ಅಮೆರಿಕದಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ: 'F* India' ಘೋಷಣೆ ಕೂಗಿ, ಬಾವುಟ ಹರಿದು ಹೀನ ಕೃತ್ಯ!
ಈ ಘಟನೆ ಟೆಕ್ಸಾಸ್‌ನ ಫ್ರಿಸ್ಕೊ ನಗರದಲ್ಲಿ ನಡೆದಿದೆ ಎನ್ನಲಾಗುತ್ತಿದ್ದು, ಸ್ಥಳೀಯ ಸಿಟಿ ಹಾಲ್ ಸಮೀಪ ವ್ಯಕ್ತಿಯೊಬ್ಬ ಭಾರತೀಯ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನು ಹರಿದು ಹಾಕಿದ್ದಾನೆ.

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್'ನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹರಿದು ಹಾಕುತ್ತಾ ಭಾರತ ವಿರೋಧಿ ಘೋಷಣೆಗಳನ್ನು ಕೂಗಿರುವ ವಿಡಿಯೊ ವೈರಲ್ ಆಗಿದ್ದು, ವಿಶ್ವದಾದ್ಯಂತ ಭಾರತೀಯ ಸಮುದಾಯದಿಂದ ಖಂಡನೆ ವ್ಯಕ್ತವಾಗಿದೆ.
ವರದಿಗಳ ಪ್ರಕಾರ, ಈ ಘಟನೆ ಟೆಕ್ಸಾಸ್‌ನ ಫ್ರಿಸ್ಕೊ ನಗರದಲ್ಲಿ ನಡೆದಿದೆ ಎನ್ನಲಾಗುತ್ತಿದ್ದು, ಸ್ಥಳೀಯ ಸಿಟಿ ಹಾಲ್ ಸಮೀಪ ವ್ಯಕ್ತಿಯೊಬ್ಬ ಭಾರತೀಯ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನು ಹರಿದು ಹಾಕಿದ್ದಾನೆ.
ಈ ವೇಳೆ ಆತ "F* India" ಎಂದು ಘೋಷಣೆ ಕೂಗಿರುವುದು ವಿಡಿಯೊದಲ್ಲಿ ಕೇಳಿಬಂದಿದೆ. ಅಲ್ಲದೆ, ಸ್ಥಳದಲ್ಲಿದ್ದ ಕೆಲವರು ಆತನ ಕೃತ್ಯಕ್ಕೆ ಬೆಂಬಲ ಸೂಚಿಸುವ ರೀತಿಯಲ್ಲಿ ಹರ್ಷೋದ್ಗಾರ ವ್ಯಕ್ತಪಡಿಸಿರುವುದೂ ಕಂಡುಬಂದಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣ ಎಕ್ಸ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವೇಗವಾಗಿ ಹರಡಿದ್ದು, ಸಾವಿರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲಾಗದ ಕೃತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಲ್ಲಿ ಕಾನೂನುಬದ್ಧವಾಗಿ ನೆಲೆಸಿರುವ ಭಾರತೀಯರು ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಭಾರತೀಯ ವಲಸಿಗರ ವಿರುದ್ಧ ದ್ವೇಷ ಮತ್ತು ವಲಸೆ ವಿರೋಧಿ ಮನೋಭಾವ ಹೆಚ್ಚಾಗುತ್ತಿದ್ದು, ಇದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಹೇಳಿದ್ದಾರೆ.
ಮತ್ತೊಂದೆಡೆ, ಕೆಲವರು ವಲಸೆ ನೀತಿ ಮತ್ತು ಜನಸಂಖ್ಯಾ ಬದಲಾವಣೆಯ ಕುರಿತ ಚರ್ಚೆಯನ್ನು ಮುಂದಿಟ್ಟುಕೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಭಿನ್ನಾಭಿಪ್ರಾಯಗಳಿದ್ದರೂ ಯಾವುದೇ ದೇಶದ ರಾಷ್ಟ್ರೀಯ ಧ್ವಜವನ್ನು ಅವಮಾನಿಸುವುದು ಅಥವಾ ದ್ವೇಷದ ಘೋಷಣೆಗಳನ್ನು ಕೂಗುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗಿದೆ.
ಘಟನೆ ಕುರಿತು ಸ್ಥಳೀಯ ಆಡಳಿತ ಅಥವಾ ಕಾನೂನು ಜಾರಿ ಸಂಸ್ಥೆಗಳು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ವಿಡಿಯೊದಲ್ಲಿರುವ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಘಟನೆ ಅಮೆರಿಕದಲ್ಲಿನ ಭಾರತೀಯ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿದ ಕೃತ್ಯದ ವಿರುದ್ಧ ಹಲವರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



