ಭಕ್ತಿ-ಜ್ಯೋತಿಷ್ಯ

ಮುರಳಿ ವಾಣಿ

ಮುರಳಿ ವಾಣಿ
Published On :

ಪುರಾಣವೆಂದರೆ ಕಠಿಣ, ಅದು ಕೆಲವರ್ಗದವರಿಗೆ ಮಾತ್ರ ಸೀಮಿತ... ಹೀಗೆ ಏನೇನೋ ಕಲ್ಪನೆಗಳಿಂದಾಗಿ ಅದರೊಳಗಿನ ಸಾರವನ್ನು ಅನುಭವಿಸದೇ ಹಲವರು ದೂರವೇ ಇದ್ದುಬಿಡುತ್ತಾರೆ. ಇಂಥ ಸನ್ನಿವೇಶ ಬದಲಾಗಿ ಪುರಾಣದೊಳಗಿನ ರಸದೌತಣವನ್ನು ಪ್ರತಿಯೊಬ್ಬರೂ ಅನುಭವಿಸುವಂತೆ ಮಾಡಲು ಅಲ್ಲೊಬ್ಬರು, ಇಲ್ಲೊಬ್ಬರು ಪ್ರಯತ್ನಿಸುತ್ತಲೇ ಇರುತ್ತಾರೆ. ಅಂಥವರಲ್ಲಿ ಅ. ಮುರಳೀಧರ ಅವರೂ ಒಬ್ಬರು.
ಬೆಂಗಳೂರಿನ ಎಂಪಿಎಂ ಕಾಗದ ಕಾರ್ಖಾನೆ ಕೇಂದ್ರ ಕಚೇರಿಯ ಹಣಕಾಸು ಇಲಾಖೆಯಲ್ಲಿ ಗುಮಾಸ್ತರಾಗಿರುವ ಮುರಳೀಧರ ಪ್ರಾರಂಭದ ದಿನಗಳಿಂದಲೂ ಆರೆಸ್ಸೆಸ್, ವಿಹಿಂಪದಂಥ ಸಂಘಟನೆಯಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾದವರು.
ಪದ್ಯರಚನೆ
ಈ ಅವಧಿಯಲ್ಲಿ ಹಿರಿಯ ಆಚಾರ್ಯರಿಂದ ಭಾಗವತ ಪ್ರವಚನ ಕೇಳಿದ ಇವರು, ಇದನ್ನು ಇನ್ನಷ್ಟು ಸರಳಗೊಳಿಸಿ, ಸಾಮಾನ್ಯರಿಗೂ ಮುಟ್ಟಿಸಬೇಕೆಂದು ಸಂಕಲ್ಪ ಮಾಡಿದರು. ಹೀಗಾಗಿ ಸ್ವತಃ ಭಾಗವತವನ್ನು ಅಧ್ಯಯನಿಸಿ, ಅದರ 12 ಸ್ಕಂದದ ಸಾರವಾಗಿ ಏಳು ಪದ್ಯ, ಅದಕ್ಕೆ ಸಂಬಂಧಿಸಿದ ಕತೆಯನ್ನು ಸರಳವಾಗಿ ರಚಿಸಿರುವುದು ಮಾತ್ರವಲ್ಲದೆ, ಇದೀಗ ತಮ್ಮನ್ನು ಭಾಗವತ ಪ್ರವಚನದಲ್ಲೂ ತೊಡಗಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಹುಟ್ಟಿ ಅಲ್ಲೇ ವೃತ್ತಿ ಜೀವನವನ್ನು ಪ್ರಾರಂಭಿಸಿದ ಮುರಳೀಧರ, 2009ರಲ್ಲಿ ಸರಳ ಶೈಲಿಯಲ್ಲಿ ಭಾಗವತ ಪ್ರವಚನ ಮಾಡಲು ಪ್ರಾರಂಭಿಸಿದರು. ಭದ್ರಾವತಿಯ ರಮೇಶ್ ಎಂಬವರ ಮನೆಯಲ್ಲಿ ಪ್ರಥಮ ಪ್ರವಚನ ಮಾಡಿ, ಪ್ರಸ್ತುತ 50ನೇ ವಯಸ್ಸಿನಲ್ಲಿ 15 ಪ್ರವಚನ ಮಾಡಿ ಮುಗಿಸಿದ್ದಾರೆ. ಇನ್ನಷ್ಟು ಪ್ರವಚನ ಮಾಡಲು ಉತ್ಸುಕರಾಗಿದ್ದಾರೆ.
ರಾಮಾಯಣ, ಇಂದಿನ ಸಾಮಾಜಿಕ, ಪ್ರಾಕೃತಿಕ ಸನ್ನಿವೇಶಗಳಿಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಗೀತೆಯನ್ನು ಬರೆದು, ಹಾಡಿ ಸಾಹಿತ್ಯದ ಒಲವು ಬೆಳೆಸಿಕೊಂಡಿದ್ದ ಇವರಿಗೆ ಪ್ರವಚನ ಮಾಡುವುದು ಅಷ್ಟೇನೂ ಕಷ್ಟವೆನಿಸಲಿಲ್ಲ.
ಮಳಖೇಡ ಜಯತೀರ್ಥ ಮಠದಲ್ಲಿನ ತಮ್ಮ ಗುರುಗಳಿಂದ ಶ್ರೀಹರೀಶವಿಠಲ ಎಂಬ ಅಂಕಿತನಾಮ ಪಡೆದು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು ಮಾತ್ರವಲ್ಲದೆ ಬೆಂಗಳೂರಿಗೆ ಬಂದು ವರ್ಷವಾಗುವುದರೊಳಗೆ ಹತ್ತಾರು ಪ್ರವಚನ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಹೇಗಿದೆ ಪ್ರವಚನ?
ಎಲ್ಲರಿಗೂ ಭಾಗವತವನ್ನು ಮುಟ್ಟಿಸುವ ಗುರಿ ಹೊಂದಿರುವ ಇವರದ್ದು ಸರಳ ಶೈಲಿಯ ಪ್ರವಚನ. 1 ಗಂಟೆ, ಅರ್ಧದಿನ, 7 ದಿನ ಹೀಗೆ ಕೇಳುಗರ ಅಪೇಕ್ಷೆಯಂತೆ ಅವರೆದುರಿಗೆ ಭಾಗವತದ ಸಾರವನ್ನು ಬಿಚ್ಚಿಡುತ್ತಾರೆ. ಮನೆಮನೆಗೆ ಹೋಗಿ ಪ್ರವಚನ ಮಾಡುವುದರೊಂದಿಗೆ ದೇವಸ್ಥಾನಗಳಲ್ಲೂ ಪ್ರವಚನಕ್ಕೆ ಸಿದ್ಧ.
ಮುಂದಿನ ಯೋಜನೆಗಳು
ಭಾಗವತವನ್ನು ಸಾರುವುದಕ್ಕಾಗಿಯೇ ಒಂದು ಯುವ ತಂಡ ಕಟ್ಟಿ, ಅಧ್ಯಾತ್ಮ ಪ್ರಚಾರವನ್ನು ಇನ್ನಷ್ಟು ಚುರುಕುಗೊಳಿಸುವುದು ಇವರ ಮುಂದಿನ ಪ್ರಮುಖ ಯೋಜನೆಗಳಲ್ಲೊಂದು. ಮಹಾಭಾರತ ತಾತ್ಪರ್ಯ ನಿರ್ಣಯ, ತಮ್ಮ ಮನೆದೇವರಾದ ಶ್ರೀನಿವಾಸ ಸೇರಿದಂತೆ ಹಲವು ದೇವರ ಕುರಿತು ತಮ್ಮದೇ ಶೈಲಿಯ ಪದ್ಯರಚನೆ ಮಾಡುವ ಯೊಜನೆಯನ್ನೂ ಇಟ್ಟುಕೊಂಡಿದ್ದಾರೆ.
ಒತ್ತಡದ ಕಾರ್ಯಚಟುವಟಿಕೆಗಳಿಂದ ಮನಶ್ಶಾಂತಿ ದೂರವಾಗಿರುವ ಇಂದಿನ ಕಾಲದಲ್ಲಿ ಒಂದಿಷ್ಟು ಹೊತ್ತು ಧಾರ್ಮಿಕ ವಾತಾವರಣದಲ್ಲಿ ಮುಳುಗೇಳಲು ಮತ್ತು ಮುರಳೀಧರ ಅವರನ್ನು ಪ್ರೋತ್ಸಾಹಿಸಲು ಸಂಪರ್ಕಿಸಿ ಮೊ. 9141740295.


-ಸುಧೀಂದ್ರ ಜಮ್ಮಟಿಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.