ಪ್ರಧಾನಿ ಮೋದಿಯನ್ನು 'ಹಾವಾಡಿಗ'ನಂತೆ ಬಿಂಬಿಸಿ ವಿಕೃತಿ: ಭಾರತವನ್ನು ಹೀಯಾಳಿಸಿದ ನಾರ್ವೆ ಪತ್ರಿಕೆ; ನೆಟ್ಟಿಗರು ತೀವ್ರ ಕಿಡಿ
ಪ್ರಧಾನಿ ಮೋದಿ ಓಸ್ಲೋಗೆ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು ನಾರ್ವೆಯ 'ಆಫ್ಟನ್‌ಪೋಸ್ಟನ್' ಎಂಬ ಪತ್ರಿಕೆ ಲೇಖನದೊಂದಿಗೆ ಈ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ.

ನಾರ್ವೆಯ ಪ್ರಮುಖ ಪತ್ರಿಕೆಯೊಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಪ್ರಕಟಿಸಿರುವ ವ್ಯಂಗ್ಯಚಿತ್ರವೊಂದು ಜನಾಂಗೀಯ ದ್ವೇಷದ ಆರೋಪಕ್ಕೆ ಗುರಿಯಾಗಿದೆ.
ಮೋದಿಯವರನ್ನು 'ಹಾವಾಡಿಗ'ನಂತೆ ಚಿತ್ರಿಸಿರುವ ಈ ಕಾರ್ಟೂನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಧಾನಿ ಮೋದಿ ಓಸ್ಲೋಗೆ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು ನಾರ್ವೆಯ 'ಆಫ್ಟನ್‌ಪೋಸ್ಟನ್' ಎಂಬ ಪತ್ರಿಕೆ ಲೇಖನದೊಂದಿಗೆ ಈ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ.
ಇದರಲ್ಲಿ ಮೋದಿಯವರನ್ನು ಹಾವಾಡಿಗನ ರೂಪದಲ್ಲಿ ತೋರಿಸಲಾಗಿದ್ದು, ಹಾವಿನ ಬದಲು ಪೆಟ್ರೋಲ್ ಬಂಕಿನ ಇಂಧನ ಪೈಪ್ ಅನ್ನು ಮೋದಿಯವರು ನಿಯಂತ್ರಿಸುತ್ತಿರುವಂತೆ ಚಿತ್ರಿಸಲಾಗಿದೆ.
ಈ ವ್ಯಂಗ್ಯಚಿತ್ರದ ಜೊತೆಗೆ “A clever and slightly annoying man” (ಒಬ್ಬ ಚಾಣಾಕ್ಷ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ವ್ಯಕ್ತಿ) ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಟೂನ್ ವೈರಲ್ ಆಗುತ್ತಿದ್ದಂತೆ ಭಾರತೀಯರು ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು, ಪಾಶ್ಚಿಮಾತ್ಯ ಮಾಧ್ಯಮಗಳು ಭಾರತವನ್ನು ಇನ್ನೂ 'ಹಾವಾಡಿಗರ ದೇಶ' ಎಂಬ ಹಳೆಯ ವಸಾಹತುಶಾಹಿ ಮನಸ್ಥಿತಿಯಲ್ಲೇ ನೋಡುತ್ತಿವೆ ಎಂದು ಎಂದು ಕಿಡಿಕಾರಿದ್ದಾರೆ.

ಇಟಲಿಯಲ್ಲಿ ಪ್ರಧಾನಿ ಮೋದಿ: "ವೆಲ್ಕಮ್ ಟು ರೋಮ್ ಮೈ ಫ್ರೆಂಡ್" ಎಂದು ಆತ್ಮೀಯ ಸ್ವಾಗತ ಕೋರಿದ PM ಜಾರ್ಜಿಯಾ ಮೆಲೋನಿ!
ಜಾಗತಿಕವಾಗಿ ಭಾರತವು ಆರ್ಥಿಕ ಮತ್ತು ತಾಂತ್ರಿಕವಾಗಿ ಮುಂಚೂಣಿಯಲ್ಲಿದ್ದರೂ, ಇಂತಹ ಜನಾಂಗೀಯ ನಿಂದನೆಯ ರೂಪಕಗಳನ್ನು ಬಳಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿವಾದದ ಮಧ್ಯೆ ಪ್ರಧಾನಿ ಮೋದಿ ಅವರ ನಾರ್ವೆ ಭೇಟಿಯ ಸಂದರ್ಭ ನಡೆದ ಪತ್ರಿಕಾಗೋಷ್ಠಿಯೂ ದೊಡ್ಡ ಚರ್ಚೆಗೆ ಕಾರಣವಾಗಿದೆ.
ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್, ಪ್ರಧಾನಿ ಮೋದಿ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡದೇ ಹೊರಟಿರುವುದನ್ನು ಪ್ರಶ್ನಿಸಿದ್ದರು.
ನಾರ್ವೆ ಪ್ರಧಾನಿ ಜೊತೆ ನಡೆದ ಜಂಟಿ ಕಾರ್ಯಕ್ರಮದಲ್ಲಿ ಅವರು, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಸ್ಥಿತಿಗತಿ ಕುರಿತು ಪ್ರಶ್ನೆ ಎತ್ತಿದ್ದರು. ಆದರೆ, ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೇ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಬಳಿಕ ಈ ವಿಡಿಯೊವನ್ನು ಹಲ್ಲೆ ಲಿಂಗ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಿಬಿ ಜಾರ್ಜ್ ಅವರು, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಸಂವಿಧಾನಬದ್ಧ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಭದ್ರವಾದ ವ್ಯವಸ್ಥೆ ಇದೆ ಸ್ಪಷ್ಟಪಡಿಸಿದರು.
“ಭಾರತದ ಪ್ರಮಾಣ, ವೈವಿಧ್ಯತೆ ಹಾಗೂ ಪ್ರಜಾಪ್ರಭುತ್ವದ ಬಲದ ಬಗ್ಗೆ ಹಲವರಿಗೆ ಸಮರ್ಪಕ ಅರಿವಿಲ್ಲ. ದೆಹಲಿಯಲ್ಲಿ ನೂರಾರು ಟಿವಿ ಚಾನೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೆಲ ಎನ್ಜಿಒ ವರದಿಗಳನ್ನು ಓದಿ ಭಾರತ ಕುರಿತು ತೀರ್ಮಾನಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಭಾರತದ ಟೀಕಾಕಾರರು ದೇಶದ ವಾಸ್ತವ ಸ್ಥಿತಿಗತಿಗಳನ್ನು ಅನಾರೋಗ್ಯದ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ” ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮುನ್ನ 2022ರಲ್ಲಿ ಸ್ಪೇನ್‌ನ ಪತ್ರಿಕೆಯೊಂದು ಭಾರತದ ಆರ್ಥಿಕ ಬೆಳವಣಿಗೆ ಕುರಿತ ವರದಿಯಲ್ಲಿ ಇದೇ ರೀತಿಯ ‘ಹಾವಾಡಿಗ’ನ ರೂಪಕವನ್ನು ಬಳಸಿದಾಗಲೂ ಭಾರೀ ವಿವಾದ ಉಂಟಾಗಿತ್ತು.
ಭಾರತದ ವೇಗವಾದ ತಂತ್ರಜ್ಞಾನ ಅಭಿವೃದ್ಧಿ ಮತ್ತು ಜಾಗತಿಕ ಪ್ರಭಾವದ ನಡುವೆಯೂ ಕೆಲ ಪಾಶ್ಚಾತ್ಯ ಮಾಧ್ಯಮಗಳು ಇನ್ನೂ ಹಳೆಯ ಪೂರ್ವಾಗ್ರಹಗಳಿಂದ ಹೊರಬರದೇ ಇರುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.
ಗಮನಾರ್ಹವಾಗಿ, ಪ್ರಧಾನಿ ಮೋದಿ ಅವರು 2014ರಲ್ಲಿ ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ, “ಒಮ್ಮೆ ಭಾರತವನ್ನು ಹಾವು ಹಿಡಿಯುವವರ ದೇಶ ಎಂದು ಕರೆಯಲಾಗುತ್ತಿತ್ತು. ಇಂದು ಭಾರತ ‘ಮೌಸ್ ಚಾರ್ಮರ್’ಗಳ ತಂತ್ರಜ್ಞಾನ ರಾಷ್ಟ್ರವಾಗಿದೆ” ಎಂದು ಹೇಳಿದ್ದರು. ಇದರ ನಂತರವೂ ಹಲವು ಜಾಗತಿಕ ವೇದಿಕೆಗಳಲ್ಲಿ ಇದೇ ಉದಾಹರಣೆ ನೀಡಿ ಭಾರತದ ಪರಿವರ್ತನೆಯನ್ನು ವಿವರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


