US-Israel ದಾಳಿಯ ಕರಾಳ ಚಿತ್ರಣ; ಧ್ವಂಸಗೊಂಡ ಖಮೇನಿ ನಿವಾಸದ Video ರಿಲೀಸ್; ಬೆಚ್ಚಿಬೀಳಿಸುವಂತಿದೆ ದೃಶ್ಯ..!
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯ ಮೊದಲ ದಿನವೇ 86 ವರ್ಷದ ಅಲಿ ಖಮೇನಿ ಮೃತಪಟ್ಟಿದ್ದರು.

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿವಾಸದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಿಂದ ಉಂಟಾದ ಹಾನಿಯ ದೃಶ್ಯಗಳನ್ನು ಇರಾನ್ ಸರ್ಕಾರಿ ಮಾಧ್ಯಮ ಮೊದಲ ಬಾರಿಗೆ ಬಹಿರಂಗಪಡಿಸಿದೆ. ಖಮೇನಿ ಅವರ ಅಂತ್ಯಕ್ರಿಯೆಯ ದಿನವೇ ಈ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯ ಮೊದಲ ದಿನವೇ 86 ವರ್ಷದ ಅಲಿ ಖಮೇನಿ ಮೃತಪಟ್ಟಿದ್ದರು. ಈ ದಾಳಿಯಲ್ಲಿ ಅವರ ಕುಟುಂಬದ ಹಲವು ಸದಸ್ಯರು, 14 ತಿಂಗಳ ಮೊಮ್ಮಗಳು ಸೇರಿದಂತೆ ಹಲವರು ಸಾವನ್ನಪ್ಪಿದ್ದರು.
ಈ ದಾಳಿಯಲ್ಲಿ ಖಮೇನಿ ಅವರ ಪುತ್ರ ಹಾಗೂ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಅಲಿ ಖಮೇನಿ ಕೂಡ ಗಾಯಗೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಸುಮಾರು 35 ಸೆಕೆಂಡ್‌ಗಳ ವಿಡಿಯೋದಲ್ಲಿ ಟೆಹ್ರಾನ್'ನಲ್ಲಿರುವ ಖಮೇನಿ ಅವರ ನಿವಾಸದಲ್ಲಿರುವ ಇಮಾಮ್ ಖೊಮೇನಿ ಹುಸೈನಿಯಾ ಸಭಾಂಗಣ ಸಂಪೂರ್ಣ ಹಾನಿಗೊಳಗಾಗಿರುವ ದೃಶ್ಯಗಳು ಕಂಡು ಬಂದಿವೆ.
ಕಟ್ಟಡದ ಭಾಗಗಳು ಕುಸಿದಿರುವುದು, ಕಬ್ಬಿಣದ ಕಂಬಗಳು ಬಾಗಿರುವುದು ಹಾಗೂ ಅವಶೇಷಗಳು ಎಲ್ಲೆಡೆ ಬಿದ್ದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ವರದಿಗಳ ಪ್ರಕಾರ, ಇದೇ ಸಭಾಂಗಣದಲ್ಲಿ ಖಮೇನಿ ಮಹತ್ವದ ಸಭೆಗಳನ್ನು ನಡೆಸುತ್ತಿದ್ದರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಖಮೇನಿ ಅವರ ಪಾರ್ಥಿವ ಶರೀರವನ್ನು ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಟೆಹ್ರಾನ್ ಹಾಗೂ ಕೊಮ್ ನಗರಗಳ ಮೂಲಕ ಅಂತಿಮ ಯಾತ್ರೆ ನಡೆಸಲಾಯಿತು. ಇರಾಕ್‌ನ ಶಿಯಾ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾಕ್ಕೂ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗಿದ್ದು, ಲಕ್ಷಾಂತರ ಮಂದಿ ಅಂತಿಮ ನಮನ ಸಲ್ಲಿಸಿದ್ದಾರೆ.
ಗುರುವಾರ ಖಾಮೆನೇನಿ ಅವರ ಹುಟ್ಟೂರು ಮಶ್ಹದ್ನಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ವಾರದಷ್ಟು ದಿನ ನಡೆದ ಬಹುನಗರ ಅಂತಿಮ ಯಾತ್ರೆಗೆ ತೆರೆ ಬೀಳಲಿದೆ.
ಅಲಿ ಖಮೇನಿ ಅವರ ನಿಧನದ ನಂತರ, ಅವರ ಮಗ ಮೊಜ್ತಬಾ ಖಮೇನಿ ಇರಾನ್‌ನ ನೂತನ ಪರಮೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಕದನ ವಿರಾಮದ ಮಾತುಕತೆಗಳು ಮುರಿದುಬಿದ್ದಿದ್ದು, ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನ ವಾತಾವರಣ ಹಾಗೂ ಮಿಲಿಟರಿ ಸಂಘರ್ಷ ಮುಂದುವರಿದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ಕದನ ವಿರಾಮ "ಅಂತ್ಯಗೊಂಡಿದೆ" ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕವು ಹಾರ್ಮುಜ್ ಜಲಸಂಧಿಯ ನೌಕಾಯಾನ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಇರಾನ್‌ನ ಮೇಲೆ ಹೊಸ ವೈಮಾನಿಕ ದಾಳಿ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದು, ಇತ್ತೀಚಿನ ಬೆಳವಣಿಗೆಗಳು ಮತ್ತೆ ಪೂರ್ಣ ಪ್ರಮಾಣದ ಯುದ್ಧದ ಆತಂಕವನ್ನು ಹೆಚ್ಚಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



