ಬ್ಯಾಂಕ್ ಬಂದ್?

ಬ್ಯಾಂಕ್ಗಳ ಹರವು ಮತ್ತಷ್ಟು ವಿಸ್ತರಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ಅಭಿಲಾಷೆ. ಅದಕ್ಕೆ ಪೂರಕವಾಗಿ 2010-11ರ ಮುಂಗಡ ಪತ್ರದಲ್ಲಿ ಈ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ ನಿರೀಕ್ಷೆ ಮಾಡಿದಷ್ಟು ಸಂಸ್ಥೆಗಳು ಹೊಸ ಬ್ಯಾಂಕ್ ಸ್ಥಾಪನೆಗೆ ಅರ್ಜಿ ಸಲ್ಲಿಸದಿದ್ದರೂ ಆರ್ಬಿಐಗೆ 26 ಅರ್ಜಿಗಳು ಬಂದಿವೆ. ಪ್ರತಿಯೊಂದು ಅರ್ಜಿಯೂ ಸುಮಾರು 20,000 ಪುಟಗಳಷ್ಟು ವಿಸ್ತೃತವಾಗಿದೆ.
ಹೊಸ ಬ್ಯಾಂಕುಗಳ ಕಲ್ಪನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಅನುಕೂಲ ಮತ್ತು ಲಾಭ ಗಣನೆಗೆ ತೆಗೆದುಕೊಂಡು ರೂಪಿಸಿದ ಮಹತ್ವಾಕಾಂಕ್ಷಿ ಯೋಜನೆ. ಎಲ್ಲ ಬ್ಯಾಂಕುಗಳನ್ನು ವಿಲೀನಗೊಳಿಸಿ ವಿಶ್ವದರ್ಜೆಯ ನಾಲ್ಕಾರು ಬ್ಯಾಂಕುಗಳನ್ನು ಸ್ಥಾಪಿಸಿ ಒಂದೇ ಬ್ಯಾಂಕು ಇನ್ನಿತರ ಬ್ಯಾಂಕುಗಳ ಸಹಾಯವಿಲ್ಲದೆ ಬೃಹತ್ ಕಾರ್ಪೋರೇಟ್ ಹೌಸ್ಗಳ ಸಾವಿರಾರು ಕೋಟಿ ಸಾಲದ ಆವಶ್ಯಕತೆ ಪೂರೈಸುವ ಯೋಜನೆ ಇನ್ನೂ ಡ್ರಾಯಿಂಗ್ ರೂಂ ಬಿಟ್ಟು ಹೊರಬರದಿರುವಾಗ, ಅವರ ಹೊಸ ಬ್ಯಾಂಕ್ ಯೋಜನೆಯೂ ಆಮೆ ವೇಗದಲ್ಲಿ ನಡೆಯುತ್ತಿದೆ.
ಷರತ್ತುಗಳೇನು?
ಹೊಸ ಬ್ಯಾಂಕ್ಗಳ ಸ್ಥಾಪನೆಗೆ ಸರ್ಕಾರ ಕೆಲವು ಕಠಿಣ ಷರತ್ತುಗಳನ್ನು ಹಾಕಿದ್ದು ಅರ್ಜಿ ಹಾಕಿದ ಕೆಲವು ಕಾರ್ಪೋರೇಟ್ ಹೌಸ್ಗಳು ಇವುಗಳನ್ನು ಪಾಲಿಸುವುದು ತುಂಬಾ ಕಷ್ಟ ಎಂದು ಯೋಚಿಸುತ್ತಿವೆ.
ಶೇ. 25ರಷ್ಟು ಶಾಖೆಗಳು 9 ಸಾವಿರಕ್ಕಿಂತ ಕಡಿಮೆ ಸಂಖ್ಯೆ ಇರುವ ಗ್ರಾಮಾಂತರ ಪ್ರದೇಶದಲ್ಲಿರಬೇಕು.
ಶೇ. 40 ರಷ್ಟು ಸಾಲವನ್ನು ಆದ್ಯತಾ (ಹೆಚ್ಚು ಆದಾಯವಿಲ್ಲದ ಮತ್ತು ಕಡಿಮೆ ಬಡ್ಡಿ ದರ) ವಲಯಕ್ಕೆ ನೀಡಬೇಕು.
ಸುಸ್ತಿ ಸಾಲದ ನೀತಿ ನಿಯಮಾವಳಿಯನ್ನು ಮೊದಲ ವರ್ಷದಿಂದಲೇ ಪಾಲಿಸಬೇಕು.
ಈ ಶರತ್ತುಗಳು ಕಾರ್ಪೋರೇಟ್ ಹೌಸ್ಗಳ ಮಹತ್ವಾಕಾಂಕ್ಷೆಗೆ ಅಡೆ-ತಡೆಯಾಗಿದ್ದು ರಸ್ತೆ ಉಬ್ಬುಗಳಂತಾಗಿವೆ. ಹೀಗಾಗಿ ಖಾಸಗಿ ಸಂಸ್ಥೆಗಳು ಅದರಿಂದ ವಿನಾಯಿತಿ ಕೋರಿವೆ. ಇಲ್ಲದಿದ್ದಲ್ಲಿ ನಷ್ಟ ಅನುಭವಿಸುತ್ತಿರುವ ಕೆಲ ಸರ್ಕಾರಿ ಬ್ಯಾಂಕ್ಗಳಂತೆ ನಷ್ಟ ಅನುಭವಿಸುವ ಸಾಧ್ಯತೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿವೆ. ಕೆಲ ಬ್ಯಾಂಕ್ಗಳ ಸ್ಥಿತಿಗತಿ ನೋಡಿದಾಗ ಅರ್ಜಿದಾರರ ಅನಿಸಿಕೆಯಲ್ಲಿ ಹುರುಳಿಲ್ಲದಿಲ್ಲ.
ಆದರೆ ಹೊಸ ಬ್ಯಾಂಕ್ಗಳ ಹಾದಿಯಲ್ಲಿ ಅತಿ ದೊಡ್ಡ ತಡೆ ಎಂದರೆ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ನಿರ್ಣಯ. ಪ್ರಧಾನಿ ಮನಮೋಹನಸಿಂಗ್ ಮತ್ತು ಹಣಕಾಸು ಸಚಿವ ಚಿದಂಬರಂ ಕನಸಿನ ಯೋಜನೆಯನ್ನು ರಾಹುಲ್ಗಾಂಧಿ ಸೇರಿ ಆರು ಜನ ಕಾಂಗ್ರೆಸ್ ಸಂಸದರನ್ನು ಹೊಂದಿರುವ ಬಹುಪಕ್ಷೀಯ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಬಲವಾಗಿ ವಿರೋಧಿಸಿದೆ. ಸುಮಾರು 15, 630 ಶಾಖೆಗಳನ್ನು ಹೊಂದಿರುವ ಖಾಸಗಿ ಬ್ಯಾಂಕ್ಗಳು ಕೇವಲ 2699 ಶಾಖೆಗಳನ್ನು ಮಾತ್ರ ಗ್ರಾಮಾಂತರ ಪ್ರದೇಶದಲ್ಲಿ ತೆಗೆದು ಇವುಗಳ ಗ್ರಾಮಾಂತರ ವ್ಯಾಪ್ತಿ ಶೇ. 17ಕ್ಕೆ ಸೀಮಿತವಾಗಿದೆ ಎನ್ನುವುದನ್ನು ತೋರಿಸಿದ್ದಾರೆ. ಇಂಥಹ ಬ್ಯಾಂಕ್ಗಳಿಂದ ಸರ್ಕಾರದ ಮಹತ್ವಾಕಾಂಕ್ಷಿ ಹಣಕಾಸು ಸೇರ್ಪಡೆ ಆದ್ಯತಾ ಆಧಾರದ ಸಾಲ ವಿತರಣೆ ಯಶಸ್ವಿಯಾಗಬಹುದೇ ಎನ್ನುವ ಸಂದೇಹ ವ್ಯಕ್ತ ಮಾಡಿದ್ದಾರೆ.
12 ಬ್ಯಾಂಕ್ಗಳ ಆರಂಭ
1993 ಮತ್ತು 2001 ನೀತಿ ನಿಯಮಾವಳಿ ಪ್ರಕಾರ ಇದುವರೆಗೆ 12 ಹೊಸ ಬ್ಯಾಂಕ್ಗಳು ಆರಂಭವಾಗಿದೆ. ಆ ಪೈಕಿ ಒಂದನ್ನು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ವಿಲೀನಗೊಳಿಸಲಾಗಿದೆ. ಕೆಟ್ಟ ಆಡಳಿತದಿಂದಾಗಿ ಇನ್ನೆರಡು ಬ್ಯಾಂಕ್ಗಳನ್ನು ಬೇರೆ ಎರಡು ಖಾಸಗಿ ಬ್ಯಾಂಕ್ಗಳ ಸಂಗಡ ಸೇರಿಸಿ ಉಳಿಸಲಾಗಿದೆ. ಈಗ ಉಳಿದಿರುವುದು ಒಂದೋ ಎರಡೋ. ಅವು ಅಂಥ ಸ್ಥಿರತೆಯನ್ನು ತೋರಿಸುತ್ತಿಲ್ಲ. ಬ್ಯಾಂಕ್ ಸ್ಥಾಪನೆಗೆ ನಿಗದಿಪಡಿಸಿರುವ ಕನಿಷ್ಠ ಮೂಲಬಂಡವಾಳವಾದ 1000 ಕೋಟಿ ಈಗ ತೀರಾ ಸಾಮಾನ್ಯವಾಗಿದ್ದು ಸಾಮಾನ್ಯ ಆಟಗಾರನೂ ಕೈ ನೋಡುವಂತಿದೆ. ಬ್ಯಾಂಕಿನಲ್ಲಿರುವ ಹಣ ಸಾರ್ವಜನಿಕ ಹಣವಾಗಿದ್ದು ಸಾರ್ವಜನಿಕರ ಯೋಗಕ್ಷೇವು ನೋಡುವ ಮಹತ್ತರ ಜವಾಬ್ದಾರಿ ಅವುಗಳ ಮೇಲಿದೆ. ಅಂತೆಯೇ ಉದ್ಯಮ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರತ್ಯೇಕ ಇಡಬೇಕೆಂದು ಈ ಸಮಿತಿ ಅಭಿಪ್ರಾಯಪಟ್ಟಿದೆ.
ಕಾರ್ಮಿಕ ಸಂಘಟನೆಗಳ ಮುಷ್ಕರ
ಗ್ರಾಹಕರ ಠೇವಣಿ ಖಾಸಗಿ ಬ್ಯಾಂಕ್ಗಳ ಮೂಲಕ ಕೈ ಎಣಿಕೆಯಷ್ಟು ಉದ್ಯಮಿಗಳ ಸಾಲದ ಹಸಿವನ್ನು ತಣಿಸಬಾರದೆಂದು ಬ್ಯಾಂಕ್ ಕಾರ್ಮಿಕ ಸಂಘಗಳು ಇದನ್ನು ಬಲವಾಗಿ ವಿರೋಧಿಸುತ್ತಿದ್ದು ಈಗಾಗಲೇ ಒಂದೆರಡು ಬಾರಿ ಮುಷ್ಕರ ನಡೆಸಿವೆ. ತಮ್ಮ ಮಾಮೂಲು, ವೇತನ ಪರಿಷ್ಕರಣೆ ಬ್ಯಾಂಕುಗಳ ವಿಲೀನ ಮತ್ತು ಅನುಕಂಪ ಆಧಾರಿತ ಉದ್ಯೋಗ ಮುಂತಾದ ಬೇಡಿಕೆಗಳಿಗಿಂತ ಜೋರಾಗಿ ಹೊಸ ಬ್ಯಾಂಕ್ಗಳ ವಿರುದ್ಧದ ತಮ್ಮ ಹೋರಾಟವನ್ನು ತೀವ್ರಗೊಳಿಸುತ್ತಿದೆ. ಮುಂದಿನ ದಿನದಲ್ಲಿ ಇವು ಇನ್ನೂ ತೀವ್ರವಾಗುವ ಸೂಚನೆ ಇದೆ. ಈ ಎಲ್ಲಾ ಹೊಂಡಗಳು, ಕಲ್ಲುಮುಳ್ಳುಗಳು, ಹಂಪ್ಗಳನ್ನು ದಾಟಿ ಈ ಹೊಸ ಬ್ಯಾಂಕ್ಗಳು ಮುಂದೆ ಸಾಗಬಹುದೇ? ಎನ್ನುವುದು ಬಹು ಈಗ ಚರ್ಚಿತ ವಿಷಯವಾಗಿದೆ.
-ರಮಾನಂದ ಶರ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


