ಟೆಹ್ರಾನ್ ಶಾಂತಿ ಪ್ರಸ್ತಾವನೆಗೆ ಒಪ್ಪದ ಟ್ರಂಪ್: ಇರಾನ್-ಅಮೆರಿಕ ಸಂಘರ್ಷ ಪುನರಾರಂಭ ಸಾಧ್ಯತೆ; ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ
ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಯುದ್ಧ ಆರಂಭವಾಗುವ ಸಾಧ್ಯತೆ ಬಹಳ ಹೆಚ್ಚಿದೆ. ಅಮೆರಿಕವು ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲ. ಮಾತುಕತೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಈಗಿನ ಪರಿಸ್ಥಿತಿ ಮತ್ತೆ ಪೂರ್ಣ ಪ್ರಮಾಣದ ಸಂಘರ್ಷದತ್ತ ಸಾಗುವ ಸೂಚನೆಗಳನ್ನು ನೀಡುತ್ತಿದೆ. ಕೆಲ ತಿಂಗಳ ಹಿಂದೆ ಆರಂಭವಾದ ಯುದ್ಧದ ನಂತರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಸಂಘರ್ಷ ಇದೀಗ ಮತ್ತೆ ಆರಂಭವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ.
ಎರಡೂ ದೇಶಗಳ ಉನ್ನತ ಮಟ್ಟದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ, ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಳ್ಳುವ ಸಾಧ್ಯತೆಗಳನ್ನು ಸೂಚಿಸುತ್ತಿವೆ.
ಇರಾನ್ ಸೇನೆಯ ಕೇಂದ್ರ ಕಮಾಂಡ್ನ ಹಿರಿಯ ಅಧಿಕಾರಿ ಮೊಹಮ್ಮದ್ ಜಫರ್ ಅಸದಿ ಅವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಯುದ್ಧ ಆರಂಭವಾಗುವ ಸಾಧ್ಯತೆ ಬಹಳ ಹೆಚ್ಚಿದೆ. ಅಮೆರಿಕವು ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲ. ಮಾತುಕತೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇದೇ ಕಾರಣದಿಂದ ಭದ್ರತಾ ಸಿದ್ಧತೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಈ ನಡುವೆ ಇರಾನಿನ ಪ್ರಸ್ತಾವನೆಯ ಕುರಿತು ವಿವರಗಳನ್ನು ನೀಡಲು ಶ್ವೇತಭವನ ನಿರಾಕರಿಸಿದೆ, ಆದರೆ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಟೆಹ್ರಾನ್ ಅವರು, ಪರಮಾಣು ಯೋಜನೆಯ ಆಗ್ರಹಗಳನ್ನು ತಿದ್ದುಪಡಿ ಮಾಡಿ ಮರು ಸಲ್ಲಿಸಿದ್ದಾರೆಂದು ಹೇಳಿದ್ದಾರೆ.
ಇರಾನ್ನ ನ್ಯಾಯಾಂಗ ಮುಖ್ಯಸ್ಥ ಘೋಲಮ್ಹೊಸೇನ್ ಮೊಹ್ಸೆನಿ ಎಜೆಯ್ ಅವರು ಮಾತನಾಡಿ, ತಮ್ಮ ದೇಶವು "ಮಾತುಕತೆಗಳಿಂದ ಎಂದಿಗೂ ದೂರ ಸರಿದಿಲ್ಲ", ಆದರೆ ಶಾಂತಿ ನಿಯಮಗಳ "ಹೇರಿಕೆ"ಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿವೆ.
ಇರಾನ್ ನೀಡಿದ ಹೊಸ ಶಾಂತಿ ಪ್ರಸ್ತಾವನೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, “ಅವರ ಪ್ರಸ್ತಾವನೆಗಳು ಒಪ್ಪಲಾಗದಂತಿದ್ದು, ತೃಪ್ತಿಕರವಾಗಿಲ್ಲ” ಎಂದು ಹೇಳಿದ್ದಾರೆ. ಜೊತೆಗೆ, “ದಾಳಿ ಮಾಡಿ ಸಮಸ್ಯೆ ಅಂತ್ಯಗೊಳಿಸಬೇಕಾ ಅಥವಾ ಒಪ್ಪಂದದ ಮೂಲಕ ಪರಿಹರಿಸಬೇಕಾ ಎಂಬ ಆಯ್ಕೆ ನಮ್ಮ ಮುಂದೆ ಇದೆ ಎಂದೂ ತಿಳಿಸಿದ್ದಾರೆ. ಈ ಹೇಳಿಕೆ ಯುದ್ಧ ಸಾಧ್ಯತೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಏತನ್ಮಧ್ಯೆ ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗುತ್ತಿದ್ದರೂ, ಇದರಿಂದ ಯಾವುದೇ ಪ್ರಗತಿಗಳು ಕಂಡು ಬರುತ್ತಿಲ್ಲ. ಈ ಹಿಂದಿನ ಚರ್ಚೆಗಳೂ ಯಾವುದೇ ಅಂತಿಮ ಒಪ್ಪಂದಕ್ಕೆ ತಲುಪದೆ ವಿಫಲವಾಗಿದ್ದರಿಂದ, ಈಗಿನ ಪ್ರಯತ್ನಗಳ ಮೇಲೂ ಅನುಮಾನಗಳು ಹೆಚ್ಚಾಗಿವೆ.
ಪರಮಾಣು ಯೋಜನೆ ವಿವಾದ ಈ ಸಂಘರ್ಷದ ಕೇಂದ್ರಬಿಂದುವಾಗಿ ಉಳಿದಿದೆ. ಅಮೆರಿಕ ಇರಾನ್ ತನ್ನ ಯುರೇನಿಯಂ ಸಂಗ್ರಹಣೆ ಮತ್ತು ಪರಮಾಣು ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಒತ್ತಾಯಿಸುತ್ತಿದೆ.
ವಿಶೇಷವಾಗಿ ಕೆಲವು ಸ್ಥಳಗಳಲ್ಲಿ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಬೇಕೆಂಬ ಷರತ್ತುಗಳನ್ನು ಮುಂದಿಟ್ಟಿದೆ. ಆದರೆ ಇರಾನ್ ಇದನ್ನು ತನ್ನ ಸ್ವಾಯತ್ತ ಹಕ್ಕಿನ ಮೇಲೆ ಹಸ್ತಕ್ಷೇಪ ಎಂದು ಪರಿಗಣಿಸುತ್ತಿದ್ದು, ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಮೇಲ್ವಿಚಾರಣೆಯಡಿ ತನ್ನ ಚಟುವಟಿಕೆಗಳು ಕಾನೂನುಬದ್ಧವಾಗಿವೆ ಎಂದು ವಾದಿಸುತ್ತಿದೆ.
ಈ ಪರಸ್ಪರ ವಿರೋಧದ ನಡುವೆ ವಿಶ್ವ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬಿದ್ದಿದೆ. ತೈಲ ಬೆಲೆಗಳು ಏರಿಳಿತದಿಂದ ಅಸ್ಥಿರವಾಗಿದ್ದು, ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಪರಿಸ್ಥಿತಿ ಗಂಭೀರವಾಗಿದೆ. ಈ ಮಾರ್ಗವು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಕೇಂದ್ರವಾಗಿರುವುದರಿಂದ, ಯಾವುದೇ ಅಸ್ಥಿರತೆ ತಕ್ಷಣವೇ ಜಾಗತಿಕ ಆರ್ಥಿಕತೆಗೆ ಪರಿಣಾಮ ಬೀರುತ್ತದೆ. ಈಗಾಗಲೇ ತೈಲ ಮತ್ತು ಅನಿಲ ಸಾಗಣೆಯಲ್ಲಿ ಅಡಚಣೆಗಳು ಉಂಟಾಗಿದೆ.
ಇದೆಲ್ಲದರ ನಡುವೆ ಸಂಘರ್ಷದ ಪರಿಣಾಮ ಇರಾನ್ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ದರ ಏರಿಕೆ 50 ಪ್ರತಿಶತಕ್ಕಿಂತ ಹೆಚ್ಚಾಗಿದ್ದು, ಸಾಮಾನ್ಯ ಜನರ ಜೀವನ ದುಸ್ತರವಾಗಿದೆ. ತೈಲ ರಫ್ತು ಕಡಿಮೆಯಾಗಿರುವುದು ಸರ್ಕಾರದ ಆದಾಯವನ್ನು ತೀವ್ರವಾಗಿ ಕುಗ್ಗಿಸಿದೆ. ಜನರು ತಮ್ಮ ಉಳಿತಾಯ, ಚಿನ್ನ ಮತ್ತು ವಿದೇಶಿ ಕರೆನ್ಸಿ ಮೇಲೆ ಅವಲಂಬಿತರಾಗಿದ್ದು, ಆ ಸಂಪನ್ಮೂಲಗಳು ಮುಗಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಅಮೆರಿಕದಲ್ಲೂ ಈ ಯುದ್ಧ ಸಂಬಂಧಿತ ನಿರ್ಧಾರಗಳು ಚರ್ಚೆಗೆ ಕಾರಣವಾಗಿವೆ. ಸಂಸತ್ತಿನ ಅನುಮತಿ ಇಲ್ಲದೆ ಯುದ್ಧ ಮುಂದುವರಿಸಿರುವುದೇ ಕಾನೂನುಬಾಹಿರ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.
ಟ್ರಂಪ್ ಸರ್ಕಾರ ತಾತ್ಕಾಲಿಕ ಕದನ ವಿರಾಮದಿಂದ ಕಾನೂನು ಅವಧಿ ಮರುಹೊಂದಿಕೆ ಆಗುತ್ತದೆ ಎಂದು ವಾದಿಸುತ್ತಿದ್ದರೂ, ಈ ವಿಚಾರ ಕಾನೂನು ವಿವಾದವಾಗಿ ಮುಂದುವರಿಯುತ್ತಿದೆ.
ಒಟ್ಟಾರೆ, ಮಾತುಕತೆಗಳು ಫಲ ನೀಡದಿರುವುದು, ಪರಸ್ಪರ ಆರೋಪಗಳು ಹೆಚ್ಚುತ್ತಿರುವುದು ಮತ್ತು ಆರ್ಥಿಕ ಒತ್ತಡ ಗಂಭೀರವಾಗುತ್ತಿರುವುದು ಎಲ್ಲವೂ ಸೇರಿ ಇರಾನ್ ಮತ್ತು ಅಮೆರಿಕ ನಡುವಿನ ಪರಿಸ್ಥಿತಿ ಮತ್ತೆ ದೊಡ್ಡ ಮಟ್ಟದ ಯುದ್ಧದತ್ತ ಸಾಗುವ ಅಪಾಯವನ್ನು ಹೆಚ್ಚಿಸಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



