ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ: ಡ್ರೋನ್, ಕ್ಷಿಪಣಿ ದಾಳಿ ಹಿಮ್ಮೆಟ್ಟಿಸಿದ್ದೇವೆ ಎಂದ UAE; ಪರಿಸ್ಥಿತಿ ಉಲ್ಬಣಗೊಳಿಸುವ ಉದ್ದೇಶ ಇಲ್ಲ- ಅಮೆರಿಕ
ಯುಎಇ ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ತಡೆದಿರುವುದಾಗಿ ಘೋಷಿಸಿರುವ ನಡುವೆ, ಇರಾನ್ ಜೊತೆಗಿನ ಯುದ್ಧ ವಿರಾಮ ಮತ್ತಷ್ಟು ಒತ್ತಡಕ್ಕೆ ಒಳಗಾಗಿದೆ.

ಟೆಹ್ರಾನ್: ಕಳೆದ ಕೆಲದಿನಗಳಿಂದ ಮದ್ಯಪ್ರಾಚ್ಯದಲ್ಲಿ ತಣ್ಣಗಾಗಿದ್ದ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲಾಗಿದೆ. ಆದರೆ ಈ ದಾಳಿಗಳನ್ನು ಸೇನೆ ಯಶಸ್ವಿಯಾಗಿ ಹಿಮ್ಮೆಟಿಸಿದೆ ಎಂದು ಯುಎಇ ಹೇಳಿದೆ.
ಹೌದು.. ಯುಎಇ ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ತಡೆದಿರುವುದಾಗಿ ಘೋಷಿಸಿರುವ ನಡುವೆ, ಇರಾನ್ ಜೊತೆಗಿನ ಯುದ್ಧ ವಿರಾಮ ಮತ್ತಷ್ಟು ಒತ್ತಡಕ್ಕೆ ಒಳಗಾಗಿದೆ. ಇದೇ ವೇಳೆ, ಅಮೆರಿಕ ಸೇನೆ ಪರಿಸ್ಥಿತಿ ಉಲ್ಬಣಗೊಳಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಅಮೆರಿಕ ತನ್ನ ಮೂರು ನೌಕಾಪಡೆಯ ಹಡಗುಗಳ ಮೇಲೆ ನಡೆದ ದಾಳಿಯನ್ನು ತಡೆದು, ಪ್ರತಿಯಾಗಿ ಇರಾನ್ ಸೈನಿಕ ನೆಲೆಗಳ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ, ಯುಎಇ ಕೂಡ ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ತಡೆದಿರುವುದಾಗಿ ತಿಳಿಸಿದೆ. ಇದರಿಂದ ಇರಾನ್ ಮತ್ತು ಅಮೆರಿಕ ನಡುವಿನ ಅಸ್ಥಿರ ಯುದ್ಧ ವಿರಾಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಎರಡೂ ದೇಶಗಳು ಯುದ್ಧ ಅಂತ್ಯಗೊಳಿಸಲು ಒಪ್ಪಂದದ ಸಾಧ್ಯತೆಯನ್ನು ಪರಿಶೀಲಿಸುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.
ಗುರುವಾರ ಟೆಹ್ರಾನ್, ಯುದ್ಧ ಅಂತ್ಯಗೊಳಿಸುವ ಕುರಿತ ಅಮೆರಿಕದ ಹೊಸ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿತು. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ, 'ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನ ನೀಡಿದ ಸಂದೇಶಗಳನ್ನು ಇರಾನ್ ಪರಿಶೀಲಿಸುತ್ತಿದೆ ಎಂದು ಹೇಳಿದರು. ಆದರೆ “ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ, ಅಮೆರಿಕಕ್ಕೆ ಯಾವುದೇ ಉತ್ತರ ನೀಡಿಲ್ಲ” ಎಂದು ಇರಾನ್ ಸರ್ಕಾರಿ ಟಿವಿ ವರದಿ ಮಾಡಿದೆ.
ಇರಾನ್ ಗೆ ಅಮೆರಿಕ ಖಡಕ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಯುದ್ಧ ಅಂತ್ಯಗೊಳಿಸುವ ತಂತ್ರದ ಕುರಿತು ಪರಸ್ಪರ ವಿರೋಧಾಭಾಸದ ಸಂದೇಶಗಳನ್ನು ನೀಡುತ್ತಿದೆ. ಮೊದಲು ಸೈನಿಕ ಕಾರ್ಯಾಚರಣೆಗಳು ಮುಗಿದಿವೆ ಎಂದು ಹೇಳಲಾಗಿದ್ದರೂ, ಈಗ ಇರಾನ್ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಮತ್ತೆ ಬಾಂಬ್ ದಾಳಿ ನಡೆಯಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಯುದ್ಧದಿಂದ ಅಸ್ತವ್ಯಸ್ತಗೊಂಡ ತೈಲ ಮತ್ತು ನೈಸರ್ಗಿಕ ಅನಿಲ ರಫ್ತು ಪುನರಾರಂಭಗೊಳ್ಳಲು ಈ ಒಪ್ಪಂದ ಅಗತ್ಯವೆಂದು ಅಮೆರಿಕ ಹೇಳಿದೆ.
ಗುರುವಾರ ನಡೆದ ಗುಂಡಿನ ಚಕಮಕಿಯ ಬಳಿಕ ಟ್ರಂಪ್ ಮತ್ತೆ ಎಚ್ಚರಿಕೆ ನೀಡಿದ್ದು, “ಅವರು ಅರ್ಥಮಾಡಿಕೊಳ್ಳಬೇಕು. ಒಪ್ಪಂದಕ್ಕೆ ಸಹಿ ಆಗದಿದ್ದರೆ ಅವರಿಗೆ ದೊಡ್ಡ ನೋವು ಎದುರಾಗಲಿದೆ,” ಎಂದು ವಾಷಿಂಗ್ಟನ್‌ನಲ್ಲಿ ಸುದ್ದಿಗಾರರಿಗೆ ಹೇಳಿದರು. ಇರಾನ್ ಜೊತೆ ಒಪ್ಪಂದ ಎಷ್ಟು ಹತ್ತಿರದಲ್ಲಿದೆ ಎಂದು ಕೇಳಿದಾಗ, “ಯಾವುದೇ ದಿನ ಅದು ಸಾಧ್ಯವಾಗಬಹುದು,” ಎಂದು ಹೇಳಿದ ಅವರು, ತಕ್ಷಣವೇ “ಆದರೆ ಅದು ಆಗದೆಯೂ ಇರಬಹುದು ಕೂಡ” ಎಂದೂ ಹೇಳಿದರು.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ವಿರಾಮ ಏಪ್ರಿಲ್ 8ರಿಂದ ಬಹುತೇಕ ಜಾರಿಯಲ್ಲಿದೆ. ಕಳೆದ ತಿಂಗಳು ಪಾಕಿಸ್ತಾನದಲ್ಲಿ ನಡೆದ ನೇರ ಮಾತುಕತೆಗಳು ಯಾವುದೇ ಅಂತಿಮ ಒಪ್ಪಂದಕ್ಕೆ ತಲುಪಿರಲಿಲ್ಲ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ ಯುದ್ಧ ಪ್ರಾರಂಭವಾಗಿತ್ತು.
ಪರಿಸ್ಥಿತಿ ಉಲ್ಬಣಗೊಳಿಸುವ ಉದ್ದೇಶ ಇಲ್ಲ: ಅಮೆರಿಕ ಸೇನೆ
ಯುಎಇ ರಕ್ಷಣಾ ಸಚಿವಾಲಯವು, “ಯಶಸ್ವಿ ವಾಯು ತಡೆ ಕಾರ್ಯಾಚರಣೆಯ ಪರಿಣಾಮವಾಗಿ ಬಿದ್ದಿರುವ ಅವಶೇಷಗಳು ಅಥವಾ ತುಂಡುಗಳನ್ನು ಯಾರೂ ಮುಟ್ಟಬಾರದು, ಫೋಟೋ ತೆಗೆಯಬಾರದು ಅಥವಾ ಹತ್ತಿರ ಹೋಗಬಾರದು” ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಇದಕ್ಕೂ ಕೆಲ ಗಂಟೆಗಳ ಮೊದಲು, ಅಮೆರಿಕ ಸೇನೆ ಹೋರ್ಮುಜ್ ಸಮುದ್ರಸಂಕುಲದಲ್ಲಿ ತನ್ನ ಮೂರು ನೌಕಾಪಡೆಯ ಹಡಗುಗಳ ಮೇಲೆ ನಡೆದ ಇರಾನ್ ದಾಳಿಗಳನ್ನು ತಡೆದಿರುವುದಾಗಿ ತಿಳಿಸಿತು. “ಅಮೆರಿಕ ಪಡೆಗಳ ಮೇಲೆ ದಾಳಿ ನಡೆಸಿದ ಇರಾನ್ ಸೈನಿಕ ನೆಲೆಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಲಾಗಿದೆ” ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
ಅಮೆರಿಕ ಸೇನೆ ಯಾವುದೇ ಹಡಗು ಹಾನಿಗೊಳಗಾಗಿಲ್ಲ ಎಂದು ತಿಳಿಸಿದ್ದು, “ನಾವು ಪರಿಸ್ಥಿತಿ ಉಲ್ಬಣಗೊಳಿಸಲು ಬಯಸುವುದಿಲ್ಲ. ಆದರೆ ಅಮೆರಿಕ ಪಡೆಗಳನ್ನು ರಕ್ಷಿಸಲು ಸಂಪೂರ್ಣ ಸಿದ್ಧರಾಗಿದ್ದೇವೆ” ಎಂದು ಹೇಳಿದೆ. ಇದೇ ವೇಳೆ ಟ್ರಂಪ್, ಹಿಂಸಾಚಾರ ನಡೆದಿದ್ದರೂ ಯುದ್ಧ ವಿರಾಮ ಇನ್ನೂ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಧಾರ್ ಗುರುವಾರ ತಮ್ಮ ಇರಾನ್ ಸಹೋದ್ಯೋಗಿ ಅಬ್ಬಾಸ್ ಅರಘ್ಚಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿದೆ.
“ಶೀಘ್ರದಲ್ಲೇ ಒಪ್ಪಂದವಾಗಬಹುದು ಎಂಬ ನಿರೀಕ್ಷೆಯಿದೆ,” ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ತಾಹಿರ್ ಅಂದ್ರಾಬಿ ತಿಳಿಸಿದ್ದಾರೆ. “ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿಗೆ ನೆರವಾಗುವ ಶಾಶ್ವತ ಪರಿಹಾರಕ್ಕೆ ಎರಡೂ ಪಕ್ಷಗಳು ತಲುಪಲಿ ಎಂಬುದು ನಮ್ಮ ಆಶಯ” ಎಂದಿದ್ದಾರೆ.
ಇದಕ್ಕೂ ಮಧ್ಯೆ, ಇಸ್ರೇಲ್ ಮತ್ತು ಲೆಬೆನಾನ್ ನಡುವಿನ ನೇರ ಮಾತುಕತೆಗಳು ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ಮರು ಆರಂಭವಾಗಲಿವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 14 ಮತ್ತು 15ರಂದು ಈ ಗುಪ್ತ ಸಭೆಗಳು ನಡೆಯಲಿವೆ ಎಂದು ಮಾಹಿತಿ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



