ವಿದೇಶ

10 ವರ್ಷದಲ್ಲಿ ಬ್ರಿಟನ್‌ಗೆ 7ನೇ ಪ್ರಧಾನಿ; ಸ್ಟಾರ್ಮರ್ ರಾಜೀನಾಮೆ ಬೆನ್ನಲ್ಲೇ ಮುಂದಿನ ಪ್ರಧಾನಿಯಾಗಿ ಆಂಡಿ ಬರ್ನ್‌ಹ್ಯಾಮ್ ಆಯ್ಕೆ

ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆಯ ಕಾರಣ ಬ್ರಿಟನ್‌ನ ಆಡಳಿತಾರೂಢ ಲೇಬರ್ ಪಕ್ಷದ ಹಿರಿಯ ರಾಜಕಾರಣಿ ಮತ್ತು ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆದ ಆಂಡಿ ಬರ್ನ್‌ಹ್ಯಾಮ್ ಅವರು ಬ್ರಿಟನ್‌ನ ಮುಂದಿನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

10 ವರ್ಷದಲ್ಲಿ ಬ್ರಿಟನ್‌ಗೆ 7ನೇ ಪ್ರಧಾನಿ; ಸ್ಟಾರ್ಮರ್ ರಾಜೀನಾಮೆ ಬೆನ್ನಲ್ಲೇ ಮುಂದಿನ ಪ್ರಧಾನಿಯಾಗಿ ಆಂಡಿ ಬರ್ನ್‌ಹ್ಯಾಮ್ ಆಯ್ಕೆ
ಆಂಡಿ ಬರ್ನ್‌ಹ್ಯಾಮ್ — (Photo | AP)
Published On :

ಲಂಡನ್ (ಬ್ರಿಟನ್): ನೂರಾರು ವರ್ಷಗಳ ಕಾಲ ಪ್ರಪಂಚದ ಅಂದಾಜು 80ಕ್ಕೂ ಅಧಿಕ ದೇಶಗಳಲ್ಲಿ ಆಳ್ವಿಕೆ ಮಾಡಿದ ಬ್ರಿಟಿಷರಿಗೆ ಈಗ ಓರ್ವ ಸರಿಯಾದ ಪ್ರಧಾನಿಯನ್ನೇ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ; ಹಾಗಾಗಿಯೇ, ಇದೀಗ ಬ್ರಿಟನ್ ಕಳೆದ 10 ವರ್ಷದಲ್ಲಿ ತನ್ನ 7ನೇ ಪ್ರಧಾನಿಯನ್ನ ಪಡೆಯಲು ಸಿದ್ಧವಾಗುತ್ತಿದೆ. ಹೌದು, ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆಯ ಕಾರಣ ಬ್ರಿಟನ್‌ನ ಆಡಳಿತಾರೂಢ ಲೇಬರ್ ಪಕ್ಷದ ಹಿರಿಯ ರಾಜಕಾರಣಿ ಮತ್ತು ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆದ ಆಂಡಿ ಬರ್ನ್‌ಹ್ಯಾಮ್ (Andy Burnham) ಅವರು ಬ್ರಿಟನ್‌ನ ಮುಂದಿನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕೀರ್ ಸ್ಟಾರ್ಮರ್ ರಾಜೀನಾಮೆ ಯಾಕೆ?

ಮೇ 2026 ರಲ್ಲಿ ನಡೆದ ಯುಕೆಯ ಸ್ಥಳೀಯ ಕೌನ್ಸಿಲ್ ಚುನಾವಣೆಯಲ್ಲಿ ಲೇಬರ್ ಪಕ್ಷವು ಭಾರಿ ಸೋಲನ್ನು ಅನುಭವಿಸಿತು. ಇದು ಪಕ್ಷದ ಸಂಸದರಲ್ಲಿ ತೀವ್ರ ಆತಂಕ ಮೂಡಿಸಿತು. ಜೊತೆಗೆ ಪಕ್ಷದ ಜನಪರ ಯೋಜನೆಗಳು ಹಾಗೂ ವಲಸೆ ನೀತಿಗಳ ವಿರುದ್ಧ ಲೇಬರ್ ಪಕ್ಷದ 120 ಕ್ಕೂ ಹೆಚ್ಚು ಸಂಸದರು ದಂಗೆ ಎದ್ದಿದ್ದರು. ಅದ್ರಲ್ಲೂ, ಪಕ್ಷದ ಸಂಸದರು ಮತ್ತು ಕ್ಯಾಬಿನೆಟ್ ಮಂತ್ರಿಗಳೇ ಸ್ಟಾರ್ಮರ್ ಅವರಿಗೆ ಹುದ್ದೆಯಿಂದ ಕೆಳಗಿಳಿಯಲು ಒತ್ತಡ ಹೇರಿದರು. ಹಾಗಾಗಿ, ಕೀರ್ ಸ್ಟಾರ್ಮರ್ ರಾಜೀನಾಮೆ ನೀಡಿದ್ದಾರೆ. ಅದರಂತೆ, ಕೀರ್ ಸ್ಟಾರ್ಮರ್ ಅವರು ಕೇವಲ ಎರಡು ವರ್ಷಗಳ ಕಾಲ (ಜುಲೈ 2024 ರಿಂದ ಜೂನ್ 2026) ಬ್ರಿಟನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ಯಾರು ಈ ಆಂಡಿ ಬರ್ನ್‌ಹ್ಯಾಮ್?

ಉತ್ತರ ಇಂಗ್ಲೆಂಡ್‌ನ ಹಿತಾಸಕ್ತಿಗಳ ಪರವಾಗಿ ದೃಢವಾಗಿ ಧ್ವನಿ ಎತ್ತಿದ್ದಕ್ಕಾಗಿ ಇವರನ್ನು ರಾಜಕೀಯ ವಲಯದಲ್ಲಿ 'ಕಿಂಗ್ ಆಫ್ ದಿ ನಾರ್ತ್' ಎಂದು ಕರೆಯಲಾಗುವ ಈ ಆಂಡಿ ಬರ್ನ್‌ಹ್ಯಾಮ್ 2017 ರಿಂದ ಜೂನ್ 2026 ರವರೆಗೆ ಗ್ರೇಟರ್ ಮ್ಯಾಂಚೆಸ್ಟರ್‌ನ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಇನ್ನು, ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಭಾಗವಹಿಸಲು ಇವರು ಜೂನ್ 18 ರಂದು ನಡೆದ ಮೇಕರ್‌ಫೀಲ್ಡ್ ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಸಂಸತ್ ಸದಸ್ಯರಾಗಿ ಮರು ಆಯ್ಕೆಯಾಗಿದ್ದರು.

ಪ್ರಧಾನಿಯಾಗಿ ಆಂಡಿ ಬರ್ನ್‌ಹ್ಯಾಮ್ ಮುಂದಿರುವ ಸವಾಲುಗಳು:

  • ರಕ್ಷಣಾ ಬಜೆಟ್: ರಷ್ಯಾ-ಉಕ್ರೇನ್ ಮತ್ತು ಮಧ್ಯಪ್ರಾಚ್ಯ ಯುದ್ಧಗಳ ಹಿನ್ನೆಲೆಯಲ್ಲಿ ಬ್ರಿಟನ್‌ನ ರಕ್ಷಣಾ ವೆಚ್ಚವನ್ನು ಜಿಡಿಪಿಯ ಶೇ. 3ಕ್ಕೆ ಹೆಚ್ಚಿಸಲು ರಕ್ಷಣಾ ಇಲಾಖೆಯಿಂದ ತೀವ್ರ ಒತ್ತಡವಿದೆ.ಇದಕ್ಕಾಗಿ ಬರ್ನ್‌ಹ್ಯಾಮ್ ವಾರ್ಷಿಕವಾಗಿ ಹೆಚ್ಚುವರಿ £9 ಶತಕೋಟಿ (90,000 ಕೋಟಿ ರೂ.ಗಿಂತ ಅಧಿಕ) ಹಣವನ್ನು ಸಂಗ್ರಹಿಸಬೇಕಿದೆ.

  • ಹಣಕಾಸಿನ ಕೊರತೆ: ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದನ್ನು ಸುಧಾರಿಸಲು ವಾರ್ಷಿಕವಾಗಿ ಶತಕೋಟಿ ಪೌಂಡ್‌ಗಳ ಅಗತ್ಯವಿದೆ.

  • ತೆರಿಗೆ ವಿವಾದ: ಸಾಮಾಜಿಕ ರಕ್ಷಣೆಗಾಗಿ ಶ್ರೀಮಂತರ ಆಸ್ತಿಪಾಸ್ತಿಗಳ ಮೇಲೆ ಶೇ. 10ರಷ್ಟು ಆನುವಂಶಿಕ ತೆರಿಗೆ ವಿಧಿಸುವ ಇವರ ಹಳೆಯ ಪ್ರಸ್ತಾಪಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧವಿದೆ.

  • ಅಕ್ರಮ ವಲಸೆ: ಸಣ್ಣ ದೋಣಿಗಳ ಮೂಲಕ ಇಂಗ್ಲಿಷ್ ಕಾಲುವೆ ದಾಟಿ ಬರುತ್ತಿರುವ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯಲು ವಿಫಲವಾದರೆ ವಿರೋಧ ಪಕ್ಷವಾದ ರಿಫಾರ್ಮ್ ಯುಕೆಗೆ ಲಾಭವಾಗಲಿದೆ.

  • ಇಂಧನ ದರ: ಇಸ್ರೇಲ್-ಇರಾನ್ ಸಂಘರ್ಷದ ಕಾರಣ ಜಾಗತಿಕವಾಗಿ ತೈಲ ಬೆಲೆ ಏರಿದ್ದು, ಬ್ರಿಟನ್‌ನಲ್ಲಿ ಗೃಹಬಳಕೆಯ ವಿದ್ಯುತ್ ಮತ್ತು ಗ್ಯಾಸ್ ಬಿಕ್ಕಟ್ಟು ಹೆಚ್ಚಾಗಿದೆ.

  • ಭರವಸೆಗಳ ಈಡೇರಿಕೆ: ಮ್ಯಾಂಚೆಸ್ಟರ್‌ನಲ್ಲಿ ನೀಡಿದ ಭರವಸೆಯಂತೆ ರೈಲು ದರ, ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಕಡಿಮೆ ಮಾಡಿ ಜನಸಾಮಾನ್ಯರ ಕೈಗೆಟುಕುವಂತೆ ಮಾಡುವುದು ಬರ್ನ್‌ಹ್ಯಾಮ್‌ಗೆ ದೊಡ್ಡ ಸವಾಲು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.