Guinness World Record: ಸಮುದ್ರದಾಳದಲ್ಲಿ ಭಾರತದ ಬೃಹತ್ ತ್ರಿವರ್ಣ ಧ್ವಜ ಅನಾವರಣ; ಗಿನ್ನೆಸ್ ದಾಖಲೆಯ ಸಾಹಸದಲ್ಲಿ ಆರ್. ಅಶೋಕ್ ಪುತ್ರ!
ಶರತ್ ಆರ್. ಅಶೋಕ್ ಅವರು ಸಾಹಸ ಕ್ರೀಡಾ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ತೊಡಗಿಸಿಕೊಂಡಿದ್ದು, ಅಪಾರ ಅನುಭವ ಹೊಂದಿದ್ದಾರೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸ್ವರಾಜ್ ದ್ವೀಪದಲ್ಲಿ ಭಾರತದ ಸಾಹಸ ಯಾನದ ಸುವರ್ಣ ಅಧ್ಯಾಯವೊಂದು ಬರೆಯಲ್ಪಟ್ಟಿದೆ.
ಸಮುದ್ರದ ಆಳದಲ್ಲಿ ಭಾರತದ ಅತಿ ದೊಡ್ಡ ತ್ರಿವರ್ಣ ಧ್ವಜವನ್ನು ಯಶಸ್ವಿಯಾಗಿ ಅನಾವರಣಗೊಳಿಸುವ ಮೂಲಕ ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ ನಿರ್ಮಿಸಲಾಗಿದೆ. ಈ ಐತಿಹಾಸಿಕ ಸಾಹಸದಲ್ಲಿ ಬೆಂಗಳೂರಿನ ಪ್ರತಿಭಾವಂತ ಸಾಹಸ ಕ್ರೀಡಾ ತಜ್ಞ ಶರತ್ ಆರ್. ಅಶೋಕ್ ಅವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.
ಶರತ್ ಆರ್. ಅಶೋಕ್ ಅವರು ಸಾಹಸ ಕ್ರೀಡಾ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ತೊಡಗಿಸಿಕೊಂಡಿದ್ದು, ಅಪಾರ ಅನುಭವ ಹೊಂದಿದ್ದಾರೆ. ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು, ಪ್ರಮಾಣೀಕೃತ 'ಡೈವ್ ಮಾಸ್ಟರ್' ಮತ್ತು ಸ್ಕೂಬಾ ಇನ್ಸ್ಟ್ರಕ್ಟರ್ ಆಗಿ ಅಂತರಾಷ್ಟ್ರೀಯ ಮಟ್ಟದ ಪರಿಣತಿ ಪಡೆದಿದ್ದಾರೆ.
ಜಲ ಸಾಹಸ ಮಾತ್ರವಲ್ಲದೆ, ಪ್ಯಾರಾಗ್ಲೈಡಿಂಗ್ ಮತ್ತು ಪ್ಯಾರಾಮೋಟರ್ ಪೈಲಟ್ ಆಗಿ ಆಕಾಶದಲ್ಲೂ ಸಾಹಸ ಮೆರೆದಿರುವ ಇವರು, ಮೊಟೊಕ್ರಾಸ್ ಮತ್ತು ಪರ್ವತಾರೋಹಣದಲ್ಲಿಯೂ ಸಿದ್ಧಹಸ್ತರು. ಇಂತಹ ಹತ್ತು ವರ್ಷಗಳ ವೈವಿಧ್ಯಮಯ ಸಾಹಸೀ ಹಿನ್ನೆಲೆಯೇ ಸಮುದ್ರದಾಳದ ಈ ಕಠಿಣ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅವರಿಗೆ ಸಹಕಾರಿಯಾಗಿದೆ.
ಮೇ 2ರಂದು ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ದೇಶದ ವಿವಿಧ ಭಾಗಗಳ ಸುಮಾರು 200ಕ್ಕೂ ಹೆಚ್ಚು ನುರಿತ ಸ್ಕೂಬಾ ಡೈವರ್‌ಗಳು ಭಾಗವಹಿಸಿದ್ದರು. ಅಂಡಮಾನ್ ಆಡಳಿತ ಮತ್ತು ಭಾರತೀಯ ರಕ್ಷಣಾ ಪಡೆಗಳ ಸಹಯೋಗದೊಂದಿಗೆ ನಡೆದ ಈ ಅಭಿಯಾನದಲ್ಲಿ, 60x40 ಮೀಟರ್ (2,400 ಚದರ ಮೀಟರ್) ವಿಸ್ತೀರ್ಣದ ಬೃಹತ್ ರಾಷ್ಟ್ರಧ್ವಜವನ್ನು ಅಲೆಗಳ ಅಬ್ಬರ ಮತ್ತು ನೀರಿನ ತೀವ್ರ ಒತ್ತಡದ ನಡುವೆ ಸಮುದ್ರದಾಳದಲ್ಲಿ ಅನಾವರಣಗೊಳಿಸಲಾಯಿತು.
ಈ ಅಪ್ರತಿಮ ಸಾಧನೆಯನ್ನು ಗುರುತಿಸಿ ಅಂಡಮಾನ್ ಮತ್ತು ನಿಕೋಬಾರ್‌ನ ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರು ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದ್ದಾರೆ.

ಈ ಐತಿಹಾಸಿಕ ಕ್ಷಣದ ಬಗ್ಗೆ ಪ್ರತಿಕ್ರಿಯಿಸಿರುವ ಶರತ್ ಅಶೋಕ್, "ನಮ್ಮ ತ್ರಿವರ್ಣ ಧ್ವಜವು 140 ಕೋಟಿ ಭಾರತೀಯರ ಶಕ್ತಿ ಮತ್ತು ಏಕತೆಯ ಪ್ರತೀಕ. ಸಾಹಸವು ನನ್ನ ಆಸಕ್ತಿಯಾಗಿದ್ದು, ಅಲೆಗಳ ಅಂತರಾಳದಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿದ ಆ ಕ್ಷಣ ನನ್ನ ಬದುಕಿನ ಅತ್ಯಂತ ಗೌರವದ ಸಂದರ್ಭ. ವನ್ಯಜೀವಿ ಸಂರಕ್ಷಣೆ ಮತ್ತು ಸಾಹಸ ಕ್ರೀಡೆಗಳಲ್ಲಿನ ನನ್ನ ಅನುಭವವು ಇಂತಹ ರಾಷ್ಟ್ರಮಟ್ಟದ ಸಾಧನೆಯಲ್ಲಿ ಭಾಗಿಯಾಗಲು ನನಗೆ ಸ್ಫೂರ್ತಿ ನೀಡಿದೆ" ಎಂದು ತಿಳಿಸಿದ್ದಾರೆ.

ಅಂಧತ್ವವನ್ನೇ ಗೆದ್ದ ಹಿಮಾಲಯ ಪಯಣ: ಅಸಾಧ್ಯವನ್ನು ಸಾಧ್ಯವಾಗಿಸಿದ ಬೆಂಗಳೂರಿನ ಪ್ರಿಯಾಂಕಾ ಅಗರ್ವಾಲ್ ಸಾಹಸಗಾಥೆ..!
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪುತ್ರರಾಗಿರುವ ಶರತ್ ಅವರ ಈ ಅಂತರಾಷ್ಟ್ರೀಯ ಮಟ್ಟದ ಸಾಧನೆಯು ರಾಜ್ಯದ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


