ನ್ಯಾಯಾಂಗ ನಿಂದನೆ ಆರೋಪ: Byju's ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ; 67 ಲಕ್ಷ ರೂ ದಂಡ ವಿಧಿಸಿದ ಸಿಂಗಾಪುರ ಕೋರ್ಟ್..!
2024ರ ಏಪ್ರಿಲ್‌ನಿಂದ ಆಸ್ತಿಗಳ ವಿವರ ಬಹಿರಂಗಪಡಿಸುವುದು ಹಾಗೂ ಅವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಅನೇಕ ಆದೇಶಗಳನ್ನು ಬೈಜು ರವೀಂದ್ರನ್ ಪದೇ ಪದೇ ಉಲ್ಲಂಘಿಸಿದ್ದಾರೆಂದು ಸಿಂಗಾಪುರ ನ್ಯಾಯಾಲಯ ತಿಳಿಸಿದೆ.

ಸಿಂಗಾಪುರ: ಆರ್ಥಿಕ ಹಾಗೂ ಕಾನೂನು ಸಂಕಷ್ಟಗಳನ್ನು ಎದುರಿಸುತ್ತಿರುವ ಭಾರತೀಯ ಎಡ್ಟೆಕ್ ಸಂಸ್ಥೆ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯ ದೊಡ್ಡ ಶಾಕ್ ನೀಡಿದೆ.
ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಬೈಜು ರವೀಂದ್ರನ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ವರದಿಯ ಪ್ರಕಾರ, 2024ರ ಏಪ್ರಿಲ್‌ನಿಂದ ಆಸ್ತಿಗಳ ವಿವರ ಬಹಿರಂಗಪಡಿಸುವುದು ಹಾಗೂ ಅವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಅನೇಕ ಆದೇಶಗಳನ್ನು ಬೈಜು ರವೀಂದ್ರನ್ ಪದೇ ಪದೇ ಉಲ್ಲಂಘಿಸಿದ್ದಾರೆಂದು ಸಿಂಗಾಪುರ ನ್ಯಾಯಾಲಯ ತಿಳಿಸಿದೆ.
ಜೊತೆಗೆ, ರವೀಂದ್ರನ್ ಅವರು ತಕ್ಷಣ ಅಧಿಕಾರಿಗಳಿಗೆ ಶರಣಾಗಬೇಕು ಹಾಗೂ ಸುಮಾರು 70,500 ಅಮೆರಿಕನ್ ಡಾಲರ್ (ಸುಮಾರು ₹67 ಲಕ್ಷ) ಕಾನೂನು ವೆಚ್ಚವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಬೀಯರ್ ಇನ್ವೆಸ್ಟ್ಕೊ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಕಾನೂನುಬದ್ಧ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನೂ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೈಜೂಸ್ ಸಂಸ್ಥೆ ಈಗಾಗಲೇ ಅಮೆರಿಕಾ ಸೇರಿ ಹಲವು ದೇಶಗಳಲ್ಲಿ ಸಾಲದಾತರು ಹಾಗೂ ಹೂಡಿಕೆದಾರರೊಂದಿಗೆ ಕಾನೂನು ಹೋರಾಟ ಎದುರಿಸುತ್ತಿದೆ.
ವಿಶೇಷವಾಗಿ ಕಂಪನಿಯ ಅಂತರರಾಷ್ಟ್ರೀಯ ವಿಭಾಗ ಸಂಗ್ರಹಿಸಿದ್ದ 1.2 ಬಿಲಿಯನ್ ಡಾಲರ್ ಟರ್ಮ್ ಲೋನ್‌ಗೆ ಸಂಬಂಧಿಸಿದ ಹಣ ಮರುಪಾವತಿ ವಿವಾದಗಳು ತೀವ್ರಗೊಂಡಿವೆ.
ಈ ಶಿಕ್ಷೆ ಕುರಿತಾಗಿ ಬೈಜು ರವೀಂದ್ರನ್ ಇನ್ನೂ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಅವರು ಸಿಂಗಾಪುರದಲ್ಲಿದ್ದಾರೆಯೇ ಎಂಬುದೂ ಇನ್ನೂ ಸ್ಪಷ್ಟವಾಗಿಲ್ಲ ಎಂದು ವರದಿ ತಿಳಿಸಿದೆ.
ಏನಿದು ಪ್ರಕರಣ..?
ಬೈಜು ರವೀಂದ್ರನ್ ಅವರ ಮೇಲಿನ ಈ ಕಾನೂನು ಕ್ರಮವು ನ್ಯಾಯಾಲಯದ ಆದೇಶಗಳನ್ನು ಪಾಲಿಸದಿರುವುದಕ್ಕೆ ಸಂಬಂಧಿಸಿದ್ದಾಗಿದೆ.
ಏಪ್ರಿಲ್ 2024 ರಿಂದ ಸಿಂಗಾಪುರ ನ್ಯಾಯಾಲಯವು ಬೈಜು ರವೀಂದ್ರನ್ ಅವರಿಗೆ ತಮ್ಮ ವೈಯಕ್ತಿಕ ಆಸ್ತಿಗಳು, ಮಾಲೀಕತ್ವದ ಹಕ್ಕುಗಳು ಮತ್ತು ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ಹಲವು ಬಾರಿ ಕಟ್ಟುನಿಟ್ಟಿನ ಆದೇಶಗಳನ್ನು ನೀಡಿತ್ತು. ಆದರೆ, ರವೀಂದ್ರನ್ ಅವರು ನ್ಯಾಯಾಲಯದ ಗಡುವುಗಳನ್ನು ಪದೇ ಪದೇ ನಿರ್ಲಕ್ಷಿಸಿದರು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಲು ವಿಫಲರಾದರು.
ನ್ಯಾಯಾಲಯದ ಆದೇಶಗಳಿಗೆ ಬೆಲೆ ನೀಡದ ಈ ಬೇಜವಾಬ್ದಾರಿತನವನ್ನು ಗಂಭೀರವಾಗಿ ಪರಿಗಣಿಸಿದ ಸಿಂಗಾಪುರ ನ್ಯಾಯಾಲಯವು, ಇದು ಸ್ಪಷ್ಟವಾಗಿ "ನ್ಯಾಯಾಂಗ ನಿಂದನೆ" ಎಂದು ತೀರ್ಪು ನೀಡಿ ಜೈಲು ಶಿಕ್ಷೆ ಪ್ರಕಟಿಸಿದೆ. ಅಲ್ಲದೆ, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಶರಣಾಗುವಂತೆ ಅವರಿಗೆ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



