ವಿದೇಶ

ಹೈದರಾಬಾದ್‌ ರಸ್ತೆಗೆ ಅಮೆರಿಕಾ ಅಧ್ಯಕ್ಷನ ಹೆಸರು: ‘ನನ್ನ ಪಾಲಿಗಿದು ಐತಿಹಾಸಿಕ ಗೌರವ’ ಎಂದು ಭಾರತಕ್ಕೆ ಧನ್ಯವಾದ ತಿಳಿಸಿದ ಟ್ರಂಪ್

ಕೆಲವೇ ದಿನಗಳ ಹಿಂದೆ ತೆಲಂಗಾಣ ಸರ್ಕಾರವು ಹೈದರಾಬಾದ್‌ನ ಅಮೆರಿಕ ರಾಯಭಾರ ಕಚೇರಿ (ಯುಎಸ್ ಕಾನ್ಸುಲೇಟ್) ಸಮೀಪದ ರಸ್ತೆಗೆ ಅಧಿಕೃತವಾಗಿ 'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ನಾಮಕರಣ ಮಾಡಿತ್ತು

ಹೈದರಾಬಾದ್‌ ರಸ್ತೆಗೆ ಅಮೆರಿಕಾ ಅಧ್ಯಕ್ಷನ ಹೆಸರು: ‘ನನ್ನ ಪಾಲಿಗಿದು ಐತಿಹಾಸಿಕ ಗೌರವ’ ಎಂದು ಭಾರತಕ್ಕೆ ಧನ್ಯವಾದ ತಿಳಿಸಿದ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published On :

ಹೈದರಾಬಾದ್: ಹೈದರಾಬಾದ್‌ನಲ್ಲಿ ತಮ್ಮ ಹೆಸರಿನ ರಸ್ತೆಗೆ ಅಧಿಕೃತವಾಗಿ ನಾಮಕರಣ ಮಾಡಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಈ ಗೌರವವನ್ನು "ಐತಿಹಾಸಿಕ ಗೌರವ" ಎಂದು ಬಣ್ಣಿಸಿರುವ ಟ್ರಂಪ್, ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ರಸ್ತೆ ನಾಮಕರಣ ಸಮಾರಂಭದ ಚಿತ್ರವನ್ನು ಹಂಚಿಕೊಂಡಿರುವ ಟ್ರಂಪ್, ತೆಲಂಗಾಣ ಸರ್ಕಾರವು ಹೈದರಾಬಾದ್‌ನ ಅಮೆರಿಕ ದೂತಾವಾಸ ಕಚೇರಿ ಬಳಿಯಿರುವ ರಸ್ತೆಗೆ ‘ಡೊನಾಲ್ಡ್‌ ಟ್ರಂಪ್‌ ಅವೆನ್ಯೂ’ ಎಂದು ನಾಮಕರಣ ಮಾಡಿದೆ. ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರಿಗೆ ಈ ರೀತಿಯ ಗೌರವ ಲಭಿಸಿದೆ. ಧನ್ಯವಾದಗಳು ಎಂದು ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ ತೆಲಂಗಾಣ ಸರ್ಕಾರವು ಹೈದರಾಬಾದ್‌ನ ಅಮೆರಿಕ ರಾಯಭಾರ ಕಚೇರಿ (ಯುಎಸ್ ಕಾನ್ಸುಲೇಟ್) ಸಮೀಪದ ರಸ್ತೆಗೆ ಅಧಿಕೃತವಾಗಿ 'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ನಾಮಕರಣ ಮಾಡಿತ್ತು.

ನಗರದ ಜಾಗತಿಕ ಗುರುತನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ಭಾರತ–ಅಮೆರಿಕ ಸಂಬಂಧಗಳನ್ನು ಸಾಂಕೇತಿಕವಾಗಿ ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಈ ರಸ್ತೆ ಹೈದರಾಬಾದ್‌ನ ನಾನಕ್ರಾಮಗೂಡದ ಫೈನಾನ್ಷಿಯಲ್ ಡಿಸ್ಟ್ರಿಕ್ಟ್ ಪ್ರದೇಶದಲ್ಲಿದ್ದು, ಅಮೆರಿಕದ ಕಾನ್ಸುಲೇಟ್ ಕಚೇರಿ ಸೇರಿದಂತೆ ಹಲವು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳ ಕಚೇರಿಗಳು ಇಲ್ಲಿವೆ. ಈ ಪ್ರದೇಶವು ಹೈದರಾಬಾದ್‌ನ ಪ್ರಮುಖ ಅಂತಾರಾಷ್ಟ್ರೀಯ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ.

ಈ ವಾರ ನಡೆದ ಸಮಾರಂಭದಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಜಿಯೊ ಗೋರ್, ತೆಲಂಗಾಣ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ರಸ್ತೆ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಅಮೆರಿಕದ 250ನೇ ಸ್ವಾತಂತ್ರ್ಯ ವರ್ಷಾಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತೆಲಂಗಾಣ ಸರ್ಕಾರವು ನಗರದಲ್ಲಿನ ಪ್ರಮುಖ ರಸ್ತೆಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳಿಗೆ ಜಾಗತಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಹೆಸರನ್ನು ಇಡುವ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಂಡಿದೆ.

ಈ ಹಿಂದೆ ನಡೆದ ಯುಎಸ್–ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬಹುದಾದ ನಗರ ಸ್ಮಾರಕಗಳನ್ನು ನಿರ್ಮಿಸುವ ಉದ್ದೇಶವನ್ನು ಪ್ರಸ್ತಾಪಿಸಿದ್ದರು.

ಟ್ರಂಪ್ ಅವರು ಈ ಗೌರವವನ್ನು ಸಾರ್ವಜನಿಕವಾಗಿ ಸ್ವೀಕರಿಸಿ ಭಾರತಕ್ಕೆ ಧನ್ಯವಾದ ತಿಳಿಸಿದ ಬಳಿಕ, ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.