಂಖ್ಯೆ ಕಡಿಮೆಯಾಗಿದ್ದರೂ ಅವರ ಆಸ್ತಿ ಬಡವರಿಗೆ ತಲುಪಿಲ್ಲ. ಬದಲಿಗೆ ಬಡವರ ಸಂಪತ್ತೇ ಅತಿದೊಡ್ಡ ಶ್ರೀಮಂತರಿಗೆ ಹೋಗಿದೆ.
ಭಾರತದ ಅಗ್ರಗಣ್ಯ ಐಟಿ ಕಂಪನಿಯೊಂದರ ಮುಖ್ಯಸ್ಥನ ವೇತನ ಅದೇ ಕಂಪನಿಯಲ್ಲಿ ಕೊನೆಯ ರ್ಯಾಂಕ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿ ವೇತನಕ್ಕಿಂತಲೂ 416 ಪಟ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ವಿವರಿಸಿದೆ. ಸಿಗರೇಟ್ ಕಂಪನಿಯಲ್ಲಿ ಈ ತಾರತಮ್ಯ 439 ಪಟ್ಟು ಇದೆ ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.