ಮುನೀರ್ ಹತ್ಯೆಗೆ ಮುಂದಾಗಿತ್ತಾ ಇಸ್ರೇಲ್, ಸ್ವಿಟ್ಜರ್‌ಲ್ಯಾಂಡ್ ಒಪ್ಪಂದದ ವೇಳೆ ಹೆದರಿದ್ನಾ ಫೀಲ್ಡ್ ಮಾರ್ಷಲ್? ನೆತನ್ಯಾಹುಗೆ Pak ಧಮ್ಕಿ ಹಾಕಿತ್ತಾ!
ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನನ್ನು ಹತ್ಯೆ ಮಾಡಲು ಮೊಸಾದ್ ಸಂಚು ರೂಪಿಸಿತ್ತು. ಹೀಗಾಗಿ ಇಸ್ರೇಲ್ ಅನ್ನು ನಕ್ಷೆಯಿಂದ ಅಳಿಸಿಹಾಕುವುದಾಗಿ ಪಾಕ್ ಬೆದರಿಕೆ ಹಾಕಿತ್ತು ಎಂದು ವರದಿಯಾಗಿದೆ.

ಇಸ್ರೇಲ್ ಅನ್ನು ನಕ್ಷೆಯಿಂದ ಅಳಿಸಿಹಾಕುವುದಾಗಿ ಪಾಕಿಸ್ತಾನವು ಬೆದರಿಕೆ ಹಾಕಿತ್ತು ಎಂದು ಬ್ರೆಜಿಲ್‌ನ ಪತ್ರಕರ್ತರೊಬ್ಬರು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನನ್ನು ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂದು ಪತ್ರಕರ್ತ ಹೇಳಿದ್ದು ಇದು ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಆದರೆ ಇಸ್ರೇಲ್ ಅಥವಾ ಪಾಕಿಸ್ತಾನ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.
ಬ್ರೆಜಿಲ್‌ನ ಪತ್ರಕರ್ತ ಪೆಪೆ ಎಸ್ಕೋಬಾರ್ ಅವರು ಇತ್ತೀಚೆಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ US-Iran ಸಭೆಯ ಸಂದರ್ಭದಲ್ಲಿ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಅಸಿಮ್ ಮುನೀರ್ ನನ್ನು ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನವು ಇದರಿಂದ ಕೋಪಗೊಂಡಿದ್ದು ನಮ್ಮ ಅಧಿಕಾರಿಗಳನ್ನು ಮುಟ್ಟಿದರೆ, ನಾವು ಇಸ್ರೇಲ್ ಅನ್ನು ನಕ್ಷೆಯಿಂದ ಅಳಿಸಿಹಾಕುತ್ತೇವೆ" ಎಂದು ಇಸ್ರೇಲ್‌ಗೆ ನೇರವಾಗಿ ಬೆದರಿಕೆ ಹಾಕಿತ್ತು ಎಂದು ಪತ್ರಕರ್ತ ಹೇಳಿಕೊಂಡಿದ್ದಾರೆ.
ಲೆಬನಾನ್-ಆಸ್ಟ್ರೇಲಿಯನ್ ರಾಜಕೀಯ ವಿಶ್ಲೇಷಕ ಮಾರಿಯೋ ನವ್‌ಫಾಲ್ ಅವರ ಪಾಡ್‌ಕ್ಯಾಸ್ಟ್ ಸಮಯದಲ್ಲಿ ವಿವಾದ ಪ್ರಾರಂಭವಾಯಿತು. ಸಂದರ್ಶನದಲ್ಲಿ ಮಾತನಾಡಿದ್ದ ಪತ್ರಕರ್ತ ಪೆಪೆ ಎಸ್ಕೋಬಾರ್, ಹೆಚ್ಚು ವಿಶ್ವಾಸಾರ್ಹ ಗುಪ್ತಚರವನ್ನು ಉಲ್ಲೇಖಿಸಿ ಹಲವಾರು ಗಂಭೀರ ಹೇಳಿಕೆಗಳನ್ನು ನೀಡಿದರು. ಎಸ್ಕೋಬಾರ್ ಪ್ರಕಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆದೇಶದ ಮೇರೆಗೆ, ಮೊಸಾದ್ ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಅಸಿಮ್ ಮುನೀರ್ ಮತ್ತು ಅವರ ಜೊತೆಗಿದ್ದ ನಿಯೋಗವನ್ನು ಗುರಿಯಾಗಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಬಲವಾದ ಮಾಹಿತಿ ಪಾಕಿಸ್ತಾನಿ ಸೇನೆಗೆ ಸಿಕ್ಕಿತ್ತು. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆಯ ಭಾಗವಾಗಿ ಪಾಕಿಸ್ತಾನಿ ನಿಯೋಗ ಅಲ್ಲಿಗೆ ಬಂದಿತ್ತು. ಪಾಕಿಸ್ತಾನ ಮತ್ತು ಕತಾರ್ ಈ ಮಾತುಕತೆಗಳಲ್ಲಿ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದವು.
ಈ ಸಂಚಿನ ಬಗ್ಗೆ ತಿಳಿದ ನಂತರ ಪಾಕಿಸ್ತಾನವು ಒಮಾನ್ ಮೂಲಕ ನೇರವಾಗಿ ಇಸ್ರೇಲ್‌ಗೆ ಬಲವಾದ ಸಂದೇಶವನ್ನು ಕಳುಹಿಸಿತ್ತು. ಈ ಸಂದೇಶದಲ್ಲಿ, ಪಾಕಿಸ್ತಾನವು, 'ನೀವು ನಮ್ಮ ನಿಯೋಗವನ್ನು ಮುಟ್ಟಿದರೆ, ನಾವು ನಿಮ್ಮನ್ನು ಜಗತ್ತಿನ ನಕ್ಷೆಯಿಂದ ಅಳಿಸಿಹಾಕುತ್ತೇವೆ, ಅಷ್ಟೇ' ಎಂದು ಹೇಳಿದೆ. ಇಸ್ರೇಲ್ ಮತ್ತು ಮೊಸಾದ್ ಬಗ್ಗೆ ಇಂತಹ ದಿಟ್ಟ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿದೆ. ಏತನ್ಮಧ್ಯೆ, ವಿಷಯ ಉಲ್ಬಣಗೊಂಡಿರುವುದನ್ನು ನೋಡಿ, ಕೆಲವು ಪಾಕಿಸ್ತಾನಿ ಅಧಿಕಾರಿಗಳು ಅಂತಹ ವರದಿಗಳನ್ನು ತಳ್ಳಿಹಾಕಿದ್ದಾರೆ. ಹಿರಿಯ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಪಾಕಿಸ್ತಾನಿ ಸುದ್ದಿ ವಾಹಿನಿ ARY ನ್ಯೂಸ್, ವರದಿಯನ್ನು ಸಂಪೂರ್ಣವಾಗಿ ಅಸಂಬದ್ಧ ಮತ್ತು ಕಟ್ಟುಕಥೆ ಎಂದು ಬಣ್ಣಿಸಿದೆ.
ಪ್ರಧಾನಿ ಶಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಸ್ವಿಟ್ಜರ್ಲೆಂಡ್ ಭೇಟಿಯು ಯಾವುದೇ ಆತಂಕ ಅಥವಾ ಅಡಚಣೆಗಳಿಲ್ಲದೆ ಶಾಂತಿಯುತವಾಗಿ ನಡೆಯಿತು ಎಂದು ಪಾಕಿಸ್ತಾನಿ ಅಧಿಕಾರಿ ಹೇಳಿದ್ದಾರೆ ಎಂದು ವರದಿಯಾಗಿದೆ. ಅವರ ಪ್ರಕಾರ, ಸ್ವಿಸ್ ರೆಸಾರ್ಟ್‌ನಲ್ಲಿ ಸ್ವಿಸ್ ಅಥವಾ ಅಮೇರಿಕನ್ ಭದ್ರತಾ ತಂಡಗಳು ಯಾವುದೇ ಭದ್ರತಾ ಎಚ್ಚರಿಕೆಗಳನ್ನು ಅಥವಾ ಸಣ್ಣ ಕಾಳಜಿಗಳನ್ನು ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



