ವಿದೇಶ

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್‌ ದಾಳಿ; ಭಾರತೀಯ ಸೇರಿ ನಾಲ್ವರಿಗೆ ಗಾಯ

ಗಲ್ಫ್ ರಾಷ್ಟ್ರಗಳ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳೇ ನಮ್ಮ 'ಗುರಿ' ಎಂದು ಇರಾನ್ ಹೇಳುತ್ತಿದೆ.

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್‌ ದಾಳಿ; ಭಾರತೀಯ ಸೇರಿ ನಾಲ್ವರಿಗೆ ಗಾಯ
ಡ್ರೋನ್‌ ದಾಳಿ
Published On :

ದುಬೈ: ಗಲ್ಫ್ ರಾಷ್ಟ್ರಗಳ ದಾಳಿ ಮುಂದುವರೆಸಿರುವ ಇರಾನ್, ಬುಧವಾರ ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್‌ಗಳನ್ನು ಸ್ಫೋಟಿಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಆದರೂ ವಿಮಾನ ಸಂಚಾರ ಎಂದಿನಂತೆ ಮುಂದುವರೆದಿದೆ ಎಂದು ದುಬೈ ಸರ್ಕಾರ ತಿಳಿಸಿದೆ.

"ಸ್ವಲ್ಪ ಸಮಯದ ಹಿಂದೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಎರಡು ಡ್ರೋನ್‌ಗಳು ಬಿದ್ದಿದ್ದು, ಘಟನೆಯಲ್ಲಿ ಘಾನಾದ ಇಬ್ಬರು ಪ್ರಜೆಗಳು ಮತ್ತು ಒಬ್ಬ ಬಾಂಗ್ಲಾದೇಶಿ ಪ್ರಜೆಗೆ ಗಂಭೀರ ಗಾಯಗಳಾಗಿವೆ ಮತ್ತು ಒಬ್ಬ ಭಾರತೀಯ ಪ್ರಜೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಅದಾಗ್ಯೂ ವಿಮಾನ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ದುಬೈ ಸರ್ಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಗಲ್ಫ್ ರಾಷ್ಟ್ರಗಳ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳೇ ನಮ್ಮ 'ಗುರಿ' - ಇರಾನ್

ಈಗ ಮಧ್ಯಪ್ರಾಚ್ಯದಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೇ ನಮ್ಮ ಗುರಿಗಳಾಗಿವೆ ಎಂದು ಇರಾನಿನ ಜಂಟಿ ಮಿಲಿಟರಿ ಕಮಾಂಡ್ ಬುಧವಾರ ಹೇಳಿದೆ.

ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಟೆಹ್ರಾನ್‌ನಲ್ಲಿರುವ ಬ್ಯಾಂಕಿನ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದ ನಂತರ ಇರಾನ್ ಸಹ ಗಲ್ಫ್ ರಾಷ್ಟ್ರಗಳ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಟಾರ್ಗೆಟ್ ಮಾಡುತ್ತಿದೆ.

ಇರಾನ್ ನ ಈ ಬೆದರಿಕೆ ವಿಶೇಷವಾಗಿ ದುಬೈ ಅನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಇದು ಅನೇಕ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ನೆಲೆಯಾಗಿದೆ.

ಹಾರ್ಮುಜ್ ಬಳಿ ಎರಡು ಹಡಗುಗಳ ಮೇಲೆ ದಾಳಿ

ಇರಾನ್‌ಗೆ ಹೊಂದಿಕೊಂಡಿರುವ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಬಳಿ ಬುಧವಾರ ಅಪರಿಚಿತ ಕ್ಷಿಪಣಿಯೊಂದು ಸರಕು ಹಡಗಿಗೆ ಡಿಕ್ಕಿ ಹೊಡೆದಿದ್ದು, ಬೆಂಕಿ ಹೊತ್ತಿಕೊಂಡಿದೆ. ನಂತರ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿಯಿತು.

ಇನ್ನು ಯುಎಇ ಕರಾವಳಿಯಲ್ಲಿ ಗುರುತಿಸಲಾಗದ ಕ್ಷಿಪಣಿಯೊಂದು ಎರಡನೇ ಕಂಟೇನರ್ ಹಡಗಿನ ಮೇಲೆ ದಾಳಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.