ಶೇಷಜ್ಜನ ಪುರಾಣ
ನೋಡು, ತಾತ ಅಜ್ಜ ಎಂದೆಲ್ಲ ಕರೀಬೇಡ. ನಂಗೆ ಎಪ್ಪತ್ಮೂರಾದ್ರೇನೀಗ? ಇತ್ತೀಚೆಗೆ ಸರಾಸರಿ ಆಯಸ್ಸು ಜಾಸ್ತಿಯಾಗಿದೆ ಎಂದು ಗೊತ್ತಲ್ಲವೇ...

ನೋಡು, ತಾತ ಅಜ್ಜ ಎಂದೆಲ್ಲ ಕರೀಬೇಡ. ನಂಗೆ ಎಪ್ಪತ್ಮೂರಾದ್ರೇನೀಗ? ಇತ್ತೀಚೆಗೆ ಸರಾಸರಿ ಆಯಸ್ಸು ಜಾಸ್ತಿಯಾಗಿದೆ ಎಂದು ಗೊತ್ತಲ್ಲವೇ? ಇದೋ ಈ ಹುಟ್ಟಿದ ಹಲ್ಲಿಂದ್ಲೇ ನಾನಿವತ್ತೂ ಕಬ್ಬು ಸಿಗಿಯೋದು. ಅಂಕಲ್ ಅಂತ ಕರಿ ಎಂದರು ಬೆಳಗ್ಗೆ ನಡಿಗೆಯಲ್ಲಿ ನಮ್ಮ ಶೇಷಜ್ಜ, ಕ್ಷಮಿಸಿ, ಶೇಷು ಅಂಕಲ್! ಅವರೊಂದಿಗೊಂದು ವಾಕ್- ಟಾಕ್ ನಡೆಸಿಯೇ ಬಿಡೋಣ ಎನ್ನಿಸಿತು. ನನ್ನ ಪ್ರಶ್ನೆಗಳಿಗೆ ಚುರುಕಾಗಿಯೇ ಉತ್ತರಿಸಿದರು.
ಈ ಇಳಿವಯಸ್ಸಲ್ಲೂ ಉಲ್ಲಾಸಮಯವಾಗಿರುವ ಗುಟ್ಟೇನು?
ವೃದ್ಧಾಪ್ಯ ಬರಲು ಇನ್ನೂ ಹತ್ತು ವರ್ಷವಿದೆ ಎಂದು ನಾನು ಸದಾ ಭಾವಿಸುವುದು.
ನಿಮಗೆ ಇವತ್ತು ಸ್ವಲ್ಪ ಕೋಪ ಬಂದಿರುವಂತಿದೆಯಲ್ಲಾ?
ನಿಜವೇ. ನಿನ್ನೆಯಷ್ಟೆ ಬ್ಯಾಂಕಿನಿಂದ ಪಿಂಚಣಿ ತಂದೆ. ಇವತ್ತು ಬೆಳಗ್ಗೆ ಪರ್ಸೇ ನಾಪತ್ತೆ. ಮನೆಯಲ್ಲೇ ಮಾಯವಾಗಿದೆ ಮಾತ್ರ.
ಬಿಡಿ ಮತ್ತೆ, ಸಿಕ್ಕೇಸಿಗುತ್ತೆ ಹಾಗಾದ್ರೆ..
ಹಾಗಲ್ಲ ದೊರೆ. ನಮ್ಮನೆ ಸತ್ಯ ನಂಗೇನೇ ಗೊತ್ತಿರೋದು. ಇನ್ನು ಫುಲ್ ತಲಾಷ್ ಆಗಿ ಪ್ರತ್ಯಕ್ಷವಾಗುತ್ತೆ.
ನಿಮ್ಮಿಂದ ವೃದ್ಧರು ಎನ್ನೋಕೆ ಒಂದು ವ್ಯಾಖ್ಯಾನ ನಿರೀಕ್ಷಿಸುತ್ತೇನೆ.
ಧಾರಾಳವಾಗಿ. ಯಾರು ಕೀಟಲೆ ಹುಡುಗರಿಂದ, ಸಂಚಾರ ದಟ್ಟಣೆಯಿಂದ, ಜನಜಂಗುಳಿಯಿಂದ, ವೈದ್ಯರಿಂದಲೂ ಅಂದರೂ ಪರವಾಗಿಲ್ಲ, ತಪ್ಪಿಸಿಕೊಂಡು ಓಡಾಡುತ್ತಾರೋ ಅವರನ್ನು ವೃದ್ಧರೆನ್ನಬಹುದು. ಇದರ ಜೊತೆಗೆ ಯಾವಾಗಲೂ ಎಲ್ಲಿ, ಏನು, ಹೌದೆ, ಯಾಕೆ ಎಂದು ಪ್ರಶ್ನಿಸುವುದೂ ವೃದ್ಧಾಪ್ಯದ ಲಕ್ಷಣಗಳು.
ನಿಮ್ಮ ಅಚ್ಚುಮೆಚ್ಚಿನ ತಾಣ?
ನೀನು ಕಂಡಂತೆ ಈ ಉದ್ಯಾನ. ಇದರ ಪಕ್ಕದಲ್ಲೊಂದು ಲೈಬ್ರರಿ ಇದೆ. ಸೋಮವಾರ, ಎರಡನೇ ಮಂಗಳವಾರ ಬಂತೆಂದರೆ ಬೇಡ ನನ್ನ ಗತಿ. ಆ ದಿನಗಳು ಅದು ಮುಚ್ಚಿರುತ್ತೆ. ಅಂತ ದಿನಗಳಲ್ಲಿ ಬಂದ್ ಆಗಿರುವ ಅಂಗಡಿ ಮುಂಗಟ್ಟುಗಳು ಸ್ವಲ್ಪ ನೆಮ್ಮದಿ ಕೊಡುತ್ತವೆ.
ಮೊಮ್ಮಕ್ಕಳೊಂದಿಗೆ ನೀವು?
ನನ್ನ ಮೊಮ್ಮಗ ಅವಿನಾಶ್‌ಗೆ ನನ್ನ ವಯಸ್ಸು ಹೇಳಿದಾಗಲೆಲ್ಲ ಅವನು, ತಾತ ನೀನು ಎಪ್ಪತ್ಮೂರು ಅಂತೀಯಲ್ಲಾ, ಒಂದರಿಂದ ಎಣಿಸಿದ್ದೀಯಾ ಎಂದು ಪ್ರಶ್ನಿಸುತ್ತಾನೆ. ಆ ಕಾಲದಲ್ಲಿ ರುಪಾಯಿಗೆ ಎರಡು ಸೇರಕ್ಕಿ ಎಂದಾಗ ಪಾಪ, ಅಂಗಡಿಯವ ಎರಡೇ ರುಪಾಯಿಗೆ ಅಷ್ಟೊಂದು ಅಕ್ಕಿ ಮಾರಬೇಕಿತ್ತಾ ಎನ್ನುತ್ತಾನೆ. ನಮ್ಮ ಕಾಲದ ಕತೆಗಳೆಲ್ಲವೂ ಅವನನ್ನು ಚಕಿತಗೊಳಿಸುತ್ತವೆ.
ಅಂದಿನ ಸಿನಿಮಾ ಬಗ್ಗೆ ನಿಮ್ಮ ಅನುಭವ...
ಓ ಬಿಡು ದೊರೆ, ಆ ಖುಷಿ, ಅದರಲ್ಲೂ ಟೆಂಟ್ ಸಿನಿಮಾದಲ್ಲಿ ಕುಳಿತು ಸಿನಿಮಾ ನೋಡೋದ್ರ ಮುಂದೆ ಇವತ್ತಿನ ಐನಾಕ್ಸ್ ಎಲ್ಲ ಏನೂ ಅಲ್ಲ. 'ಮಾಯಾಬಜಾರ್' ಸಿನಿಮಾದಲ್ಲಿ ಮದುವೆ ಊಟ ಬಡಿಸ್ತಿದ್ರು. ನಾನೋ ಹುಡುಗ, ನನಗೆಲ್ಲಿ ಲಡ್ಡು ಉಂಡೆ ಅಂತ ಅತ್ತಿದ್ದೆ!
ಒಂದೆರಡು ಚುಟುಕು ಅಂಕಲ್...
ನನ್ನ ಬೈಸಿಕಲ್ಲಿಗೆ ಒಂದೇ ವೇಗ
ಅದು ನಿಧಾನ!
ನನ್ನ ಮಿತ್ರರು ಗುಟ್ಟು ಕಾಪಾಡುವರು
ಹೇಗೂ ಅವರು ನೆನಪಿನಲ್ಲಿಡರು
ಎಲ್ಲರೂ ನನ್ನ ನಂಬುತಾರೆ
ಯಾಕೆಂದರೆ ನಾನು ಓಡಲಾರೆ..
-ಬಿಂಡಿಗನವಿಲೆ ಭಗವಾನ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


