West Asia war: ಶಾಂತಿ ಒಪ್ಪಂದಕ್ಕೆ 'NO' ಎಂದ ಟ್ರಂಪ್; ಖಾರ್ಗ್ ದ್ವೀಪದ ಮೇಲೆ ಅಮೆರಿಕಾ ಕಣ್ಣು; ದಾಳಿ ಭೀತಿ ಮತ್ತಷ್ಟು ಹೆಚ್ಚಳ..!
ಇದೀಗ ಅಮೆರಿಕಾ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟಿದ್ದು, ಈ ಪ್ರದೇಶದ ಮೇಲೆ ಭೀಕರ ದಾಳಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ವಾಷಿಂಗ್ಟನ್: ಮಧ್ಯ ಏಷ್ಯಾದಲ್ಲಿ ನಡೆಯುತ್ತಿರುವ ಅಮೆರಿಕಾ–ಇರಾನ್ ಸಂಘರ್ಷವು ದಿನೇದಿನೇ ಗಂಭೀರ ಸ್ವರೂಪ ಪಡೆಯುತ್ತಿದ್ದು, ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶಾಂತಿ ಒಪ್ಪಂದ ಸಾಧ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
“ಈ ಹಂತದಲ್ಲಿ ಶಾಂತಿ ಒಪ್ಪಂದ ಅಗತ್ಯವಿಲ್ಲ” ಎಂದು ಅವರು ಹೇಳಿದ್ದು, ಯುದ್ಧ ಮುಂದುವರಿಯಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಇದೀಗ ಅಮೆರಿಕಾ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟಿದ್ದು, ಈ ಪ್ರದೇಶದ ಮೇಲೆ ಭೀಕರ ದಾಳಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ದ್ವೀಪವು ಇರಾನ್ ಆರ್ಥಿಕತೆಯ ಪ್ರಮುಖ ಜೀವನಾಡಿಯಾಗಿದ್ದು, ದೇಶದ ಬಹುತೇಕ ಕಚ್ಚಾ ತೈಲ ರಫ್ತು ಇಲ್ಲಿಂದಲೇ ಸಾಗುತ್ತದೆ. ಈ ಹಿನ್ನೆಲೆಯಲ್ಲಿ, ಖಾರ್ಗ್ ದ್ವೀಪದ ಮೇಲೆ ಅಮೆರಿಕಾ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಟ್ರಂಪ್ ಅವರ ಹೇಳಿಕೆಗಳಲ್ಲಿ ಯುದ್ಧವನ್ನು ನಿಲ್ಲಿಸುವುದಕ್ಕಿಂತ ಇರಾನ್ ಮೇಲೆ ರಾಜಕೀಯ ಮತ್ತು ಆರ್ಥಿಕ ಒತ್ತಡ ಹೆಚ್ಚಿಸುವ ಉದ್ದೇಶ ಸ್ಪಷ್ಟವಾಗುತ್ತಿದೆ.
ಖಾರ್ಗ್ ದ್ವೀಪದ ಮೇಲೆ ದಾಳಿ ನಡೆದರೆ, ಅದು ಕೇವಲ ಸೈನಿಕರ ಮೇಲಷ್ಟೇ ಅಲ್ಲದೆ, ಇರಾನ್ ಆರ್ಥಿಕತೆಯ ಮೇಲೆ ನೇರ ಹೊಡೆತ ನೀಡಿದಂತಾಗುತ್ತದೆ. ಇದರಿಂದ ಜಾಗತಿಕ ತೈಲ ಸರಬರಾಜು ಸರಪಳಿಯಲ್ಲೂ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಅಮೆರಿಕಾ ಮತ್ತು ಇಸ್ರೇಲ್ ಇರಾನ್‌ನ ಸೇನಾ ನೆಲೆಗಳ ಮೇಲೆ ನಡೆಸಿದ ನಂತರ ಸಂಘರ್ಷ ತೀವ್ರಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಇರಾನ್, ಜಗತ್ತಿನ ಅತ್ಯಂತ ಮಹತ್ವದ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ Strait of Hormuz ಅನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದು, ಇದರಿಂದಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ವಿಶ್ವದ ಸುಮಾರು 20 ಶೇಕಡಾ ತೈಲ ಸಾಗಣೆ ಈ ಮಾರ್ಗದ ಮೂಲಕವೇ ನಡೆಯುವುದರಿಂದ, ಈ ಬೆಳವಣಿಗೆ ಜಾಗತಿಕ ಮಾರುಕಟ್ಟೆಗಳ ಮೇಲೆ ನೇರ ಪರಿಣಾಮ ಬೀರಿದೆ.
ಈ ನಡುವೆ ಅಮೆರಿಕಾ ಗಲ್ಫ್ ಪ್ರದೇಶದಲ್ಲಿ ತನ್ನ ಸೈನಿಕ ಬಲವನ್ನು ಹೆಚ್ಚಿಸಿದೆ. ಹೆಚ್ಚುವರಿ ಯುದ್ಧ ಹಡಗುಗಳು, ಯುದ್ಧವಿಮಾನಗಳು ಮತ್ತು ಸಾವಿರಾರು ಸೈನಿಕರನ್ನು ನಿಯೋಜಿಸಿದ್ದು, ಸಾಗಣೆ ಮಾರ್ಗಗಳ ಭದ್ರತೆ ಮತ್ತು ಇರಾನ್ ಮೇಲೆ ಒತ್ತಡ ಹೆಚ್ಚಿಸುವುದು ಪ್ರಮುಖ ಗುರಿಯಾಗಿದೆ.
ಖಾರ್ಗ್ ದ್ವೀಪದ ಮೇಲೆ ವಾಯು ದಾಳಿ, ನೌಕಾ ನಿರ್ಬಂಧ (blockade) ಅಥವಾ ನಿಯಂತ್ರಣ ಸಾಧಿಸುವಂತಹ ಆಯ್ಕೆಗಳು ಚರ್ಚೆಯಲ್ಲಿವೆ ಎಂಬ ಮಾಹಿತಿ ಹೊರಬಂದಿದೆ.
ತನ್ನ ಮೇಲೆ ನಡೆಯುತ್ತಿರುವ ದಾಳಿಕೆ ಇರಾನ್ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದು, ಅಮೆರಿಕಾ ಯಾವುದೇ ದಾಳಿ ನಡೆಸಿದರೆ ಕಠಿಣ ಪ್ರತಿದಾಳಿ ನೀಡುವುದಾಗಿ ಎಚ್ಚರಿಸಿದೆ.
ಈ ಹಿನ್ನೆಲೆಯಲ್ಲಿ ಗಲ್ಫ್ ಪ್ರದೇಶದಲ್ಲಿ ಯುದ್ಧ ವಿಸ್ತರಣೆಯ ಭೀತಿ ಹೆಚ್ಚಾಗಿದೆ. ಪಶ್ಚಿಮ ಏಷ್ಯಾದ ಇತರ ರಾಷ್ಟ್ರಗಳೂ ಈ ಸಂಘರ್ಷದಲ್ಲಿ ಒಳಗೊಳ್ಳುವ ಸಾಧ್ಯತೆ ಇರುವುದರಿಂದ, ಇದು ದೊಡ್ಡ ಪ್ರಾದೇಶಿಕ ಯುದ್ಧವಾಗಿ ರೂಪಾಂತರಗೊಳ್ಳುವ ಆತಂಕ ತಜ್ಞರಲ್ಲಿ ವ್ಯಕ್ತವಾಗಿದೆ.
ಜಾಗತಿಕ ಆರ್ಥಿಕತೆಯ ಮೇಲೂ ಇದರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ತೈಲ ಬೆಲೆಗಳಲ್ಲಿ ಅಸ್ಥಿರತೆ, ಸಾಗಣೆ ವೆಚ್ಚಗಳಲ್ಲಿ ಏರಿಕೆ ಹಾಗೂ ಪೂರೈಕೆ ವ್ಯತ್ಯಯದ ಭೀತಿ ಮುಂದುವರಿದಿದೆ.
Strait of Hormuz ಮಾರ್ಗದಲ್ಲಿ ಯಾವುದೇ ದೀರ್ಘಕಾಲಿಕ ಅಡಚಣೆ ಉಂಟಾದರೆ, ಅದು ವಿಶ್ವದ ಅನೇಕ ದೇಶಗಳ ಆರ್ಥಿಕತೆಗೆ ಗಂಭೀರ ಹೊಡೆತ ನೀಡಬಹುದು.
ಒಟ್ಟಿನಲ್ಲಿ ಟ್ರಂಪ್ ಅವರು, ಶಾಂತಿ ಮಾತುಕತೆಗಳನ್ನು ತಳ್ಳಿಹಾಕಿರುವುದು ಮತ್ತು ಖಾರ್ಗ್ ದ್ವೀಪದ ಮೇಲೆ ಅಮೆರಿಕಾ ಕಣ್ಣಿಟ್ಟಿರುವುದು, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಇನ್ನಷ್ಟು ಉಗ್ರಗೊಳ್ಳುವ ಸೂಚನೆಯನ್ನು ನೀಡುತ್ತಿದೆ.
ಮುಂದಿನ ದಿನಗಳಲ್ಲಿ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆದಿದ್ದೇ ಆದರೆ, ಇದು ಈ ಯುದ್ಧದ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




