BRICS 2026: ಬ್ರಿಕ್ಸ್ ಶೃಂಗಸಭೆಗೆ ದೆಹಲಿಗೆ ಬಂದಿಳಿದ ಕ್ಸಿ ಜಿನ್‌ಪಿಂಗ್; ಕುತೂಹಲ ಕೆರಳಿಸಿದ ಭಾರತ-ಚೀನಾ ಮಾತುಕತೆ
ಹಲವು ವರ್ಷಗಳ ರಾಜತಾಂತ್ರಿಕ ಮತ್ತು ಸೇನಾ ಬಿಕ್ಕಟ್ಟಿನ ಬಳಿಕ ಭಾರತ-ಚೀನಾ ಸಂಬಂಧಗಳನ್ನು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ ಕ್ಸಿ ಜಿನ್ ಪಿಂಗ್ ಅವರ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಇಂದು ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದರು. ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಏಳು ವರ್ಷಗಳ ಬಳಿಕ ಭಾರತಕ್ಕೆ ಕ್ಸಿ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಈ ಭೇಟಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಸಂಜೆ 6 ಗಂಟೆಗೆ ಸಭೆ ನಿಗದಿಯಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಕ್ಸಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಲಾವಿದರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಚೀನಾ ಅಧ್ಯಕ್ಷರನ್ನು ಬರಮಾಡಿಕೊಂಡರು.
ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಉಂಟಾದ ಸಂಘರ್ಷದಿಂದ ತೀವ್ರ ಹದಗೆಟ್ಟಿದ್ದ ಭಾರತ-ಚೀನಾ ಸಂಬಂಧಗಳನ್ನು ಮತ್ತಷ್ಟು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕ್ಸಿ ಜಿನ್ ಪಿಂಗ್ ಭೇಟಿ ಮಹತ್ವದ ಅವಕಾಶ ಒದಗಿಸಿದೆ ಎಂದು ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ತಿಳಿಸಿವೆ.
ಇತ್ತೀಚಿನ ತಿಂಗಳುಗಳಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಹಲವು ಉನ್ನತ ಮಟ್ಟದ ಮಾತುಕತೆಗಳ ನಂತರ ಷಿ ಅವರ ಭೇಟಿ ನಡೆಯುತ್ತಿದೆ. ಇದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಬೀಜಿಂಗ್‌ನಲ್ಲಿ ಇತ್ತೀಚೆಗೆ ನಡೆಸಿದ ವಿಶೇಷ ಪ್ರತಿನಿಧಿಗಳ ಮಾತುಕತೆ ಕೂಡ ಸೇರಿದೆ. ಆದಾಗ್ಯೂ, ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಕುರಿತು ಭಾರತದಲ್ಲಿ ಇನ್ನೂ ಕಳವಳ ಮುಂದುವರಿದಿದೆ.
ಚೀನಾ ಅಧ್ಯಕ್ಷರೊಂದಿಗೆ ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮ ಪ್ರಮುಖರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವೂ ಆಗಮಿಸಿದೆ.
ಕಳೆದ ಒಂದು ವರ್ಷದಲ್ಲಿ, ಪೂರ್ವ ಲಡಾಖ್‌ನಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದ ಸೇನಾ ಸಂಘರ್ಷದಿಂದ ಹದಗೆಟ್ಟ ಸಂಬಂಧಗಳನ್ನು ಸುಧಾರಿಸುವ ಉದ್ದೇಶದಿಂದ ಭಾರತ ಮತ್ತು ಚೀನಾ ಹಲವು ವಿಶ್ವಾಸವರ್ಧಕ ಕ್ರಮಗಳನ್ನು ಕೈಗೊಂಡಿವೆ.
ಮೋದಿ ಮತ್ತು ಕ್ಸಿ ಅವರ ಮಾತುಕತೆಯಲ್ಲಿ ವಾಸ್ತವ ನಿಯಂತ್ರಣ ರೇಖೆ (LAC) ಬಳಿಯ ಪರಿಸ್ಥಿತಿಯನ್ನು ಪರಿಶೀಲಿಸುವ ನಿರೀಕ್ಷೆಯಿದೆ. ಅಲ್ಲದೆ, ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸುವುದು ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ.
ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಅವರು ಕಳೆದ ವರ್ಷ ಆಗಸ್ಟ್ 31ರಂದು ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ಹಿನ್ನೆಲೆಯಲ್ಲಿ ಕೊನೆಯ ಬಾರಿಗೆ ವ್ಯಾಪಕ ಮಾತುಕತೆ ನಡೆಸಿದ್ದರು.
2020ರಲ್ಲಿ ನಡೆದ ಮಾರಣಾಂತಿಕ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ದೀರ್ಘಕಾಲದ ಸೇನಾ ಬಿಕ್ಕಟ್ಟು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಉಭಯ ದೇಶಗಳು ಸಂಬಂಧಗಳನ್ನು ಪುನರ್‌ನಿರ್ಮಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿವೆ.
ಕಳೆದ ತಿಂಗಳ ಕೊನೆಯಲ್ಲಿ ಅಜಿತ್ ದೋವಲ್ ಅವರು ಬೀಜಿಂಗ್‌ನಲ್ಲಿ ವಾಂಗ್ ಯಿ ಅವರೊಂದಿಗೆ ವಿಶೇಷ ಪ್ರತಿನಿಧಿಗಳ ಮಾತುಕತೆ ನಡೆಸಿದ್ದರು. ಭಾರತ-ಚೀನಾ ಗಡಿ ಗುರುತಿಸುವಿಕೆ, ಗಡಿಯಾಚೆಗಿನ ಸಹಕಾರ ಹಾಗೂ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳು ಈ ಮಾತುಕತೆಯಲ್ಲಿ ಚರ್ಚೆಯಾಗಿದ್ದವು.
2003ರಲ್ಲಿ ಸ್ಥಾಪಿಸಲಾದ ಗಡಿ ಮಾತುಕತೆ ವ್ಯವಸ್ಥೆಯಡಿ ಸಮಗ್ರ ಭಾರತ-ಚೀನಾ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ವಿಶೇಷ ಪ್ರತಿನಿಧಿಗಳಾಗಿ ಅಜಿತ್ ದೋವಲ್ ಮತ್ತು ವಾಂಗ್ ಯಿ ಅವರನ್ನು ನೇಮಿಸಲಾಗಿದೆ. ಭಾರತ-ಚೀನಾ ನಡುವಿನ ಈ ಗಡಿ ವಿವಾದವು 3,488 ಕಿಲೋಮೀಟರ್ ಉದ್ದದ ಗಡಿಯನ್ನು ಒಳಗೊಂಡಿದೆ.
2019ರಲ್ಲಿ ಮಾಮಲ್ಲಪುರಂನಲ್ಲಿ ಮೋದಿ ಅವರೊಂದಿಗೆ ಅನೌಪಚಾರಿಕ ಶೃಂಗಸಭೆ ನಡೆಸಿದ ಬಳಿಕ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಮರಳುತ್ತಿರುವುದು ಈ ಭೇಟಿಯ ವಿಶೇಷತೆಯಾಗಿದೆ. 2020ರ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಗಡಿ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು. ಈ ಸಂಘರ್ಷದಲ್ಲಿ ಎರಡೂ ಕಡೆಯ ಸೈನಿಕರು ಮೃತಪಟ್ಟಿದ್ದು, ವಾಸ್ತವಿಕ ನಿಯಂತ್ರಣ ರೇಖೆ (LAC) ಉದ್ದಕ್ಕೂ ದೀರ್ಘಕಾಲದ ಸೇನಾ ಬಿಕ್ಕಟ್ಟು ಉಂಟಾಗಿತ್ತು.
ಆ ಬಳಿಕ, ವಿವಾದಿತ ಗಡಿಯ ಕೆಲವು ಭಾಗಗಳಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಭಾರತ ಮತ್ತು ಚೀನಾ ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೆ, ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲಿ ಎರಡೂ ದೇಶಗಳು ಎಚ್ಚರಿಕೆಯ ನಿಲುವನ್ನು ಮುಂದುವರಿಸಿವೆ.
18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ನಾಯಕರು ಜಾಗತಿಕ ಆರ್ಥಿಕ ಸಹಕಾರ, ಅಭಿವೃದ್ಧಿ, ಅಂತಾರಾಷ್ಟ್ರೀಯ ಭದ್ರತೆ ಸೇರಿದಂತೆ ಪ್ರಮುಖ ಭೌಗೋಳಿಕ-ರಾಜಕೀಯ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.
ಬ್ರಿಕ್ಸ್ ಅಧ್ಯಕ್ಷ ಸ್ಥಾನ ಚೀನಾಗೆ ಹಸ್ತಾಂತರ
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್ 2024ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಸೌದಿ ಅರೇಬಿಯಾವನ್ನು ಸೇರ್ಪಡೆಗೊಳಿಸುವ ಮೂಲಕ ವಿಸ್ತರಣೆಯಾಯಿತು. 2025ರಲ್ಲಿ ಇಂಡೋನೇಷ್ಯಾ ಕೂಡ ಗುಂಪಿಗೆ ಸೇರ್ಪಡೆಯಾಯಿತು.
ಬೆಲಾರಸ್, ಬೊಲಿವಿಯಾ, ಕಜಕಿಸ್ತಾನ, ಕ್ಯೂಬಾ, ಮಲೇಷ್ಯಾ, ನೈಜೀರಿಯಾ, ಥಾಯ್ಲೆಂಡ್, ಉಗಾಂಡಾ, ಉಜ್ಬೇಕಿಸ್ತಾನ ಮತ್ತು ವಿಯೆಟ್ನಾಂ ಕಳೆದ ವರ್ಷ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳಾದವು.
ಭಾರತ ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, 2012, 2016 ಮತ್ತು 2021ರಲ್ಲಿ ಮೂರು ಬಾರಿ ಅಧ್ಯಕ್ಷ ಸ್ಥಾನ ವಹಿಸಿದೆ. ಈ ವರ್ಷದ ಜನವರಿ 1ರಂದು ಭಾರತ ನಾಲ್ಕನೇ ಬಾರಿಗೆ ಬ್ರಿಕ್ಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತು.
2026ರಲ್ಲಿ ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷಗಳು ಪೂರ್ಣಗೊಳ್ಳುತ್ತಿರುವುದು ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಶೃಂಗಸಭೆಯ ಬಳಿಕ ಬ್ರಿಕ್ಸ್‌ನ ಸರದಿಯ ಅಧ್ಯಕ್ಷ ಸ್ಥಾನವನ್ನು ಚೀನಾ ವಹಿಸಿಕೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



