ಭಕ್ತಿ-ಜ್ಯೋತಿಷ್ಯ

ಓಡುವ ಮನಸ್ಸೇ...

ಮನಸ್ಸು ಚಂಚಲ. ಪಾದರಸದಂತೆ ಅದು ಹರಿದಾಡುತ್ತಿರುತ್ತದೆ. ಒಳ್ಳೆಯದು, ಕೆಟ್ಟದ್ದು ಎಂಬುದರ ಪರಿವೆಯೇ ಇಲ್ಲದೆ ಯೋಚಿಸುತ್ತದೆ...

ಓಡುವ ಮನಸ್ಸೇ...
Published On :

ಮನಸ್ಸು ಚಂಚಲ. ಪಾದರಸದಂತೆ ಅದು ಹರಿದಾಡುತ್ತಿರುತ್ತದೆ. ಒಳ್ಳೆಯದು, ಕೆಟ್ಟದ್ದು ಎಂಬುದರ ಪರಿವೆಯೇ ಇಲ್ಲದೆ ಯೋಚಿಸುತ್ತದೆ. ದೇಹದೊಳಗೆ ಮನಸ್ಸಿದೆ ಎಂದು ತಿಳಿಯಲಾಗಿದ್ದರೂ, ದೇಹದ ಜೊತೆ ಬದುಕುವ ಅಭ್ಯಾಸ ಅದಕ್ಕಿಲ್ಲ. ಅದಕ್ಕಾಗಿಯೇ ಮನಸ್ಸನ್ನು ಮರ್ಕಟಕ್ಕೆ ಹೋಲಿಸಲಾಗಿದೆ. ಮನಸ್ಸನ್ನು ಕುದುರೆಗೂ ಹೋಲಿಸಲಾಗಿದೆ. ಕುದುರೆಯೂ ಒಂದೆಡೆ ಸುಮ್ಮನೆ ಇರಲಾರದು. ಲಗಾಮು ಬಿಟ್ಟರೆ ಕುದುರೆ ಕೈಗೆ ಸಿಗದಂತೆ ಓಡುತ್ತದೆ.

ಇಲ್ಲಿ ಮಾತನಾಡುತ್ತಾ ನಿಂತಿದ್ದರೂ, ಕುಳಿತಿದ್ದರೂ ಮನಸ್ಸು ಮತ್ತೆಲ್ಲೋ ಹರಿದಾಡುತ್ತಿರುತ್ತದೆ. ದೇಹ ಮಾಡುವ ಚಟುವಟಿಕೆಗಳಿಗೆ ವಿರೋಧಾಭಾಸವೆಂಬಂತೆ ಮನಸ್ಸು ಯೋಚಿಸುತ್ತದೆ. ಆತ್ಮಲಿಂಗ ಕೇಳಲು ಬಂದ ರಾವಣನಿಗೆ ಜಗನ್ಮಾತೆ ಪಾರ್ವತಿಯನ್ನು ಕೇಳುವಂತೆ ಮಾಡಿದ್ದು; 'ನನಗೆ ಒಳ್ಳೆಯದು ಯಾವುದೆಂದು ಗೊತ್ತು, ಅದನ್ನು ಆಚರಿಸಲಾರೆ. ಕೆಟ್ಟದ್ದು ಯಾವುದೆಂದೂ ಗೊತ್ತು, ಅದನ್ನೂ ಬಿಡಲಾರೆ' ಎಂದು ದುರ್ಯೋದನನ ಬಾಯಿಂದ ನುಡಿಸಿದ್ದು ಇದೇ ಹುಚ್ಚುಕೋಡಿ ಮನಸ್ಸು.

ಮನಸ್ಸು ಮಲಿನವಾಗದಂತೆ ಕಾಯ್ದುಕೊಳ್ಳುವುದು ತುಂಬಾ ಪ್ರಯಾಸದ ಕೆಲಸ. ದೇಹ ಮನಸ್ಸು ಒಟ್ಟಾಗಿ ಇರಲು ಸಾಧು, ಸಂತರು ಅನಂತಕಾಲದಿಂದ ಧ್ಯಾನ, ಯೋಗ, ಕರ್ಮ, ಜ್ಞಾನ, ಪೂಜೆ, ಸಮಾಧಿ ಇತ್ಯಾದಿಯಾಗಿ ಹತ್ತು ಹಲವು ಪ್ರಯತ್ನಗಳು ನಡೆಸಿದ್ದಾರೆ. ಇನ್ನೂ ನಡೆಯುತ್ತಲಿವೆ. ಮನಸ್ಸನ್ನು ಸದಾ ನಿಯಂತ್ರಣದಲ್ಲಿರಿಸಿಕೊಂಡವರನ್ನು ಮಹಾತ್ಮರೆಂದು ಕರೆಯಲಾಗುತ್ತದೆ. ದೇಹದೊಂದಿಗೆ ಮನಸ್ಸೂ ಇರುವಂತೆ ಸಾಧಿಸಿದವ ಸೋಲಿಲ್ಲದ ಸರದಾರನಾಗುತ್ತಾನೆ.

ಹೆಚ್ಚಿನ ಜನರು ಅದರಲ್ಲೂ ಯುವಕರು ತಾವಿರುವ ಕಡೆ ಮನಸ್ಸನ್ನು ಹಿಡಿದಿಟ್ಟುಕೊಳ್ಳದೇ ಸದಾ ಬೇರೆಯದನ್ನೇ ಯೋಚಿಸುತ್ತಾರೆ. ಆಂಗ್ಲ ಗಾದೆಯಂತೆ 'ಗಿಡಗಂಟಿಯಲ್ಲಿರುವ ಎರಡು ಹಕ್ಕಿಗಳಿಗಿಂತ ಕೈಯಲ್ಲಿರುವ ಒಂದು ಹಕ್ಕಿ ಲೇಸು' ಎಂಬ ಮಾತಿನಂತೆ ಯಶಸ್ಸನ್ನು ಸಾಧಿಸ ಬಯಸುವವನು ತಾನು ಇರುವ ಕಡೆ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ ಶತ ಪ್ರತಿಶತ ಪೂರ್ಣಪ್ರಮಾಣದಲ್ಲಿರುತ್ತಾನೆ.

ಅಲ್ಲಿ ನಡೆಯುವ ಪ್ರತಿ ನಿಮಿಷದ ಆಗುಹೋಗುಗಳಿಗೆ ಸರಿಯಾಗಿ ಸ್ಪಂದಿಸುತ್ತಾನೆ. ಲೌಕಿಕದ ಈ ಘಟನೆಯಂತೆ ಅಲೌಕಿಕ ಚಿಂತನೆಯಲ್ಲೂ ದೇವರ ಸಾಮೀಪ್ಯದಲ್ಲಿ ಪೂರ್ಣ ಪ್ರಮಾಣದಲ್ಲಿದ್ದವರಿಗೆ ದೇವ ತಾ ಒಲಿಯುತ್ತಾನೆ ಎಂಬ ಸಂದೇಶವಿದೆ.

'ನಂಬರು ನಚ್ಚರು ಬರಿದೇ ಕರೆವರು, ನಂಬಲರಿಯರೀ ಲೋಕದ ಮನುಜರು ನಂಬಿ ಕರೆದಡೆ ಓ ಎನ್ನನ್ನೇ ಶಿವನು ನಂಬದೆ ನಚ್ಚದೇ ಬರಿದೆ ಕರೆವರ ಕೊಂಬ ಮೆಟ್ಟಿಕೂಗೆಂದ ಕೂಡಲಸಂಗಮದೇವ' ಎಂಬ ಬಸವಣ್ಣನವರ ವಚನದಲ್ಲಿ ದೇವರನ್ನು ಒಲಿಸಿಕೊಳ್ಳಲು ಪೂರ್ಣ ಮನಸ್ಸನ್ನು ದೇವರಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವಿದೆ.

ಮಾಡಬೇಕಾದ ಕಾಯಕ ಅಥವಾ ಪೂಜೆಯನ್ನು ತನುಮನಧನಗಳಿಂದ ಮಾಡಬೇಕು. ಆಗ ಕಾಯಕ ಕೈಲಾಸವಾಗುತ್ತದೆಂಬ ಸಂದೇಶವಿದೆ. ನಾವು ಮಾಡುವ ಕೆಲಸವನ್ನು ಪ್ರೀತಿ- ಶ್ರದ್ಧೆಯಿಂದ ಮಾಡಿದಾಗ ಪರಿಣಾಮ ರಚನಾತ್ಮಕವಾಗಿರುತ್ತದೆ. ಇಲ್ಲದಿದ್ದಲ್ಲಿ ಬೇವು ಬಿತ್ತಿ ಬೆಲ್ಲಕ್ಕೆ ಆಸೆ ಪಟ್ಟಂತಾಗುತ್ತದೆ. ಲೌಕಿಕ ಇರಲಿ, ಪಾರಮಾರ್ಥಿಕವಿರಲಿ... ಮಾಡುವ ಕೆಲಸದಲ್ಲಿ ಮನಃ ಪೂರ್ತಿ ತೊಡಗಿಸಿಕೊಳ್ಳಲು ವ್ಯಾಯಾಮ, ಯೋಗ, ಸತ್ಸಂಗ, ಉತ್ತಮ ಗ್ರಂಥಗಳ ಪಠಣ, ಧ್ಯಾನಗಳಂಥ ಸಾಧನಗಳನ್ನು ಬಳಸಿಕೊಳ್ಳಬೇಕು. ನೋಡುವ, ಕೇಳುವ, ಅರಿತುಕೊಳ್ಳುವ ಮೂಲಕ ಮನಸ್ಸನ್ನು ಪಳಗಿಸಬೇಕು. ಆಗ ಮಾತ್ರ ಕೆಲಸ  ಕಲ್ಯಾಣಕಾರಿಯಾಗುತ್ತದೆ.

- ಮಹಾದೇವಯ್ಯ ಕರದಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.