ವಿದೇಶ

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಗೆ ರಾತ್ರಿ ಬದಲು ಬೆಳಗ್ಗೆ ಕಾರ್ಯಾಚರಣೆ: ಗುಪ್ತಚರ ಸಂಸ್ಥೆ CIA ನೆರವಾಗಿದ್ದು ಹೇಗೆ ಗೊತ್ತಾ?

ಟೆಹ್ರಾನ್‌ನ ಹಲವಾರು ಸ್ಥಳಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇರಾನ್‌ನ ರಾಜಕೀಯ-ಭದ್ರತಾ ವಿಭಾಗದ ಹಿರಿಯ ವ್ಯಕ್ತಿಗಳು ತಂಗಿದ್ದ ಕಟ್ಟಡಗಳ ಮೇಲೆ ದಾಳಿ ನಡೆಸಲಾಯಿತು ಎಂದು ಇಸ್ರೇಲಿ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಗೆ ರಾತ್ರಿ ಬದಲು ಬೆಳಗ್ಗೆ ಕಾರ್ಯಾಚರಣೆ: ಗುಪ್ತಚರ ಸಂಸ್ಥೆ CIA ನೆರವಾಗಿದ್ದು ಹೇಗೆ ಗೊತ್ತಾ?
ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ
Published On :

ವಾಷಿಂಗ್ಟನ್: ಅಮೇರಿಕಾದ ಕೇಂದ್ರ ಗುಪ್ತಚರ ಸಂಸ್ಥೆ (CIA) ಇರಾನ್ ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇರಾನ್‌ನ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಖಮೇನಿ ಪಾಲ್ಗೊಳ್ಳುವ ಬಗ್ಗೆ ಸುಳಿವು ನೀಡಿದ್ದರಿಂದ ಅಮೆರಿಕ- ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಲು ನೆರವಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

US ಮತ್ತು ಇಸ್ರೇಲ್ ಇಸ್ಲಾಮಿಕ್ ಗಣರಾಜ್ಯದಲ್ಲಿ ಆಡಳಿತ ಬದಲಾವಣೆಯ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಟೆಹರಾನ್ ನಲ್ಲಿ ನಡೆದ ದಾಳಿಯಲ್ಲಿ ಖಮೇನಿ ಹತ್ಯೆಯಾಗಿರುವುದನ್ನು ಇರಾನಿನ ಸರ್ಕಾರಿ ನಿಯಂತ್ರಣದ ಮಾಧ್ಯಮಗಳು ಭಾನುವಾರ ಖಚಿತಪಡಿಸಿದವು.

CIA ತಿಂಗಳುಗಳಿಂದ ಖಮೇನಿ ಮೇಲೆ ಕಣ್ಣಿಟ್ಟಿತ್ತು. ಅವರ ಚಲನವಲನಗಳು ಮತ್ತು ಅಡಗಿದ್ದ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದಿತ್ತು. ಶನಿವಾರ ಬೆಳಿಗ್ಗೆ ದಾಳಿಗೂ ಸ್ವಲ್ಪ ಸಮಯಕ್ಕೂ ಮುನ್ನಾ ಕೇಂದ್ರ ಟೆಹರಾನ್ ನಲ್ಲಿರುವ ಖಮೇನಿ ತಂಗಿದ್ದ ಕಟ್ಟಡದಲ್ಲಿ ಇರಾನ್‌ನ ಉನ್ನತ ರಾಜಕೀಯ ಮತ್ತು ಭದ್ರತಾ ಅಧಿಕಾರಿಗಳ ಸಭೆ ನಡೆಯಲಿದ್ದು, ಅದರಲ್ಲಿ ಖಮೇನಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗೆ ಸಿಕ್ಕಿತ್ತು.

ಆರಂಭದಲ್ಲಿ ರಾತ್ರಿ ಹೊತ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದ್ದ US ಮತ್ತು ಇಸ್ರೇಲಿ ಅಧಿಕಾರಿಗಳು, ಖಮೇನಿ ಸ್ಥಳದ ಕುರಿತು ಗುಪ್ತಚರ ಸಂಸ್ಥೆ ನೀಡಿದ ಮಾಹಿತಿಗೆ ತಕ್ಕಂತೆ ದಾಳಿಗೆ ಸಮಯನ್ನು ಮರು ಹೊಂದಿಸಿತು. ಖಮೇನಿಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲು ತಿಂಗಳುಗಟ್ಟಲೆ ತಯಾರಿ ನಡೆಸಿದ್ದ ಇಸ್ರೇಲ್ ಗೆ ಗುಪ್ತಚರ ಸಂಸ್ಥೆ ಮಾಹಿತಿ ರವಾನಿಸಿತ್ತು. ಇರಾನ್ ನ ಸರ್ವೊಚ್ಛ ನಾಯಕನ ಹತ್ಯೆಗೆ ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಪ್ಲಾನ್ ಬಗ್ಗೆ ಗೊತ್ತಿದ್ದ ಜನರು ಪತ್ರಿಕೆಗೆ ತಿಳಿಸಿದ್ದಾರೆ.

ಇಸ್ರೇಲ್‌ನಲ್ಲಿ ಯುದ್ಧವಿಮಾನಗಳು ತಮ್ಮ ನೆಲೆಗಳಿಂದ ಹೊರಟಾಗ ಬೆಳಿಗ್ಗೆ 6:00 ಗಂಟೆ ಆಗಿತ್ತು. ಕಾರ್ಯಾಚರಣೆ ಆರಂಭಿಸಿದ ಸರಿಸುಮಾರು ಎರಡು ಗಂಟೆ, ಐದು ನಿಮಿಷಗಳ ನಂತರ, ಬೆಳಿಗ್ಗೆ 9:40 ರ ಸುಮಾರಿಗೆ ಟೆಹ್ರಾನ್‌ನಲ್ಲಿ ಖಮೇನಿ ತಂಗಿದ್ದ ಕಟ್ಟಡಕ್ಕೆ ದೂರಗಾಮಿ ಕ್ಷಿಪಣಿ ದಾಳಿ ನಡೆಸಿದವು. ದಾಳಿ ವೇಳೆ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ಒಂದು ಕಟ್ಟಡದಲ್ಲಿದ್ದರೆ, ಸಮೀಪದ ಮತ್ತೊಂದು ಕಟ್ಟಡದಲ್ಲಿ ಖಮೇನಿ ತಂಗಿದ್ದರು ಎಂದು ವರದಿ ತಿಳಿಸಿದೆ.

ಟೆಹರಾನ್ ನ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇರಾನ್‌ನ ರಾಜಕೀಯ-ಭದ್ರತಾ ವಿಭಾಗದ ಹಿರಿಯ ವ್ಯಕ್ತಿಗಳು ತಂಗಿದ್ದ ಕಟ್ಟಡಗಳ ಮೇಲೆ ದಾಳಿ ನಡೆಸಲಾಯಿತು ಎಂದು ಇಸ್ರೇಲಿ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಟೈಮ್ಸ್ ವರದಿ ಮಾಡಿದೆ.

ಯುದ್ಧಕ್ಕೆ ಇರಾನಿನ ಸಿದ್ಧತೆಗಳ ಹೊರತಾಗಿಯೂ, ಇಸ್ರೇಲ್ ಆಚ್ಚರಿ ರೀತಿಯಲ್ಲಿ ಯುದ್ಧತಂತ್ರ ಬಳಸಿ, ಖಮೇನಿಯನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಖಮೇನಿ ಜೊತೆಗೆ ಇಬ್ಬರು ಹಿರಿಯ ಮಿಲಿಟರಿ ವ್ಯಕ್ತಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಇರಾನ್‌ನ ನ್ಯಾಯಾಂಗ ದೃಢಪಡಿಸಿದೆ.

ರೆವಲ್ಯೂಷನರಿ ಗಾರ್ಡ್ಸ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಕ್ಪೂರ್ ಮತ್ತು ಉನ್ನತ ಭದ್ರತಾ ಸಲಹೆಗಾರ ಅಲಿ ಶಮ್ಖಾನಿ ಹತ್ಯೆಯಾಗಿರುವುದಾಗಿ ಇರಾನ್‌ನ ರಾಜ್ಯ ಸುದ್ದಿ ಸಂಸ್ಥೆ IRNA ಕೂಡಾ ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.