ವಿದೇಶ

ಕೆಟ್ಟ ಮೇಲೆ ಬುದ್ದಿ: Khalistan 'ರಾಷ್ಟ್ರೀಯ ಭದ್ರತಾ ಬೆದರಿಕೆ' ಎಂದು ಘೋಷಿಸಿದ ಕೆನಡಾ

ಕೆನಡಾದ ಗುಪ್ತಚರ ಸಂಸ್ಥೆಯಾದ CSIS ತನ್ನ ವರದಿಯಲ್ಲಿ, ಕೆನಡಾ ಮೂಲದ ಖಲಿಸ್ತಾನಿ ಉಗ್ರಗಾಮಿಗಳನ್ನು (CBKEs) ಅಧಿಕೃತವಾಗಿ 'ರಾಷ್ಟ್ರೀಯ ಭದ್ರತಾ ಬೆದರಿಕೆ' ಎಂದು ಘೋಷಿಸಿದೆ.

ಕೆಟ್ಟ ಮೇಲೆ ಬುದ್ದಿ: Khalistan 'ರಾಷ್ಟ್ರೀಯ ಭದ್ರತಾ ಬೆದರಿಕೆ' ಎಂದು ಘೋಷಿಸಿದ ಕೆನಡಾ
ಕೆನಡಾ ಸಂಸತ್ತು ಮತ್ತು ಖಲಿಸ್ತಾನಿ ಹೋರಾಟಗಾರರು
Published On :

ಒಟ್ಟಾವಾ: ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಮಾತು ಕೆನಡಾ ಸರ್ಕಾರಕ್ಕೆ ಅಕ್ಷರಶಃ ಒಪ್ಪುತ್ತದೆ... ಈ ಹಿಂದೆ ಖಲಿಸ್ತಾನಿಗಳ ವಿಚಾರವಾಗಿ ಭಾರತವನ್ನು ಎದುರು ಹಾಕಿಕೊಂಡಿದ್ದ ಕೆನಡಾ ಇದೀಗ ಅದೇ ಖಲಿಸ್ತಾನಿಗಳನ್ನು 'ರಾಷ್ಟ್ರೀಯ ಭದ್ರತಾ ಬೆದರಿಕೆ' ಎಂದು ಘೋಷಿಸಿದೆ.

ಹೌದು.. ಅಚ್ಚರಿಯಾದರೂ ನಿಜ.. ಕೆನಡಾದ ಗುಪ್ತಚರ ಸಂಸ್ಥೆಯಾದ CSIS (Canadian Security Intelligence Service), ಮೇ 2026 ರಲ್ಲಿ ಬಿಡುಗಡೆ ಮಾಡಿದ ತನ್ನ 2025ರ ಸಾರ್ವಜನಿಕ ವರದಿಯಲ್ಲಿ, ಕೆನಡಾ ಮೂಲದ ಖಲಿಸ್ತಾನಿ ಉಗ್ರಗಾಮಿಗಳನ್ನು (CBKEs) ಅಧಿಕೃತವಾಗಿ 'ರಾಷ್ಟ್ರೀಯ ಭದ್ರತಾ ಬೆದರಿಕೆ' ಎಂದು ಘೋಷಿಸಿದೆ.

ಕೆನಡಾದಲ್ಲಿರುವ ಒಂದು ಖಲಿಸ್ತಾನಿ ಸಣ್ಣ ಗುಂಪು, ಭಾರತದ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳನ್ನು ಯೋಜಿಸಲು, ಹಣ ಸಂಗ್ರಹಿಸಲು ಮತ್ತು ಪ್ರಚಾರ ಮಾಡಲು ಕೆನಡಾವನ್ನು ನೆಲೆಯಾಗಿ ಬಳಸಿಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.

ಅವರು ತಮ್ಮ ಹಿಂಸಾತ್ಮಕ ಉಗ್ರಗಾಮಿ ಕಾರ್ಯಸೂಚಿಯನ್ನು ಉತ್ತೇಜಿಸಲು ಕೆನಡಾದ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಾರೆ ಮತ್ತು ಅನುಮಾನಾಸ್ಪದ ಸಮುದಾಯದ ಸದಸ್ಯರಿಂದ ಹಣವನ್ನು ಸಂಗ್ರಹಿಸುತ್ತಾರೆ, ನಂತರ ಅವುಗಳನ್ನು ಹಿಂಸಾತ್ಮಕ ಚಟುವಟಿಕೆಗಳ ಕಡೆಗೆ ತಿರುಗಿಸಲಾಗುತ್ತದೆ' ಎಂದು ಕೆನಡಾ ಸರ್ಕಾರದ ವೆಬ್‌ಸೈಟ್‌ನಲ್ಲಿ ಶುಕ್ರವಾರ ಬಿಡುಗಡೆಯಾದ ವರದಿಯಲ್ಲಿ ತಿಳಿಸಲಾಗಿದೆ.

ಶಾಂತಿಯುತವಾಗಿ ಪ್ರತ್ಯೇಕ ಖಲಿಸ್ತಾನ್ ರಾಜ್ಯಕ್ಕಾಗಿ ಹೋರಾಡುವುದನ್ನು ಉಗ್ರಗಾಮಿ ಚಟುವಟಿಕೆ ಎಂದು ಪರಿಗಣಿಸಲಾಗುವುದಿಲ್ಲ. ಕೇವಲ ಹಿಂಸೆಯನ್ನು ಪ್ರಚೋದಿಸುವವರನ್ನು ಮಾತ್ರ ಬೆದರಿಕೆ ಎಂದು ಪರಿಗಣಿಸಲಾಗಿದೆ ಎಂದು CSIS ಸ್ಪಷ್ಟಪಡಿಸಿದೆ.

ಕೆನಡಾದ ಹಣಕಾಸು ಸಚಿವಾಲಯವು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (BKI) ಮತ್ತು ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ISYF) ನಂತಹ ಗುಂಪುಗಳನ್ನು ಹಣ ಸಂಗ್ರಹಣೆಯಲ್ಲಿ ತೊಡಗಿರುವ ಭಯೋತ್ಪಾದಕ ಸಂಸ್ಥೆಗಳು ಎಂದು ಪಟ್ಟಿ ಮಾಡಿದೆ.

ಕೆನಡಾ ನಾಯಕತ್ವ ಬದಲಾವಣೆ ಬೆನ್ನಲ್ಲೇ ಮಹತ್ವದ ಕ್ರಮ

ಜಸ್ಟಿನ್ ಟ್ರುಡೋ ಅವರ ನಂತರ ಅಧಿಕಾರಕ್ಕೆ ಬಂದ ಪ್ರಧಾನಿ ಮಾರ್ಕ್ ಕಾರ್ನಿ ಅವರ ನೇತೃತ್ವದಲ್ಲಿ ಕೆನಡಾ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತದ ಭದ್ರತಾ ಕಾಳಜಿಗಳನ್ನು ಪರಿಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ಹಿಂದೆ ಆಲ್ಬರ್ಟಾದಲ್ಲಿ ನಡೆದ ಜಿ7 (G7) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರ್ಕ್ ಕಾರ್ನಿ ನಡುವಿನ ಭೇಟಿಯ ನಂತರ ಈ ಬೆಳವಣಿಗೆ ನಡೆದಿದೆ. ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.

ಖಲಿಸ್ತಾನಿ ಉಗ್ರತ್ವ ಹಿನ್ನೆಲೆ

1985ರ ಏರ್ ಇಂಡಿಯಾ ಫ್ಲೈಟ್ 182 ಸ್ಫೋಟವನ್ನು (ಕೆನಡಾ ಇತಿಹಾಸದ ಅತ್ಯಂತ ಭೀಕರ ಭಯೋತ್ಪಾದನಾ ದಾಳಿ) ಉಲ್ಲೇಖಿಸಿರುವ ಸಂಸ್ಥೆಯು, ಅಂದಿನಿಂದ ಇಂದಿನವರೆಗೆ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆಗಳನ್ನು ಭದ್ರತಾ ಬೆದರಿಕೆ ಎಂದು ಗುರುತಿಸಿದೆ. 'ಇದು ಇಂದಿಗೂ ಕೆನಡಾದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದ್ದು, 329 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಕೆನಡಿಯನ್ನರು ಇದ್ದರು' ಎಂದು ಅದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.