ವಿದೇಶ

ಹಾರ್ಮುಜ್ ನೌಕಾ ದಿಗ್ಬಂಧನ ಉಲ್ಲಂಘನೆ ಆರೋಪ; ಇರಾನ್ ಹಡಗಿನ ಮೇಲೆ ದಾಳಿ; ಅಮೆರಿಕಾ-ಇರಾನ್ ಸಂಘರ್ಷ ತೀವ್ರ..!

ಗಲ್ಪ್ ಆಫ್ ಓಮನ್ ಪ್ರದೇಶದಲ್ಲಿ ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನ ಮೀರಿ ಸಾಗಲು ಯತ್ನಿಸಿದ ಇರಾನ್‌ನ ತೈಲ ಟ್ಯಾಂಕರ್ ಮೇಲೆ ಅಮೆರಿಕದ ಯುದ್ಧ ವಿಮಾನ ದಾಳಿ ನಡೆಸಿದೆ.

ಹಾರ್ಮುಜ್ ನೌಕಾ ದಿಗ್ಬಂಧನ ಉಲ್ಲಂಘನೆ ಆರೋಪ; ಇರಾನ್ ಹಡಗಿನ ಮೇಲೆ ದಾಳಿ; ಅಮೆರಿಕಾ-ಇರಾನ್ ಸಂಘರ್ಷ ತೀವ್ರ..!
ತೈಲ ಹಡಗುಗಳು
Published On :

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಗಂಭೀರ ಹಂತ ತಲುಪಿದೆ. ಕದನ ವಿರಾಮ ಜಾರಿಯಲ್ಲಿದ್ದರೂ ಅಮೆರಿಕ ಸೇನೆ ಇರಾನ್‌ನ ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿದ್ದು, ಇದು ಜಾಗತಿಕ ವಲಯದಲ್ಲಿ ಆತಂಕ ಮೂಡಿಸಿದೆ.

ಅಮೆರಿಕ ಸೆಂಟ್ರಲ್ ಕಮಾಂಡ್ (CENTCOM) ನೀಡಿದ ಮಾಹಿತಿ ಪ್ರಕಾರ, ಗಲ್ಪ್ ಆಫ್ ಓಮನ್ ಪ್ರದೇಶದಲ್ಲಿ ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನ ಮೀರಿ ಸಾಗಲು ಯತ್ನಿಸಿದ ಇರಾನ್‌ನ ತೈಲ ಟ್ಯಾಂಕರ್ ಮೇಲೆ ಅಮೆರಿಕದ ಯುದ್ಧ ವಿಮಾನ ದಾಳಿ ನಡೆಸಿದೆ ಎಂದು ತಿಳಿಸಿದೆ.

ಈ ದಾಳಿಯಲ್ಲಿ ಟ್ಯಾಂಕರ್‌ನ ನಿಯಂತ್ರಣ ವ್ಯವಸ್ಥೆಯ ಪ್ರಮುಖ ಭಾಗವಾದ ‘ರಡ್ಡರ್’ ಹಾನಿಗೊಳಗಾಗಿದೆ. ಇದರಿಂದ ಹಡಗು ಸಾಗಾಟ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

ಈ ಘಟನೆ ಅಮೆರಿಕ ಮತ್ತು ಇರಾನ್ ನಡುವೆ ಅಧಿಕೃತ ಯುದ್ಧ ವಿರಾಮ ಮುಂದುವರಿದಿರುವ ಸಮಯದಲ್ಲೇ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಯುದ್ಧ ನಿಲ್ಲಿಸಿದ್ದೇವೆ ಎಂದು ಘೋಷಿಸಿದ ಎರಡು ರಾಷ್ಟ್ರಗಳು ಮತ್ತೆ ಮುಖಾಮುಖಿಯಾಗುವ ಭೀತಿ ಉಂಟಾಗಿದೆ.

ಏತನ್ಮಧ್ಯೆ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿದ್ದು, “ಇರಾನ್ ಒಪ್ಪಂದಕ್ಕೆ ಬರಲು ಸಿದ್ಧವಾಗಿರುವಂತೆ ಕಾಣುತ್ತಿದೆ. ಆದರೆ, ಅದು ಅಮೆರಿಕದ ಷರತ್ತುಗಳಿಗೆ ಅನುಗುಣವಾಗಿರಬೇಕು. ಒಪ್ಪಂದವಾಗದಿದ್ದರೆ ಮತ್ತೆ ಬಾಂಬ್ ದಾಳಿ ನಡೆಯಲಿದೆ. ಅದು ಹಿಂದಿನದಕ್ಕಿಂತ ಹೆಚ್ಚು ತೀವ್ರವಾಗಿರಲಿದೆ” ಎಂದು ಹೇಳಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, “ಎರಡು ತಿಂಗಳಿನಿಂದ ಮುಂದುವರಿದಿರುವ ಯುದ್ಧ ಶೀಘ್ರ ಅಂತ್ಯಗೊಳ್ಳಬಹುದು. ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಪುನರಾರಂಭವಾಗಬಹುದು. ಆದರೆ, ಅದು ಇರಾನ್ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಅಂತ್ಯಗೊಳಿಸಲು ಒಂದು ಪುಟದ ಕರಡು ಒಪ್ಪಂದದ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಈ ಒಪ್ಪಂದದಲ್ಲಿ ಇರಾನ್ ಯುರೇನಿಯಂ ಸಂವರ್ಧನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು, ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವುದು, ಸ್ಥಗಿತಗೊಂಡಿರುವ ಇರಾನ್‌ನ ವಿದೇಶಿ ನಿಧಿಗಳನ್ನು ಬಿಡುಗಡೆ ಮಾಡುವುದು ಹಾಗೂ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಹಡಗುಗಳಿಗೆ ತೆರೆಯುವುದು ಸೇರಿದೆ ಎನ್ನಲಾಗಿದೆ.

ಆದರೆ ಇರಾನ್ ವಿದೇಶಾಂಗ ಸಚಿವಾಲಯ ಅಮೆರಿಕದ ಕೆಲವು ಪ್ರಸ್ತಾವನೆಗಳನ್ನು ತೀವ್ರವಾಗಿ ತಿರಸ್ಕರಿಸಿದೆ. “ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಒಪ್ಪಂದವನ್ನು ನಾವು ಒಪ್ಪುವುದಿಲ್ಲ. ಆದರೆ ಹೊಸ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಇರಾನ್ ಸರ್ಕಾರ ಹೇಳಿದೆ.

ಹೋರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ಇಲ್ಲಿ ಉದ್ವಿಗ್ನತೆ ಹೆಚ್ಚಾದರೆ ವಿಶ್ವದ ಇಂಧನ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀಳುತ್ತದೆ. ಇರಾನ್ ಈ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಬಂದ್ ಮಾಡಿದ ಬಳಿಕ ಜಾಗತಿಕ ಇಂಧನ ಬೆಲೆಗಳು ಏರಿಕೆಯಾಗಿದ್ದು, ಅನೇಕ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಾಗಿದೆ. ವಿಶೇಷವಾಗಿ ಚೀನಾ ಸೇರಿದಂತೆ ತೈಲ ಆಮದು ಮೇಲೆ ಅವಲಂಬಿತ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ.

ಇದರ ನಡುವೆಯೇ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, “ಈ ಸಂಘರ್ಷ ಜಾಗತಿಕ ಶಾಂತಿಗೆ ಅಪಾಯವಾಗಿದೆ. ತಕ್ಷಣ ಕದನ ವಿರಾಮ ಜಾರಿಯಾಗಬೇಕು” ಎಂದು ಕರೆ ನೀಡಿದ್ದಾರೆ.

ಬೀಜಿಂಗ್‌ನಲ್ಲಿ ಇರಾನ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ಅವರು, ರಾಜತಾಂತ್ರಿಕ ಮಾತುಕತೆಯೇ ಸಮಸ್ಯೆಗೆ ಪರಿಹಾರ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಇಸ್ರೇಲ್ ಕೂಡ ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದ ಮೇಲೆ ದಾಳಿ ನಡೆಸಿದೆ. ಕಳೆದ ಏಪ್ರಿಲ್‌ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಬೈರೂತ್ ಮೇಲೆ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಮಾಹಿತಿ ಪ್ರಕಾರ, ಹಿಜ್ಬುಲ್ಲಾ ಸಂಘಟನೆಯ ರದ್ವಾನ್ ಪಡೆಯ ಕಮಾಂಡರ್ ಗುರಿಯಾಗಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿ ಆವರಿಸಿದ್ದು, ಅಮೆರಿಕ-ಇರಾನ್ ಒಪ್ಪಂದ ಸಾಧ್ಯತೆಗಳ ಮೇಲೂ ಅನುಮಾನಗಳು ಮೂಡುವಂತೆ ಮಾಡಿದೆ. ಜಾಗತಿಕ ಸಮುದಾಯ ಇದೀಗ ಎರಡೂ ರಾಷ್ಟ್ರಗಳು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುತ್ತವೆಯೇ ಅಥವಾ ಮತ್ತೆ ಯುದ್ಧದ ಮಾರ್ಗ ಹಿಡಿಯುತ್ತವೆಯೇ ಎಂಬುದನ್ನು ಕಾತರದಿಂದ ಗಮನಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.