ವಿದೇಶ

ಸೌದಿ ಮೇಲೆ ಕ್ಷಿಪಣಿ ದಾಳಿ: Houthi ಉಗ್ರರ ವಿರುದ್ಧ ಸಿಡಿದೆದ್ದ ಭಾರತ; 'ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ದಾಳಿ ಒಪ್ಪಲ್ಲ' ಎಂದು ಗುಡುಗು

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಸೌದಿ ಸಾರ್ವಭೌಮ ಪ್ರದೇಶದ ಮೇಲಿನ ದಾಳಿಗಳು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸೌದಿ ಮೇಲೆ ಕ್ಷಿಪಣಿ ದಾಳಿ: Houthi ಉಗ್ರರ ವಿರುದ್ಧ ಸಿಡಿದೆದ್ದ ಭಾರತ; 'ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ದಾಳಿ ಒಪ್ಪಲ್ಲ' ಎಂದು ಗುಡುಗು
ಸೌದಿ ಮೇಲೆ ಹೌತಿ ಉಗ್ರರ ಕ್ಷಿಪಣಿ ದಾಳಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಸೌದಿ ಅರೇಬಿಯಾದ ನಾಗರಿಕ ಮತ್ತು ಆರ್ಥಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಯೆಮನ್‌ನ ಹೌತಿ ಉಗ್ರರು ನಡೆಸಿದ ಇತ್ತೀಚಿನ ಸರಣಿ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಸೌದಿ ಸಾರ್ವಭೌಮ ಪ್ರದೇಶದ ಮೇಲಿನ ದಾಳಿಗಳು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇಂತಹ ಪ್ರಚೋದನಾಕಾರಿ ಕ್ರಮಗಳು ಮಧ್ಯಪ್ರಾಚ್ಯದ ಸ್ಥಿರತೆ ಮತ್ತು ಶಾಂತಿಗೆ ತೀವ್ರ ಧಕ್ಕೆ ತರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ನಾಗರಿಕರು ಹಾಗೂ ಆರ್ಥಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸುವ ಇಂತಹ ದಾಳಿಗಳು ಪ್ರಾದೇಶಿಕ ಸ್ಥಿರತೆಗೆ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಸಾಗರ ಮಾರ್ಗವಾದ ಬಾಬ್-ಎಲ್-ಮಂದೆಬ್‌ನಲ್ಲಿ ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುತ್ತವೆ. ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ಇಂತಹ ದಾಳಿಗಳು ಸ್ವೀಕಾರಾರ್ಹವಲ್ಲ ಹೇಳಿದ್ದಾರೆ.

ಹೌತಿ ಬಂಡುಕೋರರು ಸೌದಿ ಅರೇಬಿಯಾದ ನೈಋತ್ಯ ಭಾಗದ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹತ್ತಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಅಬ್ಹಾ, ಖಮೀಸ್ ಮುಶೈತ್, ಜಝಾನ್ ಮತ್ತು ನಜ್ರಾನ್ ನಗರಗಳು ಗುರಿಯಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 73 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದರ ಜೊತೆಗೆ, ತೈಲ ಘಟಕಗಳು ಹಾಗೂ ಇತರ ಇಂಧನ ಕ್ಷೇತ್ರದ ಸ್ಥಾವರಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರ್ಯಾಚರಣೆಗಳಿಗೆ ತಾತ್ಕಾಲಿಕವಾಗಿ ಅಡ್ಡಿಯುಂಟಾಯಿತು ಎಂದು ತಿಳಿಸಿದ್ದಾರೆ. ಈ ದಾಳಿಗಳು ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಅಲ್ಲದೆ, ಪ್ರಮುಖ ಇಂಧನ ಮೂಲಸೌಕರ್ಯಗಳು ಮತ್ತು ಸಾಗರ ವ್ಯಾಪಾರ ಮಾರ್ಗಗಳಿಗೆ ಮತ್ತೊಮ್ಮೆ ಬೆದರಿಕೆಯುಂಟು ಮಾಡಿದೆ.

ಯೆಮನ್‌ನಲ್ಲಿರುವ ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ಅವರು ಮಾತನಾಡಿ, ಹೌತಿ ಉಗ್ರರ ದಾಳಿಗಳು ನಾಗರಿಕ ಮತ್ತು ಆರ್ಥಿಕ ತಾಣಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಿದ್ದಾರೆ. ಇದನ್ನು “ಅಪಾಯಕಾರಿ ಉಲ್ಬಣ” ಎಂದು ಬಣ್ಣಿಸಿರುವ ಸೌದಿ ನೇತೃತ್ವದ ಮೈತ್ರಿಕೂಟ, ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದೆ.

ಆದರೆ, ತಮ್ಮ ನಿಯಂತ್ರಣದಲ್ಲಿರುವ ವಾಯವ್ಯ ಯೆಮನ್ ಪ್ರದೇಶಗಳ ಮೇಲೆ ಸೌದಿ ಅರೇಬಿಯಾ ನಡೆಸಿದ ಇತ್ತೀಚಿನ ವಾಯುದಾಳಿಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೌತಿ ಬಂಡುಕೋರರು ಹೇಳಿದ್ದಾರೆ. ಹೌತಿ ಸೇನೆಯ ವಕ್ತಾರ ಯಹ್ಯಾ ಸರಿಯಾ, ಯೆಮನ್‌ನ ಮಾರಿಬ್, ಅಲ್-ಬೈದಾ, ಹುದೈದಾ, ತೈಜ್ ಮತ್ತು ಜೌಫ್ ಪ್ರಾಂತ್ಯಗಳಲ್ಲಿ ಮೂರು ದಿನಗಳಲ್ಲಿ ಸೌದಿ ಪಡೆಗಳು 120ಕ್ಕೂ ಹೆಚ್ಚು ವಾಯುದಾಳಿಗಳನ್ನು ನಡೆಸಿವೆ ಎಂದು ಆರೋಪಿಸಿದ್ದಾರೆ.

ಸೌದಿ ಸೇನೆಯ ಕಾರ್ಯಾಚರಣೆಯನ್ನು “ಆಕ್ರಮಣ” ಎಂದು ಬಣ್ಣಿಸಿರುವ ಯಹ್ಯಾ ಸರಿಯಾ, ಇದಕ್ಕೆ ಪ್ರತಿಯಾಗಿ ಹೌತಿಗಳು “ಹತ್ತಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು” ಬಳಸಿದ್ದು, ಇದರಿಂದ “ಹೆಚ್ಚಿನ ಹಾನಿ” ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈ ಬೆಳವಣಿಗೆ ಯೆಮನ್ ಸಂಘರ್ಷದ ವ್ಯಾಪಕ ಪ್ರಾದೇಶಿಕ ಪರಿಣಾಮಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಇರಾನ್-ಅಮೆರಿಕ ಸಂಘರ್ಷದ ನಡುವೆಯೂ ಹೌತಿ ಬಂಡುಕೋರರು ಈ ಹಿಂದೆ ಸೌದಿ ಅರೇಬಿಯಾ ಹಾಗೂ ಕೆಂಪು ಸಮುದ್ರ ಮತ್ತು ಬಾಬ್-ಎಲ್-ಮಂದೆಬ್ ಮೂಲಕ ಸಾಗುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದರು.

ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಬಾಬ್-ಎಲ್-ಮಂದೆಬ್ ಜಲಸಂಧಿಯು ಜಾಗತಿಕ ವ್ಯಾಪಾರ ಮತ್ತು ಇಂಧನ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.