Nepal floods: ಮೃತರ ಸಂಖ್ಯೆ 675ಕ್ಕೆ ಏರಿಕೆ; ರಾಸುವಾ ಜಲವಿದ್ಯುತ್ ಯೋಜನೆ ಸ್ಥಳದಿಂದ ನಾಲ್ವರು ಭಾರತೀಯರ ರಕ್ಷಣೆ!
ತಮಿಳುನಾಡಿನ 21 ಯಾತ್ರಾರ್ಥಿಗಳನ್ನು ರಕ್ಷಿಸಿ ದೆಹಲಿಗೆ ಕರೆತರಲಾಗಿದೆ. ಅಲ್ಲದೆ, ನೇಪಾಳದಲ್ಲಿ ಸಿಲುಕಿಕೊಂಡಿದ್ದ ಮಹಾರಾಷ್ಟ್ರದ 404 ಪ್ರವಾಸಿಗರ ಪೈಕಿ 37 ಮಂದಿಯನ್ನು ಭಾರತಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಕಠ್ಮಂಡು: ಮಧ್ಯ ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 675ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಈ ದುರಂತದ ನಂತರ 2,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಶನಿವಾರದಂದು ರಕ್ಷಣಾ ತಂಡಗಳು ಹೆಚ್ಚಿನ ಮೃತದೇಹಗಳನ್ನು ಹೊರತೆಗೆದಿವೆ.
ರಾಸುವಾ ಜಿಲ್ಲೆಯಲ್ಲಿರುವ ಭೋಟೆ ಕೋಶಿ ನದಿಯ ಉಗಮಸ್ಥಾನದಲ್ಲಿ ಭೀಕರ ಗ್ಲೇಸಿಯರ್ (ಹಿಮನದಿ) ಕುಸಿತದಿಂದಾಗಿ ಹೊಸ ತಡೆಗೋಡೆ ಸರೋವರವೊಂದು (Barrier Lake) ಸೃಷ್ಟಿಯಾಗಿದ್ದು, ಅದು ಒಡೆದುಹೋಗುವ ಸಾಧ್ಯತೆಯಿದೆ ಎಂದು ಚೀನಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ನದಿಯ ಕೆಳಭಾಗದ ಪ್ರದೇಶಗಳಲ್ಲಿ ಹೊಸ ಪ್ರವಾಹದ ಭೀತಿ ಉಂಟಾಗಿದೆ.
ಹಿಮಾಲಯದ ಪ್ರದೇಶದಲ್ಲಿ ಸುನಾಮಿಯಂತಹ ಭೀಕರ ನೀರಿನ ಪ್ರವಾಹ ಮತ್ತು ಅವಶೇಷಗಳು ಹಳ್ಳಿಗಳನ್ನು ನುಂಗಿಹಾಕಿದ ನಂತರ ನಾಪತ್ತೆಯಾದ ಸಾವಿರಾರು ಜನರನ್ನು ಪತ್ತೆಹಚ್ಚಲು ನೇಪಾಳ ಮತ್ತು ಚೀನಾದ ರಕ್ಷಣಾ ತಂಡಗಳು ಶನಿವಾರವೂ ಹರಸಾಹಸ ಪಟ್ಟವು
ಈ ಮಧ್ಯೆ ತಮಿಳುನಾಡಿನ 21 ಯಾತ್ರಾರ್ಥಿಗಳನ್ನು ರಕ್ಷಿಸಿ ದೆಹಲಿಗೆ ಕರೆತರಲಾಗಿದೆ. ಅಲ್ಲದೆ, ನೇಪಾಳದಲ್ಲಿ ಸಿಲುಕಿಕೊಂಡಿದ್ದ ಮಹಾರಾಷ್ಟ್ರದ 404 ಪ್ರವಾಸಿಗರ ಪೈಕಿ 37 ಮಂದಿಯನ್ನು ಭಾರತಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಯುಪಿ ವ್ಯಕ್ತಿ ಪ್ರವಾಹದ ನಂತರ ನಾಪತ್ತೆ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ ನಂತರ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ 34 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಅವರ ಕುಟುಂಬದೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಕುಟುಂಬದ ಮೂಲಗಳು ಶನಿವಾರ ತಿಳಿಸಿವೆ.
ಕಪ್ತಂಗಂಜ್ ತಹಸಿಲ್ ವ್ಯಾಪ್ತಿಯ ಮಲುಕಾಹಿ ಗ್ರಾಮದ ನಿವಾಸಿಯಾಗಿರುವ ಕರಣ್ ಶರ್ಮಾ, ನೇಪಾಳದ ರಸುವಾ ಜಿಲ್ಲೆಯಲ್ಲಿರುವ 216 ಮೆಗಾವ್ಯಾಟ್ ಸಾಮರ್ಥ್ಯದ 'ಅಪ್ಪರ್ ತ್ರಿಶೂಲಿ-1' ಜಲವಿದ್ಯುತ್ ಯೋಜನೆಯಲ್ಲಿ ಎಲೆಕ್ಟ್ರಿಷಿಯನ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ದುರಂತದ ನಂತರ ನಾಪತ್ತೆಯಾದ ಉದ್ಯೋಗಿಗಳ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕುಟುಂಬದ ಪ್ರಕಾರ, ಆಗಸ್ಟ್ 26 ರ ರಾತ್ರಿ ಶರ್ಮಾ ಅವರೊಂದಿಗೆ ಕೊನೆಯದಾಗಿ ಮಾತನಾಡಿದ್ದಾರೆ. ಆ ಸಮಯದಲ್ಲಿ ಯಾವುದೇ ಅಪಾಯದ ಮುನ್ಸೂಚನೆ ಅವರಿಗೆ ತಿಳಿದಿರಲಿಲ್ಲ. ಅಂದಿನಿಂದ ಅವರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ, ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ.
ರಾಸುವಾ ಜಲವಿದ್ಯುತ್ ಯೋಜನೆಯಿಂದ ನಾಲ್ವರು ಭಾರತೀಯರ ರಕ್ಷಣೆ: ರಸುವಾ ಜಲವಿದ್ಯುತ್ ಯೋಜನೆಯ ಸ್ಥಳದಿಂದ ನಾಲ್ವರು ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.
ಅವರು ಶೀಘ್ರದಲ್ಲೇ ಕಠ್ಮಂಡುವನ್ನು ತಲುಪುವ ನಿರೀಕ್ಷೆಯಿದೆ ಎಂದು ಸಚಿವಾಲಯ ಹೇಳಿದೆ. ಈ ಮಧ್ಯೆ ಶನಿವಾರ ಸಂಜೆ 5 ಗಂಟೆಯ ವೇಳೆಗೆ 287 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದು, 88 ಮಂದಿಯನ್ನು ರಕ್ಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



