ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ
ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸದಿದ್ದರೇ ಪಾಕಿಸ್ತಾನ ಇತಿಹಾಸ ಸೇರಬೇಕಾಗುತ್ತದೆ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ಕಠಿಣ ಎಚ್ಚರಿಕೆಗೆ ಪಾಕಿಸ್ತಾನ ಕೆರಳಿದೆ.

ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸದಿದ್ದರೇ ಪಾಕಿಸ್ತಾನ ಇತಿಹಾಸ ಸೇರಬೇಕಾಗುತ್ತದೆ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ಕಠಿಣ ಎಚ್ಚರಿಕೆಗೆ ಪಾಕಿಸ್ತಾನ ಕೆರಳಿದೆ. ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'ಯಾಗಿದ್ದು ದಕ್ಷಿಣ ಏಷ್ಯಾವನ್ನು ಮತ್ತೊಂದು ಸಂಘರ್ಷಕ್ಕೆ ತಳ್ಳಬಹುದು. ಇದರ ಪರಿಣಾಮಗಳು ಇಡೀ ಪ್ರದೇಶಕ್ಕೆ ವಿನಾಶಕಾರಿಯಾಗಬಹುದು ಎಂದು ಪಾಕಿಸ್ತಾನ ಸೇನೆ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆ (ISPR) ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದ ಗ್ರಹಿಕೆಯ ಹೊರತಾಗಿಯೂ, ಪಾಕಿಸ್ತಾನವು ಜಾಗತಿಕವಾಗಿ ಮಹತ್ವದ ದೇಶವಾಗಿ, ಘೋಷಿತ ಪರಮಾಣು ಶಕ್ತಿಯಾಗಿ ಮತ್ತು ದಕ್ಷಿಣ ಏಷ್ಯಾದ ಭೌಗೋಳಿಕತೆ ಮತ್ತು ಇತಿಹಾಸದ ಶಾಶ್ವತ ಭಾಗವಾಗಿ ಉಳಿದಿದೆ ಎಂದು ಪಾಕ್ ಸೇನೆ ಹೇಳಿದೆ.
ಈ ಪ್ರಚೋದನೆ ದಕ್ಷಿಣ ಏಷ್ಯಾವನ್ನು ಮತ್ತೊಂದು ಸಂಘರ್ಷಕ್ಕೆ ತಳ್ಳುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೇನೆಯ ಪ್ರಕಾರ, ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ವಿನಾಶವು 'ಪರಸ್ಪರ ಮತ್ತು ವ್ಯಾಪಕವಾಗಿರುತ್ತದೆ'. ಜವಾಬ್ದಾರಿಯುತ ಪರಮಾಣು ರಾಷ್ಟ್ರಗಳು "ನಾಗರಿಕತೆಯ ಶ್ರೇಷ್ಠತೆ"ಯನ್ನು ಪ್ರತಿಪಾದಿಸುವ ಅಥವಾ ದೇಶವನ್ನು ಅಳಿಸಿಹಾಕುವ ಬೆದರಿಕೆ ಹಾಕುವ ಬದಲು ಸಂಯಮ, ಪ್ರಬುದ್ಧತೆ ಮತ್ತು ಕಾರ್ಯತಂತ್ರದ ಸಮತೋಲನವನ್ನು ಪ್ರದರ್ಶಿಸಬೇಕು ಎಂದು ISPR ಹೇಳಿದೆ.
ಭಾರತವು ಪಾಕಿಸ್ತಾನದ ಪ್ರಾಮುಖ್ಯತೆಯನ್ನು ಗುರುತಿಸಬೇಕೆಂದು ಒತ್ತಾಯಿಸಿದ್ದು ಪಾಕಿಸ್ತಾನವನ್ನು ಗುರಿಯಾಗಿಸುವ ಯಾವುದೇ ಪ್ರಯತ್ನವು "ಭೌಗೋಳಿಕ ಗಡಿಗಳನ್ನು ಮೀರುವ" ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬೆದರಿಕೆಯ ಧ್ವನಿಯಲ್ಲಿ ಪುನರುಚ್ಚರಿಸಿತು. ಈ ಹೇಳಿಕೆ ಅಸಂಬದ್ಧವಾಗಿದೆ. ತನ್ನ ಸುಳ್ಳಿನ ಕಾರ್ಖಾನೆಯ ಮೂಲಕ ನಕಲಿ ಸುದ್ದಿಗಳನ್ನು ಹರಡುವಲ್ಲಿ ಪರಿಣತಿ ಹೊಂದಿರುವ ಭಾರತವು ಅಸ್ಥಿರತೆಯನ್ನು ಹರಡುತ್ತಿದ್ದು ಅಪ್ರಚಾರದಲ್ಲಿ ತೊಡಗಿದೆ ಎಂದು ಆರೋಪ ಮಾಡಿದೆ.
ಶನಿವಾರ ನವದೆಹಲಿಯಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ, "ಆಪರೇಷನ್ ಸಿಂಧೂರ್" ನಂತಹ ಪರಿಸ್ಥಿತಿ ಮತ್ತೆ ಉದ್ಭವಿಸಿದರೆ ಭಾರತೀಯ ಸೇನೆ ಏನು ಮಾಡುತ್ತದೆ ಎಂದು ಜನರಲ್ ದ್ವಿವೇದಿ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ಇದು ಹೀಗೆ ಮುಂದುವರೆದರೇ ಪಾಕಿಸ್ತಾನವು "ಭೌಗೋಳಿಕತೆಯ ಭಾಗವಾಗಿ ಉಳಿಯಬೇಕೆ ಅಥವಾ ಇತಿಹಾಸವಾಗಬೇಕೆ" ಎಂದು ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




