Yemen ಮೇಲೆ ವೈಮಾನಿಕ ದಾಳಿಗೆ ಪ್ರತೀಕಾರ; Saudi Arabia ಮೇಲೆ ಕ್ಷಿಪಣಿ, ಡ್ರೋನ್‌ಗಳ ಸುರಿಮಳೆ ಸುರಿಸಿದ ಹೌತಿ ಬಂಡುಕೋರರು..!
ಈ ಕುರಿತು ಸೌದಿ ಅರೇಬಿಯಾದ ನಾಗರಿಕ ರಕ್ಷಣಾ ಇಲಾಖೆ, ಯಾನ್‌ಬು ಮತ್ತು ಜಿಜಾನ್ ನಗರಗಳಲ್ಲಿ ಹಲವು ಬಾರಿ ಎಚ್ಚರಿಕೆ ಸೈರನ್‌ಗಳು ಮೊಳಗಿದ್ದನ್ನು ದೃಢಪಡಿಸಿದ್ದು, ದಾಳಿಯ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.

ಕೈರೋ: ಯೆಮೆನ್ ಮೇಲೆ ಸೌದಿ ಅರೇಬಿಯಾ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ, ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾದತ್ತ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿರುವುದಾಗಿ ಘೋಷಿಸಿದ್ದಾರೆ.
ಮಧ್ಯಪ್ರಾಚ್ಯದ ಪ್ರಮುಖ ಸಮುದ್ರ ಮಾರ್ಗಗಳ ಮೇಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಹೌತಿ ಪಡೆಗಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ಸರೀ ಅವರು ಬಿಡುಗಡೆ ಮಾಡಿದ ವಿಡಿಯೊ ಹೇಳಿಕೆಯಲ್ಲಿ, ಕೆಂಪು ಸಮುದ್ರ ತೀರದ ಯಾನ್‌ಬು ಮತ್ತು ಜಿಜಾನ್ ನಗರಗಳಲ್ಲಿರುವ ವಿಶ್ವದ ಅತಿದೊಡ್ಡ ತೈಲ ಕಂಪನಿಗಳಲ್ಲೊಂದಾದ ಅರಾಮ್ಕೊಗೆ ಸೇರಿದ ಸೌಲಭ್ಯಗಳನ್ನು ಗುರಿಯಾಗಿಸಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಸೌದಿ ಅರೇಬಿಯಾದ ನಾಗರಿಕ ರಕ್ಷಣಾ ಇಲಾಖೆ, ಯಾನ್‌ಬು ಮತ್ತು ಜಿಜಾನ್ ನಗರಗಳಲ್ಲಿ ಹಲವು ಬಾರಿ ಎಚ್ಚರಿಕೆ ಸೈರನ್‌ಗಳು ಮೊಳಗಿದ್ದನ್ನು ದೃಢಪಡಿಸಿದ್ದು, ದಾಳಿಯ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.
ಕಳೆದ ಸುಮಾರು ಎರಡು ವಾರಗಳಿಂದ ಇರಾನ್ ಮೇಲೆ ಅಮೆರಿಕ ನಿರಂತರವಾಗಿ ವೈಮಾನಿಕ ದಾಳಿ ನಡೆಸುತ್ತಿದ್ದರೂ, ಶನಿವಾರ ರಾತ್ರಿ ಇರಾನ್ ಮೇಲೆ ಯಾವುದೇ ಹೊಸ ದಾಳಿ ನಡೆದಿರುವ ವರದಿಗಳು ಬಂದಿಲ್ಲ.
ಹೌತಿ ಬಂಡುಕೋರರು, ಯೆಮೆನ್ ಮೇಲೆ ಸೌದಿ ಅರೇಬಿಯಾ ವಿಧಿಸಿರುವ ನಿರ್ಬಂಧ ಮತ್ತು ಸನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಗೆ ಪ್ರತೀಕಾರವಾಗಿ, ಬಾಬ್ ಅಲ್-ಮಂದೇಬ್ ಜಲಸಂಧಿ ಮೂಲಕ ಸಾಗುವ ಸೌದಿ ಸಂಪರ್ಕಿತ ಹಡಗುಗಳ ಸಂಚಾರವನ್ನು ತಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೌತಿ ನಿಯಂತ್ರಿತ ಪ್ರದೇಶಗಳ ಸುಪ್ರೀಂ ಪಾಲಿಟಿಕಲ್ ಕೌನ್ಸಿಲ್ ಮುಖ್ಯಸ್ಥ ಮಹ್ದಿ ಅಲ್-ಮಶಾತ್, "ಯೆಮೆನ್ ಮೇಲಿನ ದಾಳಿ ಮತ್ತು ನಿರ್ಬಂಧ ಕೊನೆಗೊಳ್ಳದಿದ್ದರೆ ಬಾಬ್ ಅಲ್-ಮಂದೇಬ್ ಜಲಸಂಧಿಯ ನಿರ್ಬಂಧವೂ ಮುಂದುವರಿಯಲಿದೆ. ಅದನ್ನು ನಿಲ್ಲಿಸುವ ನಿರೀಕ್ಷೆ ಕೇವಲ ಭ್ರಮೆ," ಎಂದು ಹೇಳಿದ್ದಾರೆ.
ಅರೇಬಿಯನ್ ದಕ್ಷಿಣ ತುದಿಯಲ್ಲಿರುವ ಬಾಬ್ ಅಲ್-ಮಂದೇಬ್ ಜಲಸಂಧಿಯು ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದೆ.
ಜಾಗತಿಕ ವ್ಯಾಪಾರದ ಸುಮಾರು ಶೇ.12ರಷ್ಟು ಹಾಗೂ ಕಂಟೇನರ್ ಸಾಗಣೆಯ ಸುಮಾರು ನಾಲ್ಕನೇ ಒಂದು ಭಾಗ ಈ ಮಾರ್ಗದ ಮೂಲಕ ಸಾಗುತ್ತದೆ.
ಈ ವಾರ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಎರಡು ಸೌದಿ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿದ್ದರು. ಇದಕ್ಕೆ ಪ್ರತಿಯಾಗಿ ಸೌದಿ ನೇತೃತ್ವದ ಮೈತ್ರಿಕೂಟವು ಶುಕ್ರವಾರ ರಾತ್ರಿ ಯೆಮೆನ್‌ನ ಹೊಡೈದಾ ನಗರದಲ್ಲಿ ವೈಮಾನಿಕ ದಾಳಿ ನಡೆಸಿದೆ.
ಹೌತಿ ಆಡಳಿತದ ಆರೋಗ್ಯ ಸಚಿವಾಲಯದ ವಕ್ತಾರ ಅನೀಸ್ ಅಲ್-ಅಸ್ಬಾಹಿ ಅವರ ಪ್ರಕಾರ, ಬಂದರು ಹಾಗೂ ಸರ್ಕಾರಿ ದೂರಸಂಪರ್ಕ ಸಂಸ್ಥೆಯ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಆದರೆ, ಸೌದಿ ನೇತೃತ್ವದ ಮೈತ್ರಿಕೂಟ, ಬಂದರಿನ ಮೇಲೆ ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದು, ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳಿಗೆ ಬೆದರಿಕೆ ಒಡ್ಡುತ್ತಿದ್ದ "ಕಾನೂನುಬದ್ಧ ಸೇನಾ ಗುರಿಗಳ" ಮೇಲೆ ಮಾತ್ರ ದಾಳಿ ನಡೆಸಲಾಗಿದೆ ಎಂದು ಹೇಳಿದೆ.
ಇದೇ ವೇಳೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಯೆಮೆನ್ ಸಂಘರ್ಷಕ್ಕೆ ಸೇನಾ ಕ್ರಮವಲ್ಲ, ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದವೇ ಪರಿಹಾರ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಕ್ಯಾಸ್ಪಿಯನ್ ಸಮುದ್ರದಲ್ಲಿ ಇರಾನ್‌ಗೆ ಸೇರಿದ ವಾಣಿಜ್ಯ ಹಡಗಿನ ಮೇಲೆ ಉಕ್ರೇನ್ ದಾಳಿ ನಡೆಸಿದೆ ಎಂದು ಆರೋಪಿಸಿರುವ ಇರಾನ್, ಇದನ್ನು ಆಕ್ರಮಣಕಾರಿ ಕೃತ್ಯ ಎಂದು ಖಂಡಿಸಿದೆ. ಈ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಇರಾನ್ ವಿದೇಶಾಂಗ ಸಚಿವಾಲಯವು ಈ ಕುರಿತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ ಕಾಜಾ ಕಲ್ಲಾಸ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಕ್ರೇನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಅಲ್ಲದೆ, ಉಕ್ರೇನ್‌ನ ರಾಜತಾಂತ್ರಿಕ ಪ್ರತಿನಿಧಿಯನ್ನು ಕೂಡ ಸಮನ್ಸ್ ಮಾಡಲಾಗಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಕ್ಯಾಸ್ಪಿಯನ್ ಸಮುದ್ರದಲ್ಲಿ ಇರಾನ್‌ಗೆ ಸಂಬಂಧಿಸಿದ ಸೇನಾ ಸರಕು ಸಾಗಣೆ ಹಡಗುಗಳ ಮೇಲೆ ದೂರ ವ್ಯಾಪ್ತಿಯ ದಾಳಿಯಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದರ ನಡುವೆ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದಿನ ವಾರ ಅಮೆರಿಕ ಪ್ರವಾಸ ಕೈಗೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಷಿಂಗ್ಟನ್‌ನಲ್ಲಿ ಭೇಟಿ ಮಾಡಲಿದ್ದಾರೆಂದು ವರದಿಗಳು ತಿಳಿಸಿವೆ.
ಈ ಸಂಘರ್ಷದಲ್ಲಿ ಇದುವರೆಗೆ ಇರಾನ್‌ನಲ್ಲಿ 3,400ಕ್ಕೂ ಹೆಚ್ಚು ಜನರು, ಲೆಬನಾನ್‌ನಲ್ಲಿ 4,000ಕ್ಕೂ ಹೆಚ್ಚು ಜನರು, ಇಸ್ರೇಲ್‌ನಲ್ಲಿ 24 ನಾಗರಿಕರು ಹಾಗೂ ಅಮೆರಿಕದ 18 ಯೋಧರು ಸೇರಿದಂತೆ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



