ವಿದೇಶ

West Asia war: ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಾದರೆ, ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಇರಾನ್ ಕಠಿಣ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ 48 ಗಂಟೆಗಳ ಗಡುವು ನೀಡಿ, ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್ ದೇಶದ ಪ್ರಮುಖ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದರು.

West Asia war: ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಾದರೆ, ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಇರಾನ್ ಕಠಿಣ ಎಚ್ಚರಿಕೆ
ಮಧ್ಯಪ್ರಾಚ್ಯ ಸಂಘರ್ಷ
Published On :

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ದಿನೇದಿನೇ ಭೀಕರ ಸ್ವರೂಪ ಪಡೆಯುತ್ತಿದ್ದು, ಈ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿದ್ದು, ಹೋರ್ಮುಜ್ ಜಲಸಂಧಿ ವಿಚಾರದಿಂದ ಸಂಘರ್ಷ ಮತ್ತಷ್ಟು ಗಂಭೀರ ಹಂತ ತಲುಪಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ 48 ಗಂಟೆಗಳ ಗಡುವು ನೀಡಿ, ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್ ದೇಶದ ಪ್ರಮುಖ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಇರಾನ್, “ನಮ್ಮ ಮೇಲೆ ದಾಳಿ ನಡೆದರೆ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು” ಎಂದು ಕಠಿಣ ಎಚ್ಚರಿಕೆ ನೀಡಿದೆ.

ಇರಾನ್ ಸಂಸತ್ ಅಧ್ಯಕ್ಷ ಮೊಹಮ್ಮದ್ ಬಘರ್ ಖಲೀಬಾಫ್ ಕಠಿಣ ಎಚ್ಚರಿಕೆ ನೀಡಿದ್ದು, “ನಮ್ಮ ವಿದ್ಯುತ್ ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ ಗಲ್ಫ್ ಪ್ರದೇಶದ ತೈಲ ಶುದ್ಧೀಕರಣ ಘಟಕಗಳು, ಬಂದರುಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗುತ್ತದೆ” ಎಂದು ಹೇಳಿದ್ದಾರೆ. ಇದು ಗಲ್ಫ್ ರಾಷ್ಟ್ರಗಳ ಸುರಕ್ಷತೆಗೆ ದೊಡ್ಡ ಸವಾಲು ಉಂಟುಮಾಡಿದೆ.

ಇದರಿಂದ ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವು ದೇಶಗಳು ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿವೆ. ಈ ನಡುವೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಭೀತಿ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.

ಇಸ್ರೇಲ್ ಭಾಗದಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ದಕ್ಷಿಣ ಭಾಗದ ದಾಳಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅದೃಷ್ಟವಶಾತ್ ದೊಡ್ಡ ಮಾನವ ಹಾನಿ ಆಗಿಲ್ಲ ಎಂದು ತಿಳಿಸಿದ್ದಾರೆ. ಆದರೆ, ದಾಳಿಯಿಂದ ಹಲವರು ಗಾಯಗೊಂಡಿದ್ದು, ಮನೆಗಳಿಗೆ ಹಾನಿಯಾಗಿದೆ.

ಈ ನಡುವೆ ಇರಾನ್ ತನ್ನ ದಾಳಿಗಳನ್ನು ಇಸ್ರೇಲ್‌ನ ಅಣು ಸಂಬಂಧಿತ ಕೇಂದ್ರಗಳ ಮೇಲೆ ನಡೆದ ದಾಳಿಗಳಿಗೆ ಪ್ರತೀಕಾರವಾಗಿ ನಡೆಸುತ್ತಿದೆ ಎಂದು ಹೇಳಿದೆ.

ಇಸ್ರೇಲ್ ಮತ್ತು ಅಮೆರಿಕದ ಗುರಿ ಇರಾನ್‌ನ ಅಣು ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ಕುಗ್ಗಿಸುವುದಾಗಿದೆ. ಇದರ ಮಧ್ಯೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ಮೇಲೆ ದಾಳಿ ನಡೆಸಿದ್ದು, ಲೆಬನಾನ್ ದಕ್ಷಿಣ ಭಾಗದಲ್ಲಿ ಯುದ್ಧ ತೀವ್ರಗೊಂಡಿದೆ.

ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇತುವೆಗಳು ಮತ್ತು ಪ್ರಮುಖ ಮಾರ್ಗಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ದಾಳಿ ಭೀತಿಯಿಂದ ಲೆಬನಾನ್‌ನಲ್ಲಿ ಲಕ್ಷಾಂತರ ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ.

ಈ ಯುದ್ಧದಲ್ಲಿ ಈಗಾಗಲೇ ಸಾವಿರಾರು ಜನರು ಸಾವನ್ನಪ್ಪಿದ್ದು, ಆರ್ಥಿಕತೆ ಮೇಲೂ ಭಾರೀ ಪರಿಣಾಮ ಬೀರಿದೆ. ತೈಲ ಬೆಲೆ ಏರಿಕೆಯಿಂದ ವಿಶ್ವದ ಹಲವು ದೇಶಗಳು ಸಂಕಷ್ಟ ಎದುರಿಸುತ್ತಿವೆ. ವಿಮಾನ ಸಂಚಾರಕ್ಕೂ ಅಪಾಯ ಉಂಟಾಗಿದೆ.

ಮುಂದಿನ ಕೆಲವು ವಾರಗಳಲ್ಲಿ ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ಸೂಚಿಸುತ್ತಿದ್ದು, ಜಾಗತಿಕ ಶಾಂತಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹೋರ್ಮುಜ್ ಜಲಸಂಧಿ ಜಗತ್ತಿನ ಅತಿ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿದ್ದು, ವಿಶ್ವದ ಒಟ್ಟು ತೈಲ ಸರಬರಾಜಿನ ಸುಮಾರು ಶೇ.20 ಈ ಮಾರ್ಗದ ಮೂಲಕ ಸಾಗುತ್ತದೆ. ಈ ದಾರಿಯನ್ನು ಮುಚ್ಚಿದರೆ ಜಾಗತಿಕ ತೈಲ ಮಾರುಕಟ್ಟೆ ಕುಸಿತವಾಗುವ ಸಾಧ್ಯತೆ ಇದೆ. ಈಗಾಗಲೇ ಹಲವು ತೈಲ ಟ್ಯಾಂಕರ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.