ವಿದೇಶ

ಯುದ್ಧ ವಿರಾಮ ಬಗ್ಗೆ ಮಾತುಕತೆ ನಡೆಸಲು ಇರಾನ್ ಸಿದ್ಧವಾಗಿದೆ, ಆದರೆ ಈ ಹಂತದಲ್ಲಿ ನಾವು ತಯಾರಿಲ್ಲ: Donald Trump

ಎರಡು ವಾರಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೈನಿಕ ಕಾರ್ಯಾಚರಣೆ ಆರಂಭಿಸಿದ ನಂತರ ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ನಾಗರಿಕರು ವ್ಯಕ್ತಪಡಿಸಿರುವ ಆತಂಕವನ್ನು ಅವರು ತಳ್ಳಿಹಾಕಿದರು.

ಯುದ್ಧ ವಿರಾಮ ಬಗ್ಗೆ ಮಾತುಕತೆ ನಡೆಸಲು ಇರಾನ್ ಸಿದ್ಧವಾಗಿದೆ, ಆದರೆ ಈ ಹಂತದಲ್ಲಿ ನಾವು ತಯಾರಿಲ್ಲ: Donald Trump
ಪಶ್ಚಿಮ ಏಷ್ಯಾದ ಸಂಘರ್ಷವು ಮೂರನೇ ವಾರಕ್ಕೆ ಪ್ರವೇಶಿಸಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ.
Published On :

ಇರಾನ್ ಯುದ್ಧವನ್ನು ಅಂತ್ಯಗೊಳಿಸಲು ಒಪ್ಪಂದ ಮಾಡಿಕೊಳ್ಳಲು ಸಿದ್ಧವಿಲ್ಲ. ಇರಾನ್ ಅದಕ್ಕಾಗಿ ಸಿದ್ಧತೆ ತೋರಿದ್ದರೂ ಒಪ್ಪಂದದ ಷರತ್ತುಗಳು ಇನ್ನೂ ಸಮರ್ಪಕವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಆ ಷರತ್ತುಗಳು ಏನು ಎಂಬುದನ್ನು ಹೇಳಲು ಅವರು ನಿರಾಕರಿಸಿದರು.

ಸುಮಾರು 30 ನಿಮಿಷಗಳ ದೂರವಾಣಿ ಸಂದರ್ಶನದಲ್ಲಿ NBC News ಜೊತೆ ಮಾತನಾಡಿದ ಟ್ರಂಪ್, ಜಾಗತಿಕ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ, ತೈಲ ಸಾಗಣೆಗೆ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ಹರ್ಮೊಜ್ ಜಲಸಂಧಿಯನ್ನು ಭದ್ರಪಡಿಸಲು ಇತರ ದೇಶಗಳೊಂದಿಗೆ ಯೋಜನೆ ರೂಪಿಸುತ್ತಿದ್ದೇನೆ ಎಂದು ಹೇಳಿದರು.

ಎರಡು ವಾರಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೈನಿಕ ಕಾರ್ಯಾಚರಣೆ ಆರಂಭಿಸಿದ ನಂತರ ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ನಾಗರಿಕರು ವ್ಯಕ್ತಪಡಿಸಿರುವ ಆತಂಕವನ್ನು ಅವರು ತಳ್ಳಿಹಾಕಿದರು. ಇರಾನ್‌ನ ಹೊಸ ಪರಮೋಚ್ಚ ನಾಯಕ ಜೀವಂತವಾಗಿದ್ದಾನೆಯೇ ಎಂಬ ಪ್ರಶ್ನೆಯನ್ನೂ ಡೊನಾಲ್ಡ್ ಟ್ರಂಪ್ ಎತ್ತಿದರು.

ಅಮೆರಿಕಾ–ಇಸ್ರೇಲ್ ಕಾರ್ಯಾಚರಣೆಗೆ ಪ್ರತಿಯಾಗಿ ಇರಾನ್ ಇತರ ಮಧ್ಯಪ್ರಾಚ್ಯ ದೇಶಗಳ ಮೇಲೆ ದಾಳಿ ನಡೆಸಲು ತೀರ್ಮಾನಿಸಿರುವುದು ಅಚ್ಚರಿ ತಂದಿದೆ ಎಂದರು. ಶನಿವಾರ ಅಮೆರಿಕಾ ನಡೆಸಿದ ದಾಳಿಯಿಂದ ಇರಾನ್‌ನ ತೀರದ ಬಳಿ ಇರುವ ಖಾರ್ಗ್ ದ್ವೀಪ ಬಹುತೇಕ ಸಂಪೂರ್ಣವಾಗಿ ನಾಶವಾಗಿದೆ.

ಇದಲ್ಲದೆ ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಪ್ರಯತ್ನಗಳ ಬಗ್ಗೆ ಮಾತನಾಡುತ್ತಾ, ಉಕ್ರೇನ್ ಅಧ್ಯಕ್ಷರ ಜೊತೆ ಒಪ್ಪಂದ ಮಾಡಿಕೊಳ್ಳುವುದು ರಷ್ಯಾ ಅಧ್ಯಕ್ಷರಿಗಿಂತ ಹೆಚ್ಚು ಕಷ್ಟಕರವಾಗಿದೆ ಎಂದು ಟ್ರಂಪ್ ಟೀಕಿಸಿದರು. ಜಾಗತಿಕ ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಮೆರಿಕ ರಷ್ಯಾ ತೈಲದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ ವಿಶ್ವ ನಾಯಕರಿಂದ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ.

ಇರಾನ್ ಜೊತೆ ಒಪ್ಪಂದಕ್ಕೆ ಟ್ರಂಪ್ ಸಿದ್ಧರಿಲ್ಲ

ದೂರವಾಣಿ ಸಂಭಾಷಣೆಯಲ್ಲಿ ಟ್ರಂಪ್, ಈ ಹಂತದಲ್ಲಿ ಇರಾನ್ ಜೊತೆ ಯುದ್ಧವನ್ನು ಅಂತ್ಯಗೊಳಿಸುವ ಒಪ್ಪಂದ ಮಾಡಲು ತಾನು ಸಿದ್ಧನಿಲ್ಲ ಎಂದು ಹೇಳಿದರು.

ಇರಾನ್ ಒಪ್ಪಂದ ಮಾಡಲು ಬಯಸುತ್ತಿದೆ. ಆದರೆ ಷರತ್ತುಗಳು ಇನ್ನೂ ಸಮರ್ಪಕವಾಗಿಲ್ಲದ ಕಾರಣ ನಾನು ಒಪ್ಪಂದ ಇಷ್ಟಪಡುವುದಿಲ್ಲ ಎಂದು ಹೇಳಿದರು. ಯಾವುದೇ ಒಪ್ಪಂದವೂ ಬಹಳ ದೃಢವಾದ ಷರತ್ತುಗಳ ಮೇಲೆ ಇರಬೇಕು ಎಂದರು.

ಯುದ್ಧ ಅಂತ್ಯಗೊಳಿಸುವ ಒಪ್ಪಂದದ ಷರತ್ತುಗಳೇನು ಎಂದು ಕೇಳಿದಾಗ, ಅದನ್ನು ಈಗ ನಿಮಗೆ ಹೇಳಲು ನಾನು ಇಷ್ಟಪಡುವುದಿಲ್ಲ ಎಂದು ಟ್ರಂಪ್ ಹೇಳಿದರು. ಆದರೆ ಇರಾನ್ ತನ್ನ ಅಣು ಯೋಜನೆಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದ್ಧತೆ ಆ ಒಪ್ಪಂದದ ಭಾಗವಾಗಿರಬಹುದು ಎಂದರು.

ಅಮೆರಿಕದ ಸೈನಿಕ ಕಾರ್ಯಾಚರಣೆ

ಇರಾನ್ ಮೇಲೆ ಅಮೆರಿಕದ ಸೈನಿಕ ಕಾರ್ಯಾಚರಣೆ ಹೇಗೆ ಮುಂದುವರಿಯಬಹುದು ಎಂಬುದರ ಬಗ್ಗೆ ಟ್ರಂಪ್ ಸುಳಿವು ನೀಡಿದರು. ಕಳೆದ ತಿಂಗಳು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಯುದ್ಧ ಆರಂಭವಾಯಿತು. ಅದರ ಪ್ರತಿಯಾಗಿ ಇರಾನ್ ಇಸ್ರೇಲ್ ಹಾಗೂ ಹತ್ತಿರದ ದೇಶಗಳಲ್ಲಿ ಇರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿತು.

ಯುದ್ಧ ಆರಂಭವಾದ ಬಳಿಕ ಅಮೆರಿಕದ 13 ಸಕ್ರಿಯ ಸೈನಿಕರು ಮೃತಪಟ್ಟಿದ್ದಾರೆ. ಇವರಲ್ಲಿ ಆರು ಮಂದಿ ಶುಕ್ರವಾರ ಇರಾಕ್‌ನಲ್ಲಿ ಸೈನಿಕ ಇಂಧನ ತುಂಬುವ ವಿಮಾನ ಪತನಗೊಂಡಾಗ ಮೃತಪಟ್ಟಿದ್ದರು.

ಕೊನೆಯ ಎರಡು ವಾರಗಳಲ್ಲಿ ಇರಾನ್‌ನಲ್ಲಿ ಅಮೆರಿಕದ ಸೈನಿಕ ಗುರಿಗಳು ಏನು ಮತ್ತು ಯುದ್ಧ ಎಷ್ಟು ಕಾಲ ಮುಂದುವರಿಯಬಹುದು ಎಂಬುದರ ಬಗ್ಗೆ ಟ್ರಂಪ್ ಆಡಳಿತದ ಅಧಿಕಾರಿಗಳು ವಿಭಿನ್ನ ಹೇಳಿಕೆ ನೀಡಿದ್ದಾರೆ. ಕೆಲವೊಮ್ಮೆ ಟ್ರಂಪ್ ಯುದ್ಧ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿಯಬಹುದು ಎಂದು ಹೇಳಿದ್ದರೆ, ಮತ್ತೊಮ್ಮೆ, ನಾವು ವೇಳಾಪಟ್ಟಿಗಿಂತ ಬಹಳ ಮುಂದೆ ಇದ್ದೇವೆ, ಗುರಿಯಾಗಿಸಲು ಬಹುತೇಕ ಏನೂ ಉಳಿದಿಲ್ಲ ಎಂದರು.

ಇರಾನ್ ಬಳಿ ಉಳಿದಿರುವ ಏಕೈಕ ಶಕ್ತಿ ಅಂದರೆ ಸಮುದ್ರದಲ್ಲಿ ಸ್ಫೋಟಕ ಗಣಿ ಇರಿಸುವುದು ಅಥವಾ ಕಡಿಮೆ ದೂರದ ಕ್ಷಿಪಣಿಗಳನ್ನು ಹಾರಿಸುವುದು. ಆದರೆ ನಾವು ಅವರ ಕರಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ ನಂತರ ಅವರಿಗೆ ಆ ಶಕ್ತಿಯೂ ಇರುವುದಿಲ್ಲ ಎಂದು ಹೇಳಿದರು.

ನಾವು ಅವರ ಬಹುತೇಕ ಕ್ಷಿಪಣಿಗಳನ್ನು ನಾಶ ಮಾಡಿದ್ದೇವೆ. ಅವರ ಬಹುತೇಕ ಡ್ರೋನ್‌ಗಳನ್ನು ಕೂಡ ನಾಶ ಮಾಡಿದ್ದೇವೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಯಾರಿಸುವ ಕಾರ್ಖಾನೆಗಳನ್ನೂ ಬಹುತೇಕ ನಾಶ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಅವು ಸಂಪೂರ್ಣವಾಗಿ ಧ್ವಂಸವಾಗಿರುತ್ತವೆ ಎಂದು ಹೇಳಿದರು.

ಹಾರ್ಮೊಜ್ ಸಮುದ್ರಸಂಧಿಯನ್ನು ಭದ್ರಪಡಿಸುವ ಯೋಜನೆ

ಶನಿವಾರ ಟ್ರಂಪ್, ಇರಾನ್‌ನ ಕ್ರಮಗಳಿಂದ ಪರಿಣಾಮಗೊಂಡಿರುವ ಹಲವು ದೇಶಗಳಿಗೆ ಹಾರ್ಮೊಜ್ ಜಲಸಂಧಿ ಭದ್ರಪಡಿಸಲು ಸಹಕರಿಸುವಂತೆ ಕೇಳಿದ್ದೇನೆ ಎಂದು ಹೇಳಿದರು. ಯುದ್ಧದ ಹಿನ್ನೆಲೆ ಜಾಗತಿಕ ತೈಲದ ಬೆಲೆಗಳು ಏರಿಕೆಯಾಗಿದೆ.

ಇದಕ್ಕೆ ಪ್ರತಿಯಾಗಿ ಇರಾನ್ ನಾಯಕರು ಆ ಸಮುದ್ರಸಂಧಿಯನ್ನು ಮುಚ್ಚುವುದಾಗಿ ಮತ್ತು ತೈಲದ ಬೆಲೆ ಇನ್ನಷ್ಟು ಏರಬೇಕೆಂದು ಹೇಳಿದ್ದಾರೆ.

ಕೆಲವು ದೇಶಗಳು ಸಹಾಯ ಮಾಡಲು ಒಪ್ಪಿಕೊಂಡಿವೆ ಎಂದು ಟ್ರಂಪ್ ಹೇಳಿದರೂ, ಅವುಗಳ ಹೆಸರನ್ನು ಅವರು ಬಹಿರಂಗಪಡಿಸಲಿಲ್ಲ.

ಇರಾನ್‌ನ ಹೊಸ ಪರಮೋಚ್ಚ ನಾಯಕ ಜೀವಂತ?

ಇರಾನ್‌ನ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಂತವಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಸಹ ಡೊನಾಲ್ಡ್ ಟ್ರಂಪ್ ಎತ್ತಿದ್ದಾರೆ. ತನ್ನ ತಂದೆ ಮತ್ತು ಹಿಂದಿನ ನಾಯಕ ಅಲಿ ಖಮೇನಿ ಅವರ ನಂತರ ಅಧಿಕಾರ ಸ್ವೀಕರಿಸಿದ ಮೊಜ್ತಬಾ ಖಮೆನೆ, ಹಾರ್ಮೊಜ್ ಸಮುದ್ರಸಂಧಿಯನ್ನು ಮುಚ್ಚುವ ಮತ್ತು ಅಮೆರಿಕದ ಮಿತ್ರರ ಮೇಲೆ ದಾಳಿ ಮುಂದುವರಿಸುವುದಾಗಿ ಹೇಳಿದ್ದಾರೆ.

ಅವರು ಜೀವಂತವಾಗಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಇದುವರೆಗೆ ಯಾರೂ ಅವರನ್ನು ತೋರಿಸಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.