ಪಶ್ಚಿಮ ಏಷ್ಯಾದಲ್ಲಿ 10,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಅಮೆರಿಕ ಮುಂದು!
ಈ ಹೆಚ್ಚುವರಿ ಪಡೆಯನ್ನು ಎಲ್ಲಿಗೆ ಕಳುಹಿಸಲಾಗುತ್ತದೆ ಅಥವಾ ನಿಯೋಜಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು WSJ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಷಿಂಗ್ಟನ್: ಇರಾನ್ ಜೊತೆಗಿನ ಮಾತುಕತೆಗಳ ಹೊರತಾಗಿಯೂ, ಪಶ್ಚಿಮ ಏಷ್ಯಾದಲ್ಲಿ ಹೆಚ್ಚುವರಿಯಾಗಿ 10,000 ಭೂಸೇನಾ ಪಡೆಗಳನ್ನು ಕಳುಹಿಸುವ ಬಗ್ಗೆ ಅಮೆರಿಕ ಚಿಂತಿಸುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಗುರುವಾರ ಪ್ರಕಟಿಸಿದ ವರದಿಯನ್ನು ಉಲ್ಲೇಖಿಸಿ ದಿ ಜೆರುಸಲೆಮ್ ಪೋಸ್ಟ್ ತಿಳಿಸಿದೆ.
ದಿ ಜೆರುಸಲೆಮ್ ಪೋಸ್ಟ್ ಪ್ರಕಾರ, ಈ ಬಗ್ಗೆ ಯುದ್ಧ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ನಿಯೋಜನೆಯು ಈಗಾಗಲೇ ಈ ಪ್ರದೇಶಕ್ಕೆ ನಿಯೋಜಿಸಲಾಗಿರುವ 82ನೇ ವಾಯುಗಾಮಿ ವಿಭಾಗದ ಜೊತೆಗೆ ಪದಾತಿ ದಳ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಒಳಗೊಂಡಿರಬಹುದೆಂದು ಹೇಳಿದೆ.
82ನೇ ವಾಯುಗಾಮಿ ವಿಭಾಗದ ನಿಯೋಜನೆಯು ಖಾರ್ಗ್ ದ್ವೀಪದಂತಹ ಇರಾನಿನ ಕಾರ್ಯತಂತ್ರದ ಹಿತಾಸಕ್ತಿಗಳನ್ನು ನೇರವಾಗಿ ಗುರಿಯಾಗಿರಿಸಿಕೊಂಡಿದೆ ಎಂದು ತಜ್ಞರು ಹೇಳಿದ್ದರೂ, ಈ ಹೆಚ್ಚುವರಿ ಪಡೆಯನ್ನು ಎಲ್ಲಿಗೆ ಕಳುಹಿಸಲಾಗುತ್ತದೆ ಅಥವಾ ನಿಯೋಜಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು WSJ ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಹೆಚ್ಚುವರಿ ಪಡೆಗಳ ನಿಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಕಟಣೆಗಳು ಯುದ್ಧ ಇಲಾಖೆಯಿಂದ ಬರುತ್ತವೆ" ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ಹೇಳಿದ್ದಾರೆ.
"ನಾವು ಹೇಳಿದಂತೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವಾಗಲೂ ಎಲ್ಲಾ ಮಿಲಿಟರಿ ಆಯ್ಕೆಗಳನ್ನು ಹೊಂದಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಯುಎಸ್ ಸೆಂಟ್ರಲ್ ಕಮಾಂಡ್(CENTCOM) ವಕ್ತಾರರು WSJ ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವಂತೆಯೇ ಈ ಬೆಳವಣಿಗೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



