ವಾಣಿಜ್ಯ

ಸ್ವರ್ಣನಾತೀತ

ಮೋದಿ ಗೆದ್ದಾಗ 'ಸುವರ್ಣಯುಗ ಆರಂಭ' ಎಂದರು ಹಲವರು. ಈಗ ಅಕ್ಷರಶಃ ಸುವರ್ಣಯುಗವೇ ಭಾರತಕ್ಕೆ ಕಾಲಿಟ್ಟಿದೆ...

ಸ್ವರ್ಣನಾತೀತ
Published On :

ಮೋದಿ ಗೆದ್ದಾಗ 'ಸುವರ್ಣಯುಗ ಆರಂಭ' ಎಂದರು ಹಲವರು. ಈಗ ಅಕ್ಷರಶಃ ಸುವರ್ಣಯುಗವೇ ಭಾರತಕ್ಕೆ ಕಾಲಿಟ್ಟಿದೆ. ನಾಗಾಲೋಟದಿಂದ ಓಡುತ್ತಿದ್ದ ಚಿನ್ನವೆಂಬ ಕುದುರೆಗೆ ಕೊನೆಗೂ ಲಗಾಮು ಬಿದ್ದಿದೆ. ಕಳೆದ ಗುರುವಾರ ಒಂದೇ ದಿನ 800 ರು.ಗಳಷ್ಟು ಇಳಿಕೆ ಕಂಡಿದೆ. ಒಂದೇ ದಿನದ ಇಷ್ಟು ಇಳಿಕೆ ಈ ವರ್ಷದಲ್ಲಿ ಆಗಿರಲಿಲ್ಲ. ಇದು ಚಿನ್ನದ ರೇಟು ಇನ್ನೂ ತಗ್ಗುವ ಸೂಚನೆ ಇದ್ದಿರಲೂಬಹುದು. ಚಿನ್ನ ವಹಿವಾಟು ಕ್ಷೇತ್ರದ ಪರಿಣತರೂ ಇದೇ ಭವಿಷ್ಯ ನುಡಿಯುತ್ತಿದ್ದಾರೆ.

ಆರ್‌ಬಿಐ ಪ್ರಭಾವ
2013ರ ಜುಲೈನಲ್ಲಿ ಅಮೆರಿಕದ ಡಾಲರ್ ಎದುರು ರುಪಾಯಿ ಗಣನೀಯವಾಗಿ ಕುಸಿತ ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ಮತ್ತು ಚಾಲ್ತಿ ಖಾತೆ ಕೊರತೆ (ಸಿಎಡಿ) ಆಗಿದ್ದರಿಂದ ಆರ್‌ಬಿಐ ಚಿನ್ನದ ಆಮದು ಕ್ರಮಗಳಿಗೆ ಹಿನ್ನಡೆಯಾಗುವ ಕ್ರಮಗಳನ್ನು ಕೈಗೊಂಡಿತ್ತು. 20- 80ರ ಅನುಪಾತದಲ್ಲಿ ಚಿನ್ನ ಆಮದು- ರಫ್ತಿಗೆ ಅವಕಾಶ ಕೊಟ್ಟಿತ್ತು. ಈ ಸೂತ್ರದ ಪ್ರಕಾರ ಆಮದುದಾರರು ತಂದ ಚಿನ್ನದ ಶೇ.20ರಷ್ಟು ಭಾಗವನ್ನು ರಫ್ತು ಉದ್ದೇಶಕ್ಕೆ ಬಳಸಬೇಕು. ಉಳಿದ ಭಾಗವನ್ನು ದೇಶದ ಬಳಕೆಗೆ ಬಳಸಬೇಕು. ಮಾತ್ರವಲ್ಲದೆ ಆಯ್ದ ಹಣಕಾಸು ಸಂಸ್ಥೆಗಳಲ್ಲಿ ಮಾತ್ರ ಇಂಥ ಸೇವೆ ಜಾರಿಯಲ್ಲಿರುವಂತೆ ನೋಡಿಕೊಂಡಿತ್ತು. ಹೀಗಾಗಿ ಚಿನ್ನದ ಮಾರುಕಟ್ಟೆಯೂ ಶರವೇಗದಲ್ಲಿ ಏರಿಕೆಯಾಗುತ್ತಿತ್ತು.
ಇದೀಗ ಆರ್‌ಬಿಐ ಚಿನ್ನದ ಆಮದು ಮೇಲೆ ಹೇರಿದ್ದ ನಿಯಮಗಳನ್ನು ಸಡಿಲಿಕೆ ಮಾಡಿದ್ದರಿಂದಾಗಿ ಬೆಲೆಯಲ್ಲಿ ಒಂದೇ ದಿನ 800 ರು. ಇಳಿಕೆಯಾಗಿದೆ. ಅಲ್ಲದೆ, ಖಾಸಗಿ ಸಂಸ್ಥೆಗಳಿಗೂ ಚಿನ್ನದ ಆಮದಿಗೆ ಅವಕಾಶ ಕಲ್ಪಿಸಿದೆ. ಇದರಿಂದಾಗಿಯೇ ಈ ಬೆಲೆ ಇಳಿಕೆ ಉಂಟಾಗಿದೆ. ಈ ಕ್ರಮದಿಂದಾಗಿ ಚಿನ್ನಾಭರಣ ಉದ್ಯಮಕ್ಕೆ ಉತ್ತೇಜನ ನೀಡಲಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಚಿನ್ನದ ಪೂರೈಕೆಯಾಗಲಿದೆ.
ಯಾಕೆ ಈ ನಿರ್ಧಾರ?
 ಸಿಎಡಿ ನಿಯಂತ್ರಣಕ್ಕೆ ಬಂದಿದೆ.
 ವಿದೇಶಿ ವಿನಿಮಯ ಸಂಗ್ರಹದಲ್ಲಿ ಹೆಚ್ಚಳ.
 ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ಸ್ಥಿರತೆ.

ಪರಿಣಾಮ ಏನಾಗಬಹುದು?
    ಚಿನ್ನದ ಆಮದು ಪ್ರತಿ ತಿಂಗಳಿಗೆ ಸರಾಸರಿ 10-15 ಟನ್ ಹೆಚ್ಚಳ.
    ಇದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ
    ಕರ್ನಾಟಕವೂ ಸೇರಿದಂತೆ ದೇಶದ ಎಲ್ಲಡೆ ಇರುವ ಚಿನ್ನಾಭರಣ ಪ್ರಿಯರು ಹೆಚ್ಚು ವೆಚ್ಚವಿಲ್ಲದೆ ಆಭರಣ ಖರೀದಿಯಲ್ಲಿ ತೊಡಗಬಹುದು.
    ಚಿನ್ನದ ಕಳ್ಳ ಸಾಗಣೆಗೆ ಹಿನ್ನಡೆ.
    ಚಿನ್ನಾಭರಣ ತಯಾರಿಕಾ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಹಣಕಾಸು ಸಂಸ್ಥೆಗಳಿಂದ ಸುಲಭ ಸಾಲ ಸಿಗುವಂತಾಗಬಹುದು.



ದೀಪಾವಳಿಗೆ 23,000 ರು.?
ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್ ಪ್ರಕಾರ, ಈ ಇಳಿಕೆ ಮತ್ತೂ ಮುಂದುವರಿಯಲಿದೆ. ಈ ವರ್ಷದ ದೀಪಾವಳಿ ವೇಳೆಗೆ ಪ್ರತಿ 10 ಗ್ರಾಮ್ ಚಿನ್ನಕ್ಕೆ 24-23 ಸಾವಿರ ರು. ವರೆಗೆ ಇಳಿಕೆಯಾಗಬಹುದು. ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕದಲ್ಲೂ ಶೇ.4-5ರ ಪ್ರಮಾಣದಲ್ಲೂ ಇಳಿಕೆಯಾದರೆ ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ ವರ್ಷದ ನವೆಂಬರ್- ಡಿಸೆಂಬರ್‌ನಲ್ಲಿ ಮದುವೆ ಮುಂತಾದ ಶುಭ ಸಮಾರಂಭಗಳನ್ನು ಹಮ್ಮಿಕೊಳ್ಳುವವರಿಗೆ ನಿಜಕ್ಕೂ ಇದು ಶುಭ ಸೂಚನೆಯೇ. ಅಂದಹಾಗೆ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದ ಮಾತು 'ಇನ್ನು ಒಳ್ಳೆಯ ಕಾಲ ಬರಲಿದೆ' ಎನ್ನುವುದಕ್ಕೆ ಶುಭ ಸೂಚನೆಯೂ ಹೌದು.

- ಜಯಗೌರಿ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.