ಲೋಕ ಡೊಂಕಲ್ಲ!
'ಡಾಕ್ಟ್ರೇ, ನನಗೆ ಬೆರಳಲ್ಲಿ ದೇಹದ ಯಾವಭಾಗ ಒತ್ತಿದರೂ ವಿಪರೀತ ನೋವಾಗುತ್ತದೆ' ಎಂದು ಒಬ್ಬ ವ್ಯಕ್ತಿ ಡಾಕ್ಟರ್ ಬಳಿ ಹೇಳಿದ. ವೈದ್ಯರು ಅವನ ದೇಹವನ್ನೆಲ್ಲಾ ಪರೀಕ್ಷಿಸಿದರು....

'ಡಾಕ್ಟ್ರೇ, ನನಗೆ ಬೆರಳಲ್ಲಿ ದೇಹದ ಯಾವಭಾಗ ಒತ್ತಿದರೂ ವಿಪರೀತ ನೋವಾಗುತ್ತದೆ' ಎಂದು ಒಬ್ಬ ವ್ಯಕ್ತಿ ಡಾಕ್ಟರ್ ಬಳಿ ಹೇಳಿದ. ವೈದ್ಯರು ಅವನ ದೇಹವನ್ನೆಲ್ಲಾ ಪರೀಕ್ಷಿಸಿದರು. ಎಲ್ಲಿಯೂ ಯಾವ ಸಮಸ್ಯೆಯೂ ಕಾಣಲಿಲ್ಲ. ಆದರೆ ಹೆಬ್ಬೆರಳಿನ ತುದಿಯಿಂದ ಒತ್ತಿದಾಗ ನೋವೆನ್ನುತ್ತಿದ್ದಾನೆ!
ದೇಹವನ್ನೆಲ್ಲ ಹುಡುಕಾಡಿದ ವೈದ್ಯರು ಕೊನೆಗೂ ಸಮಸ್ಯೆಯ ಮೂಲ ಕಂಡುಹಿಡಿದರು. ವ್ಯಕ್ತಿ ಯಾವ ಬೆರಳಿನಿಂದ ಒತ್ತಿದಾಗ ನೋವು ಎನ್ನುತ್ತಿದ್ದನೋ, ಆ ಬೆರಳಿನ ತುದಿಯಲ್ಲಿ ಒಂದು ಹುಣ್ಣಾಗಿತ್ತು! ಹೀಗಾಗಿ ಅದರಿಂದ ಎಲ್ಲಿ ಒತ್ತಿದರೂ ನೋವು ಕಾಣಿಸುತ್ತಿತ್ತು.!
ನಮ್ಮ ಜೀವನದಲ್ಲಿಯೂ ಹೀಗೆಯೇ. ಸಮಸ್ಯೆಯ ಮೂಲ ನಮ್ಮಲ್ಲಿಯೇ ಇದ್ದರೂ ಬೇರೆಯವರಲ್ಲಿ ತಪ್ಪು ಹುಡುಕುತ್ತಿರುತ್ತೇವೆ. 'ಅವರು ವ್ಯಂಗ್ಯವಾಗಿ ಮಾತನಾಡುತ್ತಾರೆ', 'ಅವರಿಗೆ ನನ್ನನ್ನು ಕಂಡರೆ ಆಗುವುದಿಲ್ಲ', 'ಅವರಿಗೆ ಹೊಟ್ಟೆ ಕಿಚ್ಚು'... ಹೀಗೆ ಹತ್ತು ಹಲವು ಥರದ ಋಣಾತ್ಮಕ ಆಲೋಚನೆಯಿಂದ ಬೇರೆಯವರನ್ನು ನೋಡಿದಾಗ, ಅವರದೇ ತಪ್ಪು, ನನ್ನದು ಮಾತ್ರ ಸರಿ ಎಂಬ ಭಾವ ಮನಸ್ಸನ್ನು ಕಾಡುತ್ತದೆ.
ನಮ್ಮಲ್ಲಿಯೇ ಇರುವ ಋಣಾತ್ಮಕ ವಿಚಾರಗಳನ್ನು ಸರಿಪಡಿಸಿಕೊಂಡರೆ, ಇನ್ನೊಬ್ಬರು ಸರಿಯಾಗಿ ಕಾಣಿಸತೊಡಗುತ್ತಾರೆ. 'ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯಾ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ' ಎಂಬ ಬಸವಣ್ಣನವರ ವಚನದ ಸಾಲಿನಂತೆ, ನಮ್ಮ ಡೊಂಕನ್ನು ತಿದ್ದಿಕೊಂಡರೆ ಲೋಕ ನೇರವಾಗಿ ಗೋಚರಿಸುತ್ತದೆ.
ತಪ್ಪುನಿನಿತುಂ ಸೈಸದ ಅಪ್ಪಣದ ಗುಣಶಾಲಿ ಕಪ್ಪು ಕಂಡು ಕನಲ್ವ ಗುಲಗಂಜಿ ಉಪ್ಪೋ ಸಪ್ಪೆಯೋ ನಿನ್ನ ಮೈಬೆವರ ನೆಕ್ಕಿ ನೀ ತಿಳಿ ಒಪ್ಪಿಹೆಯ ನೀನಜನ ಮಂಕುತಿಮ್ಮ... ಹೀಗೆನ್ನುತ್ತಾರೆ ಡಿವಿಜಿ.
ತಪ್ಪನ್ನು ಸ್ವಲ್ಪವೂ ಸಹಿಸೆನು ಎನ್ನುವವರ ಮನಸ್ಥಿತಿ, ತನ್ನ ಮೈಯಲ್ಲೇ ಕಪ್ಪಿರಿಸಿಕೊಂಡು, ಕಪ್ಪನ್ನು ಕಂಡರೆ ಕೋಪಿಸುವ ಗುಲಗಂಜಿಯಂತೆ, ಪ್ರತಿಯೊಬ್ಬರ ಮೈಯ ಬೆವರೂ ಉಪ್ಪೇ! ತಾನು ತಪ್ಪೇ ಮಾಡುವವನಲ್ಲ ಎಂದರೆ ತನ್ನ ಮೈ ಬೆವರನ್ನು ಸಪ್ಪೆ ಎಂದು ಸಾಧಿಸ ಹೊರಟಂತೆ ಎನ್ನುವುದು ಇದರ ಸಾರ.
ಹೀಗಾಗಿಯೇ ನಮ್ಮಲ್ಲಿಯೇ ಇರುವ ಸಮಸ್ಯೆಯ ಮೂಲವನ್ನು ಹುಡುಕಿ ಪರಿಹರಿಸಿಕೊಂಡು ಸಮಾಜದಲ್ಲಿ ಬದುಕುವುದು ಸೂಕ್ತ. ಬೇರೆಯವರನ್ನು ಬದಲಿಸಲು ಹೊರಡುವ ಮೊದಲು ನಾವು ಬದಲಾಗಬೇಕು. ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿಯಾಗಿ ಕಾಣುತ್ತದೆ. ನಮ್ಮ ನೋಟ ನೇರವಾಗಿದ್ದಾಗ ಲೋಕ ಸಹಜಲಾಗಿ ನೇರವೆನಿಸುತ್ತದೆ. ಕವಿ ಎಸ್.ವಿ.ಪಿ. ಅವರು ಹೀಗೆನ್ನುತ್ತಾರೆ, 'ಪರರ ತಪ್ಪನೊಂದನು ಜನರು ಟೀಕಿಪರಲ್ತೆ ತಮ್ಮ ಸಾವಿರ ತಪ್ಪು ಮರೆತು. ನಿನ್ನ ಬಾಲದೊಳದೊಂದು ತೂತಿಹುದೆಂದಂತೆ ಸಾರಣೆ ಸೂಜಿಯ ಕುರಿತು.'
ಇನ್ನೊಬ್ಬರಲ್ಲಿ ದೊಷ ಹುಡುಕುವಾಗ ನಮ್ಮ ಸಾವಿರ ತಪ್ಪುಗಳು ಕಣ್ಣಿಗೆ ಕಾಣಿಸುವುದೇ ಇಲ್ಲ. ನಮ್ಮ ಚಿಕ್ಕ ಚಿಕ್ಕ ಕೆಲಸಗಳನ್ನೂ ದೊಡ್ಡ ಸಾಧನೆ ಎಂಬಂತೆ ಸಾರಿ ಹೇಳಲು ಸದಾ ಸಿದ್ಧವಿರುವ ಬಾಯಿ ಬೇರೆಯವರ ದೊಡ್ಡ ಸಾಧನೆಯನ್ನು ಹೇಳಲು ಇಚ್ಛಿಸುವುದಿಲ್ಲ. ಇನ್ನೊಬ್ಬರ ಸಾಧನೆಯನ್ನು ಗುರುತಿಸುವ ಹೃದಯ ವೈಶಾಲ್ಯತೆ ಉಳ್ಳವರು ತಮ್ಮ ಸಮಸ್ಯೆಯ ಮೂಲವನ್ನು ಪ್ರಮಾಣಿಕವಾಗಿ ಗುರುತಿಸಿಕೊಂಡು ಸರಿಪಡಿಸಿಕೊಳ್ಳಲು ಖಂಡಿತಾ ಹಿಂಜರಿಯರು.
- ಎಚ್.ಎಸ್. ನವೀನ್‌ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


