ಸಕ್ಕರೆ ಸಮಸ್ಯೆ ನಿವಾರಣೆಗೆ ಯತ್ನ
ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸುವುದು ಸೇರಿದಂತೆ ಸಕ್ಕರೆ ಉದ್ಯಮ ಸದ್ಯ ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಹಲವು ರೀತಿಯ ...

ನವದೆಹಲಿ: ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸುವುದು ಸೇರಿದಂತೆ ಸಕ್ಕರೆ ಉದ್ಯಮ ಸದ್ಯ ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಹಲವು ರೀತಿಯ ಸಾಧ್ಯತೆಗಳತ್ತ ನೋಟ ಹರಿಸಿದೆ. ಸಕ್ಕರೆ ಕಾರ್ಖಾನೆಗಳು ಕಡ್ಡಾಯವಾಗಿ ರಫ್ತು ಮಾಡುವುದು ಸೇರಿದಂತೆ, ಆಮದು ಮಾಡಿಕೊಳ್ಳುತ್ತಿ ರುವ ಕೃಷಿ ಉತ್ಪನ್ನಗಳಿಗೆ ಬದಲಾಗಿ
ಆಯಾ ದೇಶಗಳಿಗೆ ಸಕ್ಕರೆಯನ್ನು ವಿನಿಮಯ ಮಾಡಿಕೊಳ್ಳುವತ್ತಲೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕಳೆದ ವಾರ ಪ್ರಧಾನಿ ಮೋದಿ ಆಹಾರ ಸಚಿವಾಲಯ ಸೇರಿದಂತೆ ಇತರೆ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಸಕ್ಕರೆ ರಫ್ತು ಹೆಚ್ಚಿಸು ವುದರೊಂದಿಗೆ ಎಥನಾಲ್ ಒಳಗೊಂಡಿ ರುವ ಪೆಟ್ರೋಲ್ ತಯಾರಿಸುವ ಪ್ರಕ್ರಿಯೆಯತ್ತಲೂ ನೋಟ ಹರಿಸಬೇಕೆಂದು ಸಂಬಂಧಪಟ್ಟ ಸಚಿವಾಲಯಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಹಾರ ಸಚಿವಾಲಯ ಸಕ್ಕರೆ ರಫ್ತಿನ ಕುರಿತು ಹಲವು ಕ್ರಮಗಳತ್ತ ನೋಟ ಹರಿಸಿದೆ. ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶ ಗಳಿಗೆ ಪ್ರತಿಯಾಗಿ ಸಕ್ಕರೆ ನೀಡುವ ಕುರಿತ ಸಾಧ್ಯತೆಗಳತ್ತಲೂ ಪ್ರಯತ್ನಗಳು ಸಾಗಿವೆ. ಭಾರತ ಸದ್ಯ ಮಲೇಷ್ಯಾ,ಮೈಯನ್ಮಾರ್, ಕೆನಡ ಮತ್ತು ಆಸ್ಟ್ರೇ ಲಿಯಾಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಳೆ ಕಾಳುಗಳನ್ನು ಆಮದು ಮಾಡಿ ಕೊಳ್ಳುತ್ತಿದೆ. ಈ ಮೌಲ್ಯಕ್ಕೆ ವಿನಿಮಯ ವಾಗಿ ಸಕ್ಕರೆ ರಫ್ತು ಮಾಡಲು ಪರಿಶೀಲನೆ ನಡೆಸುತ್ತಿದೆ.
ಸಕ್ಕರೆ ಕಂಪನಿಗಳು ಪ್ರತಿ ವರ್ಷ ಉತ್ಪಾದಿಸುವ ಪ್ರಮಾಣದಲ್ಲಿ ಒಂದ ಷ್ಟನ್ನು ಕಡ್ಡಾಯವಾಗಿ ರಫ್ತು ಮಾಡಬೇಕೆಂದು ನಿಯಮ ರೂಪಿಸುವತ್ತಲೂ ಆಹಾರ ಸಚಿವಾಲಯ ಚಿಂತನೆ ನಡೆಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ಸಕ್ಕರೆ ದರವನ್ನು ಹೆಚ್ಚಿಸಲು ಪ್ರತಿ ಕೆಜಿಗೆ ಈಗಿರುವ ಸೆಸ್ 24 ಪೈಸೆಯನ್ನು ಹೆಚ್ಚಿಸುವ ಪ್ರಯತ್ನ ಗಳೂ ನಡೆದಿವೆ.
ದೇಶದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ರು.14,398 ಕೋಟಿ ಬಾಕಿ ಪಾವತಿಸಬೇಕಾಗಿದೆ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ದರ ಗಣನೀಯ ಪ್ರಮಾಣದಲ್ಲಿ ಕುಸಿದಿರುವುದರಿಂದ ಸರ್ಕಾರ ನಿಗದಿಪಡಿಸಿರುವ ದರಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೇಂದ್ರ ಮತ್ತು ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿನ ಸರ್ಕಾರಗಳು ಸಂಕಷ್ಟಕ್ಕೆ ಸಿಲುಕಿವೆ. ಭಾರತದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಅತಿ ಹೆಚ್ಚು ಸಕ್ಕರೆ ಉತ್ಪಾದಿಸಲಿವೆ. ಕೇಂದ್ರ ಸರ್ಕಾರದ ಈ ಕ್ರಮಗಳ ಹಿನ್ನೆಲೆಯಲ್ಲಿ ಬುಧವಾರ ಸಕ್ಕರೆ ಕಂಪನಿ ಷೇರು ದರಗಳು ಏರಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


