ವಿದೇಶ

ಕದನ ವಿರಾಮ ನಡುವಲ್ಲೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ: 10 ಮಂದಿ ಸಾವು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ!

ದಕ್ಷಿಣ ಲೆಬನಾನ್ ಭಾಗದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ನಾಗರಿಕರು ಸೇರಿದಂತೆ ಹಲವರು ಬಲಿಯಾಗಿದ್ದಾರೆ.

ಕದನ ವಿರಾಮ ನಡುವಲ್ಲೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ: 10 ಮಂದಿ ಸಾವು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ!
ಡ್ರೋನ್ ದಾಳಿ ಚಿತ್ರ
Published On :

ಕದನ ವಿರಾಮ ಘೋಷಣೆಯಾಗಿದ್ದರು, ಲೆಬನಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ| ಮತ್ತೆ ಮುಂದುವರೆದಿದ್ದು, ಇದರಿಂದ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ದಕ್ಷಿಣ ಲೆಬನಾನ್ ಭಾಗದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ನಾಗರಿಕರು ಸೇರಿದಂತೆ ಹಲವರು ಬಲಿಯಾಗಿದ್ದಾರೆ.

ಈ ದಾಳಿಗಳು ಹಬ್ಬೂಷ್, ಕ್ಫರ್ ರುಮ್ಮಾನ್ ಸೇರಿದಂತೆ ಹಲವು ಗ್ರಾಮಗಳನ್ನು ಗುರಿಯಾಗಿಸಿಕೊಂಡು ನಡೆದಿವೆ. ದಾಳಿಯಲ್ಲಿ ಮನೆಗಳು, ರಸ್ತೆ ಮೂಲಸೌಕರ್ಯಗಳು ಹಾನಿಗೊಳಗಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಏತನ್ಮಧ್ಯೆ ಇಸ್ರೇಲ್ ದಾಳಿಗಳಿಗೆ ಪ್ರತಿಯಾಗಿ ಹಿಜ್ಬುಲ್ಲಾ ಕೂಡ ತನ್ನ ದಾಳಿಗಳನ್ನು ತೀವ್ರಗೊಳಿಸಿದೆ. ಡ್ರೋನ್ ಮೂಲಕ ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಸ್ರೇಲ್ ಸೈನ್ಯದ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಹಿಜ್ಬುಲ್ಲಾ ಬಳಸುತ್ತಿರುವ ಡ್ರೋನ್‌ಗಳು ಕಡಿಮೆ ಎತ್ತರದಲ್ಲಿ ಹಾರುವುದರಿಂದ ರಡಾರ್‌ಗಳಿಗೆ ಸುಲಭವಾಗಿ ಸಿಕ್ಕದೆ ಇರುವುದರಿಂದ ಇವುಗಳನ್ನು ತಡೆಹಿಡಿಯುವುದು ಸವಾಲಾಗಿದೆ.

ಈ ಸಂಘರ್ಷದಲ್ಲಿ ಡ್ರೋನ್ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಕಡಿಮೆ ವೆಚ್ಚದಲ್ಲಿ ತಯಾರಾಗುವ ಮತ್ತು ಸುಲಭವಾಗಿ ನಿಯಂತ್ರಿಸಬಹುದಾದ ಡ್ರೋನ್‌ಗಳನ್ನು ಹಿಜ್ಬುಲ್ಲಾ ಪರಿಣಾಮಕಾರಿಯಾಗಿ ಬಳಸುತ್ತಿದ್ದು, ಇಸ್ರೇಲ್ ಸೇನೆಗೆ ಹೊಸ ತಂತ್ರಜ್ಞಾನದ ಸವಾಲುಗಳನ್ನು ಎದುರು ಮಾಡುತ್ತಿದೆ.

ಈ ದಾಳಿಗಳಿಂದ ಕೆಲವು ವಾರಗಳ ಹಿಂದೆ ಘೋಷಿಸಲಾದ ಕದನ ವಿರಾಮ ಬಹುತೇಕ ವಿಫಲವಾದಂತಾಗಿದೆ. ಕದನ ವಿರಾಮ ಇದ್ದರೂ ಎರಡೂ ರಾಷ್ಟ್ರಗಳಿಂದ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಗಡಿ ಪ್ರದೇಶಗಳಲ್ಲಿ ಜನರು ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಂಘರ್ಷವು ಮಾರ್ಚ್ 2026ರಿಂದ ಹೆಚ್ಚು ತೀವ್ರಗೊಂಡಿದ್ದು, ಲೆಬನಾನ್‌ನಲ್ಲಿ ಈವರೆಗೂ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಯುದ್ಧದ ಪರಿಣಾಮ ವಿದ್ಯುತ್, ನೀರು, ಆರೋಗ್ಯ ಸೇವೆಗಳು ಸೇರಿದಂತೆ ಮೂಲಭೂತ ಸೌಲಭ್ಯಗಳು ಕುಸಿದಿವೆ. ಮಾನವೀಯ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅಂತರರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮಾತುಕತೆಗಳು ಮುಂದುವರಿದರೂ, ನೆಲಮಟ್ಟದಲ್ಲಿ ಹಿಂಸಾಚಾರ ನಿಲ್ಲದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಸಂಘರ್ಷ ಮುಂದುವರಿದರೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ದೇಶಗಳು ಭಾಗಿಯಾಗುವ ಸಾಧ್ಯತೆ ಇದ್ದು, ವ್ಯಾಪಕ ಯುದ್ಧದ ಭೀತಿ ಹೆಚ್ಚುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.