ಯುದ್ಧದ ನಡುವೆ ದುಬೈ ICU ನಲ್ಲಿ ತಾಯಿ ಹೋರಾಟ: 1.25 ಕೋಟಿ ರೂ ಆಸ್ಪತ್ರೆ ಬಿಲ್; ನೆರವು ಯಾಚಿಸಿದ ಭಾರತೀಯ ವ್ಯಕ್ತಿ!
ಎಂಟು ವರ್ಷಗಳ ಹಿಂದೆ ತಮಿಳುನಾಡಿನಿಂದ ದುಬೈಗೆ ತೆರಳಿದ್ದ ತಿಲಕ್‌ಕುಮಾರ್ ಜಲತು ಅನಿರುತ್ರರಾಜ್ ಮತ್ತು ಅವರ ಪತ್ನಿ ಶಾಮಿನಿ ರಮೇಶ್ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ.

ದುಬೈ: ದುಬೈ ವಲಸಿಗರು ಮತ್ತು ಪ್ರವಾಸಿಗರಿಗೆ ಸುರಕ್ಷಿತ ಸ್ಥಳವಾಗಿದೆ. ಆದರೆ ಯುಎಸ್ ಮತ್ತು ಇಸ್ರೇಲಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ನಡೆಸುತ್ತಿರುವ ದಾಳಿಯಿಂದ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ.
ಗಗನ ಚುಂಬಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಯುತ್ತಿರುವುದರಿಂದ ಸ್ಪೋಟದ ಶಬ್ದ ಹಾಗೂ ಕಪ್ಪು ಹೊಗೆಯಿಂದ UAEಯ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರದ ಆಕರ್ಷಣೆ ಸ್ವಲ್ಪ ಹಾಳಾಗಿದೆ. ಯುದ್ಧವು ಅನೇಕ ಕುಟುಂಬಗಳ ಜೀವನವನ್ನು ಕಷ್ಟಕರವಾಗಿಸಿದೆ. ಡ್ರೋನ್, ವಿಮಾನ ಹಾರಾಟ, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಪ್ರಾದೇಶಿಕ ಅನಿಶ್ಚಿತತೆಯು ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ.
ಯುದ್ಧದ ನಡುವೆ ಕೋಟಿ ಕೋಟಿ ವೈದ್ಯಕೀಯ ಬಿಲ್:
ಎಂಟು ವರ್ಷಗಳ ಹಿಂದೆ ತಮಿಳುನಾಡಿನಿಂದ ದುಬೈಗೆ ತೆರಳಿದ್ದ ತಿಲಕ್‌ಕುಮಾರ್ ಜಲತು ಅನಿರುತ್ರರಾಜ್ ಮತ್ತು ಅವರ ಪತ್ನಿ ಶಾಮಿನಿ ರಮೇಶ್ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ. ಈಗ ಅವರು 40 ದಿನಗಳಿಂದ ಐಸಿಯುನಲ್ಲಿರುವ ತನ್ನ ತಾಯಿಯನ್ನು ಉಳಿಸಲು ಹರಸಾಹಸಪಡುತ್ತಿದ್ದಾರೆ. ತಿಲಕ್ ಕುಮಾರ್ ಅವರನ್ನು ಕಾಣಲು ದುಬೈಗೆ ಭೇಟಿ ನೀಡಿದ್ದ ಅವರಿಗೆ ದಿಢೀರನೆ ತೀವ್ರ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಕೆಗೆ ಕನಿಷ್ಠ ಎರಡು ತಿಂಗಳ ಕಾಲ ವೆಂಟಿಲೇಟರ್ ಅಗತ್ಯವಿದೆ ಎಂದು ವೈದ್ಯರು ಹೇಳಿರುವುದಾಗಿ ತಿಲಕ್‌ಕುಮಾರ್ ಎನ್‌ಡಿಟಿವಿಗೆ ತಿಳಿಸಿದರು.
ಸಿಂಗಲ್ ಪೋಷಕರಾಗಿ ನಮ್ಮ ತಾಯಿ ಅಪಾರ ಕಷ್ಟ ಪಟ್ಟು ತಮ್ಮನ್ನು ಬೆಳೆಸಿದ್ದಾರೆ ಈಗ ಅವರು ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದು, ಆಸ್ಪತ್ರೆ ಬಿಲ್ ನಿಂದ ದಿಗ್ಭ್ರಮೆಯಾಗಿದೆ. ಸ್ಕ್ಯಾನ್ ಅಥವಾ ವಿಶೇಷ ಚಿಕಿತ್ಸೆಯನ್ನು ಹೊರತುಪಡಿಸಿ, ಪ್ರತಿದಿನ 3 ಲಕ್ಷ ರೂ. ಆಗುತ್ತಿದೆ. ಇಂದಿನ ಹೊತ್ತಿಗೆ, ಒಟ್ಟು ಬಿಲ್ 1.25 ಕೋಟಿ ರೂಪಾಯಿಗಳಷ್ಟಿದೆ, ಪ್ರತಿದಿನ 4 ಲಕ್ಷ ರೂಪಾಯಿಗಳಷ್ಟು ಹೆಚ್ಚುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಹತಾಶ ದಂಪತಿ ಭಾರತಕ್ಕೆ ವಾಪಸ್ಸಾಗಲು ಬಯಸಿದ್ದರಿಂದ ಮಾರ್ಚ್ 4 ರಂದು 7 ಲಕ್ಷ ರೂಪಾಯಿ ವೆಚ್ಚವಾಗಬಹುದಾದ ವಾಣಿಜ್ಯ ವೈದ್ಯಕೀಯ ಎಸ್ಕಾರ್ಟ್ ವಿಮಾನದಲ್ಲಿ ರೋಗಿಯನ್ನು ಭಾರತಕ್ಕೆ ಕೊಂಡೊಯ್ಯಲು ಅನುಮತಿ ನೀಡಿದ್ದರು. ಆದರೆ ಯುದ್ಧದ ಕಾರಣದಿಂದ ವಿಮಾನವನ್ನು ರದ್ದುಗೊಳಿಸಲಾಯಿತು. ಈಗ ಅವರ ಏಕೈಕ ಆಯ್ಕೆ ಖಾಸಗಿ ಏರ್ ಆಂಬ್ಯುಲೆನ್ಸ್ ಆಗಿದೆ. ಸಂಘರ್ಷದ ಕಾರಣ ವೆಚ್ಚವು ಸುಮಾರು ಏಳು ಪಟ್ಟು ಹೆಚ್ಚಾಗಿ 50 ಲಕ್ಷ ರೂ. ಆಗಿದೆ. ಇಷ್ಟೊಂದು ಹಣ ನಮ್ಮ ಹತ್ತಿರ ಇಲ್ಲ. ಈಗ ದೊಡ್ಡ ಹೊರೆ ಏರ್ ಆಂಬ್ಯುಲೆನ್ಸ್ ಆಗಿದೆ, ಆಕೆಯನ್ನು ಮನೆಗೆ ಕರೆದೊಯ್ಯಲು ನನಗೆ ತಕ್ಷಣ 50 ಲಕ್ಷ ರೂಪಾಯಿ ಬೇಕು ತಿಲಕ್ ಕುಮಾರ್ ಹೇಳಿಕೊಂಡಿದ್ದಾರೆ.
ಡಿಸ್ಚಾರ್ಜ್ ಸಮಯದಲ್ಲಿ ಬಿಲ್ ಪಾವತಿಸಬೇಕಾಗಿದ್ದು, ಆಸ್ಪತ್ರೆಯಿಂದ ಒಂದಿಷ್ಟು ರಿಯಾಯಿತಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಅದು 10ರಿಂದ 15 ಲಕ್ಷ ರೂ.ಗಿಂತ ಹೆಚ್ಚಿಗೆ ಆಗುವುದಿಲ್ಲ. ದಂಪತಿಗಳು ದುಬೈನಲ್ಲಿರುವ ಚಾರಿಟಿಗಳ ಸಹಾಯವನ್ನೂ ಕೋರಿದ್ದಾರೆ. ಹಣ ಸಂಗ್ರಹವಾದರೂ ಸಹ, ಸ್ಲಾಟ್ ಅನ್ನು ಬುಕ್ ಮಾಡುವುದು ಅಸಾಧ್ಯವೆಂದು ಶಾಮಿನಿ ಹೇಳಿದರು. ಪ್ರಸ್ತುತ ಪರಿಸ್ಥಿತಿಯಿಂದಾಗಿ ಏರ್ ಆಂಬ್ಯುಲೆನ್ಸ್‌ಗಳ ಲಭ್ಯತೆ ತೀರಾ ಕಡಿಮೆಯಾಗಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



