ವಿಷ್ಣು, ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಗಣೇಶನ ಪೂಜೆಯಲ್ಲಿ ಬಳಸಲ್ಲ ಯಾಕೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!
ವಿಷ್ಣು ದೇವರು ಮತ್ತು ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಗಣೇಶ ಪೂಜೆಯಲ್ಲಿ ಎಲ್ಲಿಯೂ ಬಳಸಲ್ಲ. ಇದರ ಕುತೂಹಲಕ್ಕೆ ಕಾರಣವಾದ ಪೌರಾಣಿಕ ಕಥೆಯೊಂದಿದೆ.

ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ನಂತರ ಇದೀಗ ಗೌರಿ- ಗಣೇಶ ಹಬ್ಬಕ್ಕೆ ಜನರು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 14 ರಂದು ಗಣೇಶ ಚತುರ್ಥಿ ಆರಂಭವಾಗಲಿದೆ. ಗಣೇಶ ಮತ್ತು ಆತನ ತಾಯಿ ಗೌರಿಯನ್ನು ಮನೆಯಲ್ಲಿ ಕೂರಿಸಿ ಪೂಜೆ ಮಾಡುವ ಹಬ್ಬವೇ ಗಣೇಶ ಚತುರ್ಥಿಯಾಗಿದೆ.
ಹಿಂದೂ ಶಾಸ್ತ್ರದ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗೌರಿ ಗಣೇಶನನ್ನು ಮನೆಯಲ್ಲಿ ಕೂರಿಸಿದ ನಂತರ ಅವರ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಒಂದೂವರೆ ದಿನ, 3 ದಿನ, 5 ದಿನ, 7 ದಿನ ಅಥವಾ 11 ದಿನಗಳವರೆಗೆ ಮನೆಯಲ್ಲಟ್ಟು ಪೂಜಿಸಿ ನಂತರ ವಿಗ್ರಹವನ್ನು ಗೌರವದಿಂದ ವಿಸರ್ಜಿಸಲಾಗುತ್ತದೆ. ಇದನ್ನೇ ಗಣೇಶ ಚತುರ್ಥಿ ನಿಮಜ್ಜನೆ ಎಂದು ಕರೆಯಲಾಗುತ್ತದೆ.
ಗಣೇಶ ಚತುರ್ಥಿಯಂದು ದೇವಾಲಯಗಳು ಮತ್ತು ಮಂಟಪಗಳಲ್ಲಿ ಸ್ಥಾಪಿಸಲಾದ ಗಣೇಶ ಮೂರ್ತಿಗಳನ್ನು ಸಾಮಾನ್ಯವಾಗಿ ಅನಂತ ಚತುರ್ದಶಿಯಂದು ವಿಸರ್ಜನೆ ಮಾಡಲಾಗುತ್ತದೆ. ತಮ್ಮ ಮನೆಗಳಲ್ಲಿ ಗಣಪತಿ ಬಪ್ಪ ವಿಗ್ರಹಗಳನ್ನು ಸ್ಥಾಪಿಸುವವರು ಸಾಮಾನ್ಯವಾಗಿ ಅನಂತ ಚತುರ್ದಶಿಯ ಮೊದಲು ಗಣೇಶ ವಿಸರ್ಜನೆ ಮಾಡುತ್ತಾರೆ.
ತುಳಸಿಯನ್ನು ಗಣೇಶ ಪೂಜೆಯಲ್ಲಿ ಎಲ್ಲಿಯೂ ಬಳಸಲ್ಲ ಯಾಕೆ?
ಆದರೆ ವಿಷ್ಣು ದೇವರು ಮತ್ತು ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಗಣೇಶ ಪೂಜೆಯಲ್ಲಿ ಎಲ್ಲಿಯೂ ಬಳಸಲ್ಲ. ಇದರ ಕುತೂಹಲಕ್ಕೆ ಕಾರಣವಾದ ಪೌರಾಣಿಕ ಕಥೆಯೊಂದಿದೆ. ಅಂದಹಾಗೆ, ಒಮ್ಮೆ ಗಣೇಶನು ಗಂಗಾ ನದಿಯ ದಡದಲ್ಲಿ ತೀವ್ರ ಧ್ಯಾನದಲ್ಲಿ ಮುಳುಗಿದ್ದನು. ಆಗ ಆ ದಾರಿಯಲ್ಲಿ ಬಂದ ತುಳಸಿ ದೇವಿಯು, ಧ್ಯಾನದಲ್ಲಿದ್ದ ಗಣೇಶನ ಸೌಂದರ್ಯಕ್ಕೆ ಮನಸೋತು, ಆತನನ್ನು ಮದುವೆಯಾಗಲು ಆಸೆಪಟ್ಟಳಂತೆ. ತಕ್ಷಣವೇ, ತುಳಸಿ ತನ್ನ ವಿವಾಹದ ಪ್ರಸ್ತಾಪವನ್ನು ಗಣೇಶನ ಮುಂದಿಟ್ಟಿದ್ದಾಳೆ. ಆದರೆ, ಗಣೇಶನು ಆ ಪ್ರಸ್ತಾಪವನ್ನು ನಿರಾಕರಿಸಿದ್ದು, ತಾನು ಬ್ರಹ್ಮಚಾರಿ, ಮದುವೆಯಾಗುವ ಯೋಚನೆ ಇಲ್ಲವೆಂದೂ ವಿವರಿಸಿದ್ದಾನೆ. ಗಣೇಶನ ಈ ನಿರಾಕರಣೆಯಿಂದ ತುಳಸಿ ದೇವಿಗೆ ಕೋಪ ಬಂತು. ಇಲ್ಲಿಂದಲೇ ಶಾಪದ ಕಥೆ ಶುರುವಾಗುತ್ತದೆ.
ಗಣೇಶನಿಗೆ ತುಳಸಿ ಕೊಟ್ಟ ಶಾಪ: ತನ್ನ ಮದುವೆಯ ಆಸೆಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ತುಳಸಿ ದೇವಿಯು, 'ನಿನಗೆ ಖಂಡಿತವಾಗಿಯೂ ಮದುವೆಯಾಗುತ್ತದೆ' ಎಂದು ಗಣೇಶನಿಗೆ ಶಾಪ ನೀಡಿದಳು. ಇದೇ ಕಾರಣಕ್ಕೆ, ನಂತರದ ದಿನಗಳಲ್ಲಿ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಗಣೇಶನಿಗೆ ರಿದ್ಧಿ ಮತ್ತು ಸಿದ್ಧಿಯರೊಂದಿಗೆ ವಿವಾಹವಾಯಿತು ಎಂದು ಉಲ್ಲೇಖಿಸಲಾಗಿದೆ. ತುಳಸಿಯ ಶಾಪದಿಂದ ಕೋಪಗೊಂಡ ಗಣೇಶನು, 'ನೀನು ಒಬ್ಬ ಅಸುರನನ್ನು ಮದುವೆಯಾಗುವೆ' ಎಂದು ತುಳಸಿಗೆ ಪ್ರತಿಯಾಗಿ ಶಾಪ ಕೊಟ್ಟನು ಎಂದು ಪೌರಾಣಿಕ ಕಥೆಗಳು ಹೇಳುತ್ತವೆ.
ವಿಷ್ಣುವಿನ ಪ್ರೀತಿಪಾತ್ರಳಾಗುವ ವರ ಪಡೆದ ತುಳಸಿ: ಗಣೇಶನ ಶಾಪವನ್ನು ಕೇಳಿದ ನಂತರ, ತುಳಸಿಯು ತನ್ನ ತಪ್ಪನ್ನು ಅರಿತುಕೊಂಡು ಆತನಲ್ಲಿ ಕ್ಷಮೆ ಯಾಚಿಸುತ್ತಾಳೆ. ಆಗ ಮನ ಕರಗಿದ ಗಣೇಶನು, 'ನೀನು ವಿಷ್ಣು ದೇವರ ಪ್ರೀತಿಯನ್ನು ಪಡೆಯುವೆ. ಜಗತ್ತಿನಾದ್ಯಂತ ಪವಿತ್ರ ಸಸ್ಯವಾಗಿ ಪೂಜಿಸಲ್ಪಡುವೆ ಎಂದು ವರವನ್ನು ನೀಡಿದನು. ಇದೇ ಕಾರಣದಿಂದ, ವಿಷ್ಣು ದೇವರು ಮತ್ತು ಕೃಷ್ಣನ ಪೂಜೆಗಳಲ್ಲಿ ತುಳಸಿಗೆ ಬಹಳ ಮುಖ್ಯವಾದ ಸ್ಥಾನವನ್ನು ನೀಡಲಾಗುತ್ತದೆ. ಇಂದಿಗೂ ಆ ಪದ್ಧತಿ ಮುಂದುವರಿದಿದೆ. ಆದರೆ, ಗಣೇಶನ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ.
ಗಣೇಶನಿಗೆ ತುಳಸಿ ಅರ್ಪಿಸುವುದು ನಿಷಿದ್ಧವೇ?: ಬ್ರಹ್ಮವೈವರ್ತ ಪುರಾಣದ ಗಣಪತಿ ಖಂಡದಲ್ಲಿ, ತುಳಸಿ ಮತ್ತು ಗಣೇಶನ ನಡುವಿನ ಶಾಪದ ಬಗ್ಗೆ ಉಲ್ಲೇಖವಿದೆ. ಆದಾಗ್ಯೂ, ಕೆಲವು ಸಂಪ್ರದಾಯಗಳಲ್ಲಿ ಗಣೇಶನ ನಿರ್ದಿಷ್ಟ ರೂಪಗಳಿಗೆ ತುಳಸಿಯನ್ನು ಬಳಸಬಹುದು ಎಂದೂ ಹೇಳಲಾಗುತ್ತದೆ. ಆದ್ದರಿಂದ, ಸಾಮಾನ್ಯ ಗಣಪತಿ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸುವುದನ್ನು ತಪ್ಪಿಸುವುದೇ ವಾಡಿಕೆ. ಗಣೇಶನ ಪೂಜೆಯಲ್ಲಿ ಗರಿಕೆ ಹುಲ್ಲಿಗೆ (Durva grass) ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ವಿನಾಯಕನಿಗೆ ತುಳಸಿ ಅರ್ಪಿಸದಿರಲು ಕಾರಣ?
ಗಣೇಶ ಪೂಜೆಯ ವೇಳೆ ತಪ್ಪಾಗಿ ತುಳಸಿಯನ್ನು ಅರ್ಪಿಸಿದರೆ, ಅದನ್ನು ಗೌರವಯುತವಾಗಿ ತೆಗೆದು, ಗಣೇಶನಲ್ಲಿ ಕ್ಷಮೆ ಕೇಳಿದರೆ ಸಾಕು. ಅರಿಯದೆ ಮಾಡಿದ ತಪ್ಪಿಗೆ ಪಾಪವಿಲ್ಲ. ಆದ್ದರಿಂದ, ಇದರ ಬಗ್ಗೆ ಭಯಪಡದೆ, ಭಕ್ತಿ ಮತ್ತು ಶ್ರದ್ಧೆಯಿಂದ ಗಣಪತಿಯನ್ನು ಪೂಜಿಸುವುದೇ ಶ್ರೇಷ್ಠ ಎನ್ನಲಾಗುತ್ತದೆ.
ಒಟ್ಟಾರೆಯಾಗಿ ಹಿಂದೂ ದೇವರುಗಳಲ್ಲಿ ಗಣೇಶನಿಗೆ ಹೆಚ್ಚಿನ ಮಹತ್ವವಿದ್ದು, ಆತನಿಗೆ ಮೊದಲ ಪೂಜೆ ಸಲ್ಲಿಸುವ ಮೂಲಕ ಪ್ರಥಮ ಪೂಜಿತನಾಗಿ ಪೂಜಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


