ವಿದೇಶ

West Asia Conflict: ಪ್ರಧಾನಿ ಮೋದಿ-ಟ್ರಂಪ್ ದೂರವಾಣಿ ಮಾತುಕತೆ; ಎಲಾನ್ ಮಸ್ಕ್ ಎಂಟ್ರಿ; ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ

ಮಧ್ಯ ಪ್ರಾಚ್ಯದಲ್ಲಿ ಫೆಬ್ರವರಿ 28ರಿಂದ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಟ್ರಂಪ್ ಅವರು, ಮೋದಿ ಅವರಿಗೆ ಕರೆ ಮಾಡಿದ್ದು, ಯುದ್ಧ ಆರಂಭವಾದ ಬಳಿಕ ಇವರಿಬ್ಬರ ನಡುವೆ ನಡೆದ ಮೊದಲ ಅಧಿಕೃತ ಮಾತುಕತೆ ಇದಾಗಿದೆ ಎನ್ನಲಾಗಿದೆ.

West Asia Conflict: ಪ್ರಧಾನಿ ಮೋದಿ-ಟ್ರಂಪ್ ದೂರವಾಣಿ ಮಾತುಕತೆ; ಎಲಾನ್ ಮಸ್ಕ್ ಎಂಟ್ರಿ; ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ
ಸಂಗ್ರಹ ಚಿತ್ರ
Published On :

ನವದೆಹಲಿ/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವಿನ ಮಹತ್ವದ ದೂರವಾಣಿ ಮಾತುಕತೆಯಲ್ಲಿ ಉದ್ಯಮಿ ಎಲಾನ್ ಮಸ್ಕ್ ಅವರು ಭಾಗವಹಿಸಿದ್ದರು ಎಂಬ ಸುದ್ದಿ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಧ್ಯ ಪ್ರಾಚ್ಯ ಸಂಘರ್ಷ ಉಲ್ಬಣಗೊಂಡಿರುವ ಹಿನ್ನೆಲೆ ಟ್ರಂಪ್ ಹಾಗೂ ಮೋದಿ ನಡುವೆ ಮಹತ್ವದ ಮಾತುಕತೆ ನಡೆದಿದೆ ಎಂದು The New York Times ವರದಿ ಮಾಡಿದೆ.

ಮಧ್ಯ ಪ್ರಾಚ್ಯದಲ್ಲಿ ಫೆಬ್ರವರಿ 28ರಿಂದ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಟ್ರಂಪ್ ಅವರು, ಮೋದಿ ಅವರಿಗೆ ಕರೆ ಮಾಡಿದ್ದು, ಯುದ್ಧ ಆರಂಭವಾದ ಬಳಿಕ ಇವರಿಬ್ಬರ ನಡುವೆ ನಡೆದ ಮೊದಲ ಅಧಿಕೃತ ಮಾತುಕತೆ ಇದಾಗಿದೆ ಎನ್ನಲಾಗಿದೆ.

ಈ ವೇಳೆ ಎಲಾನ್ ಮಸ್ಕ್ ಕೂಡ ಸಂಭಾಷಣೆಯಲ್ಲಿ ಭಾಗಿಯಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಅಲ್ಲದೆ, ಶಿಷ್ಟಾಚಾರ ಉಲ್ಲಂಘನೆಯಾಗಿರುವ ಮಾತುಗಳೂ ಕೂಡ ಕೇಳಿ ಬರುತ್ತಿವೆ.

ಸಾಮಾನ್ಯವಾಗಿ ಎರಡು ರಾಷ್ಟ್ರಗಳ ಮುಖ್ಯಸ್ಥರ ನಡುವಿನ ಸೂಕ್ಷ್ಮ ಹಾಗೂ ರಹಸ್ಯ ಮಾತುಕತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಭಾಗವಹಿಸುವುದು ಅಪರೂಪ. ವಿಶೇಷವಾಗಿ ಯುದ್ಧದಂತಹ ಸಂಕಷ್ಟಕರ ಸಂದರ್ಭಗಳಲ್ಲಿ ಇಂತಹ ಘಟನೆಗಳು ಅಂತರರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳ ಬಗ್ಗೆ ಪ್ರಶ್ನೆಗಳನ್ನು ಉದ್ಭವಿಸುವಂತೆ ಮಾಡುತ್ತವೆ.

ಟ್ರಂಪ್ ಹಾಗೂ ಮೋದಿ ಅವರ ನಡುವಿನ ಈ ದೂರಾವಣಿ ಸಂಭಾಷಣೆಯಲ್ಲಿ ಎಲಾನ್ ಮಸ್ಕ್ ಅವರು ಮಾತನಾಡಿದ್ದಾರೆಯೇ ಅಥವಾ ಕೇವಲ ಹಾಜರಿದ್ದರೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಈ ನಡುವೆ ಮೋದಿ ಹಾಗೂ ಟ್ರಂಪ್ ಅವರ ನಡುವೆ ನಡೆದಿರುವ ಈ ಮಾತುಕತೆಗಳನ್ನು ವೈಟ್ ಹೌಸ್ ಈ “ಫಲಪ್ರದ” ಎಂದು ವಿವರಿಸಿದೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು, ಟ್ರಂಪ್ ಮತ್ತು ಮೋದಿ ನಡುವಿನ ಸಂಬಂಧ ಉತ್ತಮವಾಗಿದ್ದು, ಈ ಸಂಭಾಷಣೆ ಸಹಕಾರಾತ್ಮಕವಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ಮಸ್ಕ್ ಭಾಗವಹಿಸಿದ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆಗಳನ್ನು ಅವರು ನೀಡಿಲ್ಲ.

ಮತ್ತೊಂದೆಡೆ, ಕಳೆದ ವರ್ಷ ಟ್ರಂಪ್ ಮತ್ತು ಮಸ್ಕ್ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳ ನಂತರ ಇವರಿಬ್ಬರ ನಡುವಿನ ಸಂಬಂಧ ಮತ್ತೆ ಸುಧಾರಿಸಿಕೊಂಡಿದೆಯೇ ಎಂಬ ಪ್ರಶ್ನೆಗಳೂ ಆರಂಭವಾಗತೊಡಗಿವೆ.

ಟೆಸ್ಲಾ, ಸ್ಪೇಸ್‌ಎಕ್ಸ್ ಸೇರಿದಂತೆ ಅನೇಕ ಪ್ರಮುಖ ತಂತ್ರಜ್ಞಾನ ಕಂಪನಿಗಳ ಮುಖ್ಯಸ್ಥನಾಗಿರುವ ಮಸ್ಕ್ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಭಾವವನ್ನು ಹೊಂದಿದ್ದಾರೆ.

ಉಕ್ರೇನ್ ಯುದ್ಧದ ಸಮಯದಲ್ಲೂ ಸ್ಟಾರ್‌ಲಿಂಕ್ ಸೇವೆಗಳ ಮೂಲಕ ಮಸ್ಕ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮಧ್ಯ ಪ್ರಾಚ್ಯ ಸಂಘರ್ಷದ ವಿಚಾರದಲ್ಲೂ ಅವರ ಹೆಸರು ಕೇಳಿಬರುತ್ತಿರುವುದು ಖಾಸಗಿ ತಂತ್ರಜ್ಞಾನ ನಾಯಕರ ಪ್ರಭಾವ ಎಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ.

ಈ ಘಟನೆ ಜಾಗತಿಕ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ರಾಷ್ಟ್ರಗಳ ನಡುವಿನ ಸೂಕ್ಷ್ಮ ವಿಚಾರಗಳಲ್ಲಿ ಖಾಸಗಿ ವ್ಯಕ್ತಿಗಳ ಪಾತ್ರ ಎಷ್ಟು ಸೂಕ್ತ? ತಂತ್ರಜ್ಞಾನ ದಿಗ್ಗಜರ ಪ್ರಭಾವ ರಾಜಕೀಯ ನಿರ್ಧಾರಗಳ ಮೇಲೆ ಎಷ್ಟರ ಮಟ್ಟಿಗೆ ಬೀರುತ್ತಿದೆ? ಎಂಬ ಚರ್ಚೆಗಳು ತೀವ್ರಗೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.