ಸಿಂಪಲ್ ಬ್ಯಾಂಕ್

ಯಾರಿಗಾದರೂ ಬ್ಯಾಂಕ್ ಖಾತೆಯಿಂದ ಹಣ ನೀಡಬೇಕೇ? ಖಾತೆಯಲ್ಲಿ ಹಣ ಎಷ್ಟಿದೆ ಎಂದು ಗೊತ್ತಿಲ್ಲವೇ? ನಿಮಗೆ ಮೊಬೈಲ್ ಬ್ಯಾಂಕ್ ಅಥವಾ ನೆಟ್ ಬ್ಯಾಂಕಿಂಗ್ ತಿಳಿಯದೇ? ಹಾಗಿದ್ದರೆ ನಿಮ್ಮ ಬ್ಯಾಂಕಿನಲ್ಲಿ ಮೊಬೈಲ್ ನಂಬರನ್ನು ರಿಜಿಸ್ಟರ್ ಮಾಡಿಸಿ... ಬ್ಯಾಂಕಿನಿಂದ ಟೋಲ್ ಫ್ರೀ ಟೆಲಿಫೋನ್ ನಂಬರನ್ನು ಪಡೆಯಿರಿ. ನಿಮಗೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸನ್ನು ತಿಳಿಯಬೇಕಾದಾಗಲೆಲ್ಲ ಈ ಟೋಲ್ಫ್ರೀ ನಂಬರಿಗೆ ಮಿಸ್ಡ್ ಕಾಲ್ ಕೊಟ್ಟರೆ... ನಿಮ್ಮ ಮೊಬೈಲ್ ಪರದೆಯ ಮೇಲೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕಾಣುತ್ತದೆ.
ನಿಮ್ಮ ಖಾತೆಯಲ್ಲಿ ವಹಿವಾಟು ಆಗಿದ್ದನ್ನು ತಿಳಿಯಬೇಕೆ? ನಿಮ್ಮ ಖಾತೆಯಿರುವ ಬ್ಯಾಂಕಿನಲ್ಲಿ ಮೊಬೈಲ್ ನಂಬರನ್ನು ಎಸ್ಎಮ್ಎಸ್ ಅಲರ್ಟ್ ಮೆನುಗೆ ರಿಜಿಸ್ಟರ್ ಮಾಡಿಸಿ... ಖಾತೆಗೆ ಹಣ ಜಮಾ ಆದಾಗ ಅಥವಾ
ಖಾತೆಯಿಂದ ಹಣ ತೆಗೆದಾಗ ನಿಮ್ಮ ಮೊಬೈಲ್ ಪರದೆಯಲ್ಲಿ ಮಾಹಿತಿ ಕಾಣುತ್ತದೆ. ಕೆಲವು ಬ್ಯಾಂಕುಗಳಲ್ಲಿ ಈ ವ್ಯವ ಹಾರದ ಕನಿಷ್ಠ ಮೊತ್ತ 2000 ರು.ಗಳಿದ್ದಾಗ ಮಾತ್ರ ಇಂಥ ಮೆಸೇಜ್ ಬರುತ್ತದೆ.
ಕೆಲವು ಬ್ಯಾಂಕುಗಳಲ್ಲಿ ಇಂಥ ನಿರ್ಬಂಧಗಳಿಲ್ಲ. ತೀರಾ ಇತ್ತೀಚಿನವರೆಗೆ ಈ ಸೇವೆ ಉಚಿತವಾಗಿ ಸಿಗುತ್ತಿದ್ದು,
ಈ ತಿಂಗಳಿನಿಂದ ಉಳಿತಾಯ ಖಾತೆಗೆ ವರ್ಷಕ್ಕೆ 60 ಮತ್ತು ಚಾಲ್ತಿ ಖಾತೆಗೆ 100 ರುಪಾಯಿ ಚಾರ್ಜ್ ಮಾಡಲಾಗುತ್ತದೆ. ಸ್ವಲ್ಪ ದುಬಾರಿ ಅನ್ನಿಸಬಹುದು. ಆದರೆ, ಅನುಕೂಲ ಅಪಾರ.
ನೀವು ಯಾರಿಗಾದರೂ ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಅಥವಾ ಒಂದು ನಿರ್ದಿಷ್ಟ ದಿನ, ನಿರ್ದಿಷ್ಟ ಹಣವನ್ನು ಕಳುಹಿಸಬೇಕೇ? ನೀವು ನಿಮ್ಮ ಬ್ಯಾಂಕಿಗೆ, ನಿಮ್ಮ ಖಾತೆಯ ಮತ್ತು ಹಣ ಪಡೆಯುವವರ ಖಾತೆಯ ವಿವರ ಮತ್ತು ಕೊಡಬೇಕಾದ ಹಣವನ್ನು ವಿವರವಾಗಿ ಬರೆದುಕೊಟ್ಟರೆ ಬ್ಯಾಂಕಿನವರು ನಿಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸುತ್ತಾರೆ. ಆದರೆ, ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವಿರಬೇಕು. ಎಲ್ಲಿಯವರೆಗೆ ಈ ವರ್ಗಾವಣೆ ಆಗಬೇಕೆನ್ನುವುದನ್ನು ನಿಖರವಾಗಿ ತಿಳಿಸಿರಬೇಕು.
ನಿಮಗೆ ದೂರವಾಣಿ, ವಾಟರ್, ಕರೆಂಟ್ ಬಿಲ್ ಪಾವತಿ ಮಾಡಲು ಟೈಮಿಲ್ಲವೇ? ಹಾಗಿದ್ದರೆ... ನೀವು ಈ ಇಲಾಖೆಗಳಿಂದ ಇಸಿಎಸ್ ಮ್ಯಾಂಡೇಟ್ ಅರ್ಜಿ ತಂದು ಎಲ್ಲ ವಿವರಗಳನ್ನು ತುಂಬಿ... ನಿಮ್ಮ ಬ್ಯಾಂಕ್ ಮ್ಯಾನೇಜರ್ರ ಸಹಿ ಹಾಕಿಸಿ ಆ ಇಲಾಖೆಗಳಿಗೆ ಕಳಿಸಿಕೊಡಿರಿ. ಇಲಾಖೆಗಳು ತಮಗೆ ಬರಬೇಕಾದ ಬಿಲ್ಲನ್ನು ನಿಮ್ಮ ಬ್ಯಾಂಕಿನ ಮೂಲಕ ಪಡೆದುಕೊಳ್ಳುತ್ತವೆ.
ನಿಮಗೆ ಯಾರಿಗಾದರೂ ಹಣ ಕಳಿಸಬೇಕೇ? ಅವರ ಬ್ಯಾಂಕ್ ಖಾತೆ ನಿಮ್ಮ ಬ್ಯಾಂಕಿನ ಯಾವುದಾದರೂ ಶಾಖೆಯಲ್ಲಿದ್ದರೆ, ನೀವು ನಿಮ್ಮ ಖಾತೆಗೆ ಹಣ ಹಾಕಿದಂತೆ ಈ ಖಾತೆಗಳಿಗೂ ಹಣ ತುಂಬಬಹುದು. ಮೊದಲಿನಂತೆ ಡ್ರಾಫ್ಟ್ ಅಥವಾ ಎಮ್ಟಿ ಕಳಿಸಬೇಕಿಲ್ಲ. ಈ ರೀತಿ ಹಣ ಕಳಿಸುವಾಗ ಕಮಿಷನ್ ಕೂಡಾ ಕಡಿಮೆ.
ನೀವು ಹಣ ಕಳಿಸಬೇಕಾದ ವ್ಯಕ್ತಿಯ ಖಾತೆ ಬೇರೆ ಬ್ಯಾಂಕಿನಲ್ಲಿದ್ದರೆ... ನೇರವಾಗಿ ಅವರ ಖಾತೆಗೆ ಆರ್ಟಿಜಿಎಸ್ (2 ಲಕ್ಷ ಮೊತ್ತದ ಮೇಲೆ) ಅಥವಾ ಎನ್ಇಎಫ್ಟಿ (2 ಲಕ್ಷದವರೆಗೆ) ವ್ಯವಸ್ಥೆಯ ಮೂಲಕ ಕಳಿಸಬಹುದು. ಈ ಸೇವೆಗೆ ಕಮೀಷನ್ ತುಂಬಾ ಕಡಿಮೆ ಮತ್ತು ಅತಿ ಶೀಘ್ರ ಕೂಡಾ.
ಕೆಲವು ಬ್ಯಾಂಕುಗಳು ನಿಮ್ಮ ಮುದ್ದತಿ ಠೇವಣಿಗಳ ಮೇಲೆ ಪರ್ಸನಲ್ ಇನ್ಷೂರೆನ್ಸ್ ಮಾಡಿಸುತ್ತಿದ್ದು, ಖಾತೆ ತೆರೆಯುವಾಗ ತಿಳಿದುಕೊಳ್ಳಿ. ಹಾಗೂ ಖಾತೆ ತೆರೆಯುವಾಗ ನಿಮ್ಮ ಖಾತೆಯಲ್ಲಿ ನಾಮಿನೇಶನ್ ಮಾಡಲು ಮರೆಯದಿರಿ. ಹಾಗೆ ಮಾಡದಿದ್ದರೆ ನಿಮ್ಮ ನಂತರದವರಿಗೆ ಖಾತೆಯಲ್ಲಿನ ಹಣ ಪಡೆಯಲು ದೀರ್ಘ ಸಮಯ ಹಿಡಿಯುತ್ತದೆ.
ಯಾವುದೇ ಕಾರಣಕ್ಕೂ ಖಾಲಿ ಚೆಕ್ನ ಮೇಲೆ ಸಹಿ ಹಾಕಿಡಬೇಡಿ. ಚೆಕ್ಬುಕ್ಕನ್ನು ಭದ್ರವಾಗಿಟ್ಟುಕೊಳ್ಳಿ. ಯಾರಿಗೂ ನಿಮ್ಮ ಬ್ಯಾಂಕ್ ಖಾತೆಯ ನಂಬರನ್ನು ಕೊಡಬೇಡಿ. ಎರಡು ತಿಂಗಳಿಗೊಮ್ಮೆ ನಿಮ್ಮ ಬ್ಯಾಂಕ್ ಪಾಸ್ಬುಕ್ ಅನ್ನು ಅಪ್ಡೇಟ್ ಮಾಡಿಕೊಳ್ಳಿರಿ. ಹೆಚ್ಚು ತಡಮಾಡಿದರೆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಷ್ಟವಾಗುತ್ತದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಶಾಖೆಗಳಲ್ಲಿ ಖಾತೆ ತೆರೆಯಿರಿ. ಇದರಿಂದ ದೇಶಾದ್ಯಂತ ವ್ಯವಹರಿಸಲು ಸುಲಭವಾಗುವದು. ಖಾತೆ ತೆರೆದಾಗ ಎಟಿಎಂ ಕಾರ್ಡ್ ಪಡೆಯಲು ಮರೆಯದಿರಿ. ಈ ಕಾರ್ಡ್ನಿಂದ ನೀವು ಹಣ ತೆಗೆಯಲು ನಿಮ್ಮ ಖಾತೆ ಇರುವ ಶಾಖೆಗೇ ಹೋಗಬೇಕಿಲ್ಲ.
ನಿಮಗೆ ಅನುಕೂಲಕರವಾದ ಯಾವುದೇ ಎಟಿಎಂನಲ್ಲಿ ಹಣ ತೆಗೆಯಬಹುದು. ಬೇರೆ ಬ್ಯಾಂಕಿನ ಎಟಿಎಂನಲ್ಲಿ ಗರಿಷ್ಠ 5 ಬಾರಿ ಹಣ ತೆಗೆಯಬಹುದು. ಆಮೇಲೆ ಪ್ರತಿ ಬಾರಿ ತೆಗೆದಾಗ ಚಾರ್ಜ್ ಆಗುತ್ತದೆ. ಅನಿವಾರ್ಯವಾದಾಗ ಮಾತ್ರ ಬೇರೆ ಬ್ಯಾಂಕಿನ ಎಟಿಎಂ ಬಳಸಿ. ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಎಷ್ಟು ಬಾರಿಯಾದರೂ ಹಣ ತೆಗೆಯಬಹುದು. ಸಾಲ ಬೇಕಿದ್ದರೆ ನಿಮ್ಮ ಖಾತೆ ಇರುವ ಶಾಖೆಯಲ್ಲೇ ಸಾಲವನ್ನು ಕೇಳಿ. ನಿಮ್ಮ ಅರ್ಜಿಯ ಪ್ರೊಸೆಸಿಂಗ್ ಸುಲಭ ಮತ್ತು ಶೀಘ್ರವಾಗುತ್ತದೆ. ಬ್ಯಾಂಕುಗಳು ನೀವು ಕನಿಷ್ಠ 6 ತಿಂಗಳ ಹಳೆಯ ಗ್ರಾಹಕರಿರಬೇಕೆಂದು ಬಯಸುತ್ತದೆ.
-ರಮಾನಂದ ಶರ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


