ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಅಣ್ವಸ್ತ್ರ ಹೊಂದಲು ಅವಕಾಶವೇ ಇಲ್ಲ, ಶಾಂತಿ ಮಾತುಕತೆ ವಿಫಲವಾದರೆ ದಾಳಿ ಖಚಿತ- ಅಮೆರಿಕಾ ಎಚ್ಚರಿಕೆ
ಯುದ್ಧ ಪರಿಸ್ಥಿತಿ ತೀವ್ರವಾಗಿದ್ದರೂ ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿವೆ. ವಿಶೇಷವಾಗಿ ಲೆಬನಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನೂ ಯುದ್ಧ ಅಂತ್ಯ ಒಪ್ಪಂದದ ಭಾಗವನ್ನಾಗಿಸಬೇಕು ಎಂದು ಇರಾನ್ ಒತ್ತಾಯಿಸಿದೆ.

ವಾಷಿಂಗ್ಟನ್: ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ ಅಂತ್ಯಗೊಳಿಸುವ ಮಾತುಕತೆ ಮುಂದುವರೆಸಿದ್ದು, ಈ ನಡುವಲ್ಲೇ ಶಾಂತಿ ಮಾತುಕತೆ ವಿಫಲವಾಗಿದ್ದೇ ಆದರೆ, ದಾಳಿ ಖಚಿತ ಎಂದು ಅಮರಿಕಾ ಎಚ್ಚರಿಕೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವುದೇ ಶಾಂತಿ ಒಪ್ಪಂದವೂ ತಮ್ಮ “ರೆಡ್ ಲೈನ್”ಗಳನ್ನು ಮೀರಿ ಹೋಗಬಾರದು ಎಂದು ಸ್ಪಷ್ಟಪಡಿಸಿದ್ದು, ವಿಶೇಷವಾಗಿ ಇರಾನ್ ಎಂದಿಗೂ ಅಣ್ವಸ್ತ್ರ ಹೊಂದಬಾರದು ಎಂಬ ತಮ್ಮ ಗಟ್ಟಿವಿನ ಮೇಲೆ ಧೃಢವಾಗಿದ್ದಾರೆ.
ಶ್ವೇತಭವನವು ಇತ್ತೀಚೆಗೆ ಟ್ರಂಪ್ ಒಪ್ಪಂದದ ಅಂತಿಮ ನಿರ್ಧಾರಕ್ಕೆ ಸಮೀಪಿಸಿದ್ದಾರೆ ಎಂಬ ಸೂಚನೆ ನೀಡಿದ್ದರೂ, ಟೆಹ್ರಾನ್ ಅಂತಹ ಯಾವುದೇ ಅಂತಿಮ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಮೆರಿಕ ಮೂಲಗಳ ಪ್ರಕಾರ, ಒಪ್ಪಂದದ ಕರಡು ಟ್ರಂಪ್ ಅಂತಿಮ ಅನುಮೋದನೆಗಾಗಿ ಕಾಯುತ್ತಿತ್ತು. ಆದರೆ ಶುಕ್ರವಾರ ಶ್ವೇತಭವನದ ಸಿಟ್ಯುಯೇಷನ್ ರೂಮ್‌ನಲ್ಲಿ ನಡೆದ ಮಹತ್ವದ ಸಭೆಯ ಬಳಿಕವೂ ಟ್ರಂಪ್ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಇದರ ನಡುವೆಯೇ ಸಿಂಗಾಪುರದಲ್ಲಿ ನಡೆದ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು, “ಅಗತ್ಯವಿದ್ದರೆ ಅಮೆರಿಕ ಮತ್ತೆ ಯುದ್ಧ ಆರಂಭಿಸಲು ಸಂಪೂರ್ಣ ಸಾಮರ್ಥ್ಯ ಹೊಂದಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಅಮೆರಿಕಾದ ಸೆಂಟ್ರಲ್ ಕಮಾಂಡ್ (CENTCOM) ಕೂಡ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಮೆರಿಕದ ಪಡೆಗಳು ಸಂಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ಈ ವಾರ ಅಮೆರಿಕ ಇರಾನ್‌ನ ಬಂದರ್ ಅಬ್ಬಾಸ್ ಮೇಲೆ ನಡೆಸಿದ ದಾಳಿಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು. ಅದಕ್ಕೆ ಪ್ರತಿಯಾಗಿ ಇರಾನ್ ಕೂಡ ಗುಂಡಿನ ದಾಳಿ ನಡೆಸಿತ್ತು.
ಶನಿವಾರ ಇರಾನ್ ಸೇನೆ ಅಮೆರಿಕ-ಇಸ್ರೇಲ್'ಗೆ ಸೇರಿದ ಡ್ರೋನ್ ಒಂದನ್ನು ಹೊಡೆದುರುಳಿಸಿದ್ದಾಗಿ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.
ಯುದ್ಧ ಪರಿಸ್ಥಿತಿ ತೀವ್ರವಾಗಿದ್ದರೂ ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿವೆ. ವಿಶೇಷವಾಗಿ ಲೆಬನಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನೂ ಯುದ್ಧ ಅಂತ್ಯ ಒಪ್ಪಂದದ ಭಾಗವನ್ನಾಗಿಸಬೇಕು ಎಂದು ಇರಾನ್ ಒತ್ತಾಯಿಸಿದೆ.
ಇದೇ ವೇಳೆ ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್ ಪ್ರದೇಶದಲ್ಲಿ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದು, ಸೇನಾ ಕಾರ್ಯಾಚರಣೆ ಮುಂದುವರಿಯುವುದಾಗಿ ಹೇಳಿದ್ದಾರೆ.
ಟ್ರಂಪ್ ಯಾವುದೇ ಒಪ್ಪಂದಕ್ಕೂ ಎರಡು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಮೊದಲನೆಯದು ಇರಾನ್ ಎಂದಿಗೂ ಅಣ್ವಸ್ತ್ರ ಅಭಿವೃದ್ಧಿಪಡಿಸಬಾರದು. ಎರಡನೆಯದು ಜಗತ್ತಿನ ತೈಲ ಸಾಗಣೆಗೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಮರುತೆರೆಯಬೇಕು ಎಂಬುದು.
ವಿಶ್ವದ ಸುಮಾರು 20 ಶೇಕಡಾ ತೈಲ ಸರಬರಾಜು ಇದೇ ಮಾರ್ಗದ ಮೂಲಕ ಸಾಗುವುದರಿಂದ, ಈ ಜಲಮಾರ್ಗದ ಮೇಲಿನ ನಿಯಂತ್ರಣ ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ಶ್ವೇತಭವನದ ಅಧಿಕಾರಿಯೊಬ್ಬರು ಮಾತನಾಡಿ, “ಅಮೆರಿಕಾದ ಹಿತಾಸಕ್ತಿಗೆ ಅನುಗುಣವಾಗಿರುವ ಮತ್ತು ಟ್ರಂಪ್ ಅವರ ರೆಡ್ ಲೈನ್'ಗಳನ್ನು ಪೂರೈಸುವ ಒಪ್ಪಂದಕ್ಕೆ ಮಾತ್ರ ಅಧ್ಯಕ್ಷರು ಒಪ್ಪಿಗೆ ನೀಡುತ್ತಾರೆ” ಎಂದು ಹೇಳಿದ್ದಾರೆ. “ಇರಾನ್ ಎಂದಿಗೂ ಅಣ್ವಸ್ತ್ರ ಹೊಂದಲು ಸಾಧ್ಯವಿಲ್ಲ” ಎಂಬ ಸಂದೇಶವನ್ನೂ ಅವರು ಪುನರುಚ್ಚರಿಸಿದ್ದಾರೆ.
ಆದರೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಟ್ರಂಪ್ ನಿಲುವಿಗೆ ತಿರುಗೇಟು ನೀಡಿದ್ದು, “47 ವರ್ಷಗಳ ಹಿಂದೆಯೇ ‘ಮಸ್ಟ್’ ಎಂಬ ಭಾಷೆಗೆ ಇರಾನ್ ವಿದಾಯ ಹೇಳಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಮಾತುಕತೆ ಮುಂದುವರಿಯುತ್ತಿದ್ದರೂ ಯಾವುದೇ ಅಂತಿಮ ಒಪ್ಪಂದ ಇನ್ನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಹeರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧ ತೆರವುಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದು, ಯಾವುದೇ ತರಿಗ ಇಲ್ಲದೆ ಸಾಗಣೆ ಪುನರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಇರಾನ್‌ನ ಶುದ್ಧೀಕೃತ ಯುರೇನಿಯಂ ಸಂಗ್ರಹವನ್ನು ತೆಗೆದುಹಾಕುವ ಮತ್ತು ನಾಶಪಡಿಸುವ ವಿಚಾರದಲ್ಲೂ ಎರಡೂ ದೇಶಗಳು ಸಹಕರಿಸಲಿವೆ ಎಂದು ಹೇಳಿದ್ದಾರೆ.
ಆದರೆ, ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಮುಂದಿನ ಹಂತದ ಮಾತುಕತೆಗೂ ಮುನ್ನ ಅಮೆರಿಕ ತಕ್ಷಣವೇ 12 ಬಿಲಿಯನ್ ಡಾಲರ್ ಬಿಡುಗಡೆ ಮಾಡಬೇಕು ಎಂದು ಟೆಹ್ರಾನ್ ಒತ್ತಾಯಿಸಿದೆ ಎನ್ನಲಾಗಿದೆ. ಜೊತೆಗೆ ಹಾರ್ಮುಜ್ ಜಲಸಂಧಿ ಕುರಿತಂತೆ ಟ್ರಂಪ್ ಹೇಳಿರುವ ಅಂಶಗಳು ಒಪ್ಪಂದ ಕರಡಿನಲ್ಲಿ ಇಲ್ಲ ಎಂದು ಕೂಡ ವರದಿ ಹೇಳಿದೆ.
ಇದರ ನಡುವೆ ಇರಾನ್ ಸಂಸತ್ತು ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಮತ್ತು ಪ್ರಭುತ್ವವನ್ನು ಬಲಪಡಿಸುವ ಯೋಜನೆಗೆ ಶೀಘ್ರದಲ್ಲೇ ಅನುಮೋದನೆ ನೀಡಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಅಮೆರಿಕದ ನಿರ್ಬಂಧ ಇನ್ನೂ ಮುಂದುವರಿದಿದ್ದು, ಸೆಂಟ್ಕಾಮ್ ಅಮೆರಿಕದ ಹಡಗುಗಳಿಗೆ ನಿರ್ಬಂಧ ರೇಖೆ ದಾಟಬಾರದು ಎಂದು ಎಚ್ಚರಿಕೆ ನೀಡುತ್ತಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇದರ ಜೊತೆಗೆ ಲೆಬನಾನ್ ಗಡಿಯಲ್ಲೂ ಯುದ್ಧ ಮುಂದುವರಿದಿದೆ. ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‌ನ ಏಳು ಗ್ರಾಮಗಳ ನಿವಾಸಿಗಳಿಗೆ ಸ್ಥಳಾಂತರದ ಎಚ್ಚರಿಕೆ ನೀಡಿದೆ. ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅಮೆರಿಕಾ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಜೊತೆ ಮಾತನಾಡಿ ತಕ್ಷಣ ಕದನ ವಿರಾಮಕ್ಕೆ ಪ್ರಯತ್ನಿಸಬೇಕೆಂದು ಮನವಿ ಮಾಡಿದ್ದಾರೆ.
ಏಪ್ರಿಲ್ 17ರಂದು ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ತಾತ್ಕಾಲಿಕ ಯುದ್ಧ ವಿರಾಮ ಆರಂಭವಾದರೂ, ಎರಡೂ ರಾಷ್ಟ್ರಗಳು ಪರಸ್ಪರ ಒಪ್ಪಂದ ಉಲ್ಲಂಘನೆ ಆರೋಪ ಮಾಡುತ್ತಿವೆ. ಮಾರ್ಚ್ ಆರಂಭದಲ್ಲಿ ಇರಾನ್ ಬೆಂಬಲಿತ ಹಿಜ್ವುಲ್ಲಾ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ, ಇಸ್ರೇಲ್ ಲೆಬನಾನ್ ಮೇಲೆ ಭಾರೀ ದಾಳಿ ಆರಂಭಿಸಿತ್ತು.
ಈಗ ಮಧ್ಯಪ್ರಾಚ್ಯದ ಸಂಪೂರ್ಣ ಪರಿಸ್ಥಿತಿ ಅಮೆರಿಕ-ಇರಾನ್ ಒಪ್ಪಂದದ ಮೇಲೆ ಅವಲಂಬಿತವಾಗಿದ್ದು, ಟ್ರಂಪ್ ಅಂತಿಮ ನಿರ್ಧಾರದತ್ತ ಇಡೀ ವಿಶ್ವದ ಕಣ್ಣು ನೆಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




