ಬಲವಂತದ ಕಾರ್ಮಿಕರ ಬಳಕೆ ಆತಂಕ: ಭಾರತ ಸೇರಿ 17 ದೇಶಗಳ ಆಮದು ಸರಕುಗಳಿಗೆ ಶೇ.10 ಸುಂಕ ವಿಧಿಸಿದ ಅಮೆರಿಕ
ಜೂನ್‌ನಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿ (USTR) ಈ ಯೋಜನೆಯನ್ನು ಪ್ರಕಟಿಸಿದಾಗ ಭಾರತದ ಮೇಲೆ ಶೇ.12.5ರ ಸುಂಕ ವಿಧಿಸುವ ಪ್ರಸ್ತಾವನೆ ಇತ್ತು.

ನವದೆಹಲಿ: ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಬಲವಂತದ ಕಾರ್ಮಿಕರ ಶ್ರಮದಿಂದ ಉತ್ಪಾದಿಸಲಾದ ವಸ್ತುಗಳ ಬಳಕೆಯನ್ನು ತಡೆಯುವ ಉದ್ದೇಶದಿಂದ ಅಮೆರಿಕ, ಭಾರತ ಸೇರಿದಂತೆ 17 ದೇಶಗಳಿಂದ ಆಮದು ಆಗುವ ಸರಕುಗಳ ಮೇಲೆ ಶೇ.10ರ ಸುಂಕ ವಿಧಿಸಿದೆ.
1974ರ ಟ್ರೇಡ್ ಆ್ಯಕ್ಟ್‌ನ ಸೆಕ್ಷನ್ 301 ಅಡಿಯಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಈ ಸುಂಕವನ್ನು ಘೋಷಿಸಿದ್ದಾರೆ. ಈ ಕ್ರಮವು ಕಳೆದ ಮಧ್ಯರಾತ್ರಿ 12.01 ಗಂಟೆಯಿಂದ ಜಾರಿಗೆ ಬರಲಿದ್ದು, ಈ ವರ್ಷದ ಆರಂಭದಲ್ಲಿ ವಿಧಿಸಲಾಗಿದ್ದ ತಾತ್ಕಾಲಿಕ ಶೇ.10ರ ಆಮದು ಸುಂಕದ ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲೇ ಇದು ಜಾರಿಯಾಗುತ್ತಿದೆ.
ಜೂನ್‌ನಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿ (USTR) ಈ ಯೋಜನೆಯನ್ನು ಪ್ರಕಟಿಸಿದಾಗ ಭಾರತದ ಮೇಲೆ ಶೇ.12.5ರ ಸುಂಕ ವಿಧಿಸುವ ಪ್ರಸ್ತಾವನೆ ಇತ್ತು.
ಆದರೆ, ಜೂನ್ 14ರಂದು ಭಾರತ ತನ್ನ ವಿದೇಶಿ ವ್ಯಾಪಾರ ನೀತಿಗೆ ತಿದ್ದುಪಡಿ ಮಾಡಿ, ಬಲವಂತದ ಕಾರ್ಮಿಕರ ಶ್ರಮದಿಂದ ಉತ್ಪಾದಿಸಲಾದ ಸರಕುಗಳ ಆಮದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ, ಅಮೆರಿಕ ಭಾರತಕ್ಕೆ ವಿಧಿಸಬೇಕಿದ್ದ ಸುಂಕವನ್ನು ಶೇ.10ಕ್ಕೆ ಇಳಿಸಿದೆ.
ಈ ಕುರಿತು ನಿನ್ನೆ ಹೊರಡಿಸಿದ ಸ್ಮರಣ ಪತ್ರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಕ್ರಮಗಳ ಪರಿಣಾಮವಾಗಿ, ಸಂಬಂಧಿತ ದೇಶಗಳು ಈ ನಿಷೇಧಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಮತ್ತಷ್ಟು ಉತ್ತೇಜಿಸಲು ಅವುಗಳ ಸರಕುಗಳಿಗೆ ಶೇ.10ರ ಸುಂಕ ವಿಧಿಸುವಂತೆ ವ್ಯಾಪಾರ ಪ್ರತಿನಿಧಿಗಳು ನನಗೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಲವಂತದ ಕಾರ್ಮಿಕರ ಶ್ರಮದಿಂದ ಉತ್ಪಾದಿಸಲಾದ ಸರಕುಗಳ ಆಮದನ್ನು ನಿಷೇಧಿಸುವ ಕಾನೂನುಗಳನ್ನು ಜಾರಿಗೆ ತರಲು ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಫಲವಾದ ಕಾರಣ, ಒಟ್ಟು 60 ಆರ್ಥಿಕ ವ್ಯವಸ್ಥೆಗಳ ಮೇಲೆ USTR ಸುಂಕ ವಿಧಿಸಿದೆ.
ಇವುಗಳಲ್ಲಿ ಭಾರತ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 17 ದೇಶಗಳಿಗೆ ಶೇ.10ರ ಸುಂಕ ವಿಧಿಸಲಾಗಿದ್ದು, ಉಳಿದ 43 ದೇಶಗಳಿಗೆ ಶೇ.12.5ರ ಸುಂಕ ವಿಧಿಸಲಾಗಿದೆ.
ಬಲವಂತದ ಕಾರ್ಮಿಕರಿಂದ ತಯಾರಿಸಲಾದ ಸರಕುಗಳ ಆಮದನ್ನು ನಿಷೇಧಿಸುವ ಕಾನೂನುಗಳಿಲ್ಲದ ಚೀನಾ, ಯುನೈಟೆಡ್ ಕಿಂಗ್‌ಡಮ್ ಹಾಗೂ ಜಪಾನ್‌ನಂತಹ ದೇಶಗಳಿಗೆ ಶೇ.12.5ರ ಹೆಚ್ಚಿನ ಸುಂಕ ಅನ್ವಯವಾಗಲಿದೆ.
ಆದಾಗ್ಯೂ, ದೇಶೀಯ ಮಟ್ಟದಲ್ಲಿ ಕೊರತೆ ಉಂಟುಮಾಡಬಹುದಾದ ಕಚ್ಚಾ ವಸ್ತುಗಳು, ಆರ್ಥಿಕತೆಗೆ ವ್ಯಾಪಕ ಅಡಚಣೆ ಉಂಟುಮಾಡಬಹುದಾದ ಉತ್ಪನ್ನಗಳು ಹಾಗೂ ಅಮೆರಿಕದಲ್ಲೇ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗದ ಸರಕುಗಳಿಗೆ ಈ ಸುಂಕ ಅನ್ವಯಿಸುವುದಿಲ್ಲ.
ಈ ಕ್ರಮವು ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಹಾಗೂ ಅನ್ಯಾಯಸಮ್ಮತ ವ್ಯಾಪಾರ ಪದ್ಧತಿಗಳನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಜೇಮಿಸನ್ ಗ್ರೀರ್ ತಿಳಿಸಿದ್ದಾರೆ.
ಈ ಕ್ರಮವು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ವ್ಯಾಪಾರದಲ್ಲಿನ ವಿಕೃತ ಪದ್ಧತಿಗಳನ್ನು ತಿದ್ದಿ, ವಿಶ್ವದಾದ್ಯಂತ ಕಾರ್ಮಿಕರ ಹಿತವನ್ನು ಸುಧಾರಿಸಲು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅಮೆರಿಕದ ಸುಪ್ರೀಂ ಕೋರ್ಟ್ ಫೆಬ್ರುವರಿಯಲ್ಲಿ ಟ್ರಂಪ್ ಆಡಳಿತವು ತುರ್ತು ಅಧಿಕಾರಗಳಡಿ 2025ರಲ್ಲಿ ವಿಧಿಸಿದ್ದ 'ಲಿಬರೇಶನ್ ಡೇ' ಪರಸ್ಪರ ಸುಂಕಗಳನ್ನು ರದ್ದುಗೊಳಿಸಿದ ಬಳಿಕ ಟ್ರಂಪ್ ಆಡಳಿತವು ಆರಂಭಿಸಿದ್ದ ಎರಡು ಸೆಕ್ಷನ್ 301 ತನಿಖೆಗಳ ಮುಂದುವರಿದ ಭಾಗವಾಗಿ ಈ ಹೊಸ ಕ್ರಮ ಕೈಗೊಳ್ಳಲಾಗಿದೆ.
ಜೂನ್‌ನಲ್ಲಿ ಪ್ರಸ್ತಾವಿತ ಸುಂಕಗಳನ್ನು ಪ್ರಕಟಿಸಿದ ನಂತರ ಭಾರತ ತನ್ನ ವಿದೇಶಿ ವ್ಯಾಪಾರ ನೀತಿಗೆ ತಿದ್ದುಪಡಿ ಮಾಡಿ, ಬಲವಂತದ ಕಾರ್ಮಿಕರಿಂದ ಉತ್ಪಾದಿಸಲಾದ ಸರಕುಗಳ ಆಮದನ್ನು ನಿಷೇಧಿಸಿರುವುದನ್ನು ಅಮೆರಿಕದ ಫೆಡರಲ್ ರಿಜಿಸ್ಟರ್ ಅಧಿಸೂಚನೆಯೂ ಉಲ್ಲೇಖಿಸಿದೆ.
ತಿದ್ದುಪಡಿ ಮಾಡಲಾದ ಸುಂಕದ ಬಗ್ಗೆ ಪ್ರತಿಕ್ರಿಯಿಸಿದ ವಾಷಿಂಗ್ಟನ್‌ನ ಕೈಗಾರಿಕಾ ಸಂಘಟನೆಯ ಕಾರ್ಯಕ್ರಮ ಅಧಿಕಾರಿ ಅಭಿಕ್ ಸೇನ್‌ಗುಪ್ತಾ, ಶೇ.12.5ರಿಂದ ಶೇ.10ಕ್ಕೆ ಇಳಿಕೆ ಸಂಖ್ಯಾತ್ಮಕವಾಗಿ ಸಣ್ಣ ಬದಲಾವಣೆ ಆಗಿದ್ದರೂ, ಅದರ ಸಂದೇಶ ಮಹತ್ವದ್ದಾಗಿದೆ. ಭಾರತ-ಅಮೆರಿಕ ಆರ್ಥಿಕ ಪಾಲುದಾರಿಕೆಯ ಕಾರ್ಯತಂತ್ರವನ್ನು ಉಳಿಸಿಕೊಂಡೇ ನಿಯಮ ಜಾರಿಯನ್ನು ಸಮತೋಲನಗೊಳಿಸಲು ವಾಷಿಂಗ್ಟನ್ ಸಿದ್ಧವಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಭಾರತವು ಅಮೆರಿಕದ ವ್ಯಾಪಾರ ಪ್ರತಿನಿಧಿ (USTR)ತನಿಖೆಗಳನ್ನು ವಿರೋಧಿಸಿದ್ದು, ಈ ವಿಷಯಗಳನ್ನು ಪ್ರಸ್ತುತ ಮಾತುಕತೆಯಲ್ಲಿರುವ ಭಾರತ–ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಭಾಗವಾಗಿ ಪರಿಹರಿಸಬೇಕು ಎಂಬ ನಿಲುವನ್ನು ಮುಂದುವರಿಸಿದೆ.
ಅಮೆರಿಕವು ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ಹಾಗೂ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ವಾಣಿಜ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಉಭಯ ದೇಶಗಳ ನಡುವಿನ ಸರಕು ವ್ಯಾಪಾರದ ಮೌಲ್ಯ ಸುಮಾರು 141 ಬಿಲಿಯನ್ ಅಮೆರಿಕ ಡಾಲರ್ ಆಗಿದ್ದು, ಇದರಲ್ಲಿ ಭಾರತದ ರಫ್ತು 87.3 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



