Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!
ನಾಪತ್ತೆಯಾದವರಲ್ಲಿ ಕೈಲಾಸ ಮಾನಸ ಸರೋವರಕ್ಕೆ ತೆರಳಿದ್ದ ವಿದೇಶಿ ಪ್ರವಾಸಿಗರು ಮತ್ತು ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.

ಕಠ್ಮಂಡು: ಟಿಬೆಟ್‌ನಲ್ಲಿ ಹಿಮನದಿ ಕುಸಿತದಿಂದ ಬುಧವಾರ ಸಂಭವಿಸಿದ ಭೀಕರ ಪ್ರವಾಹ ಚೀನಾ-ನೇಪಾಳ ಗಡಿ ಪ್ರದೇಶದಲ್ಲಿ ಭಾರೀ ವಿನಾಶ ಸೃಷ್ಟಿಸಿದ್ದು, ಈ ಕಂಡುಕೇಳರಿಯದ ಪ್ರಕೃತಿ ವಿಕೋಪದಲ್ಲಿ ಬರೊಬ್ಬರಿ 30ಕ್ಕೂ ಅಧಿಕ ದೇಶಗಳ ನಾಗರೀಕರು ನಾಪತ್ತೆಯಾಗಿದ್ದಾರೆ.
ಗುರುವಾರದ ವೇಳೆಗೆ 177ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 1,300ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿವಿಧ ಅಧಿಕಾರಿಗಳು ಹಾಗೂ ಸ್ಥಳೀಯ ವರದಿಗಳು ತಿಳಿಸಿವೆ. ನಾಪತ್ತೆಯಾದವರಲ್ಲಿ ಕೈಲಾಸ ಮಾನಸ ಸರೋವರಕ್ಕೆ ತೆರಳಿದ್ದ ವಿದೇಶಿ ಪ್ರವಾಸಿಗರು ಮತ್ತು ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.
ವಿವಿಧ ಸಂಸ್ಥೆಗಳು ನೀಡಿರುವ ಅಂಕಿ-ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಮಾಹಿತಿಯನ್ನು ಸಂಗ್ರಹಿಸುವ ವಿಧಾನ, ವರದಿ ಮಾಡುವ ಸಮಯ, ವಿವರಗಳ ಪರಿಶೀಲನೆ ಹಾಗೂ ದುರಂತ ಪ್ರದೇಶದಲ್ಲಿರುವ ರಕ್ಷಣಾ ತಂಡಗಳು ಮತ್ತು ಸಾವುನೋವುಗಳ ಅಂಕಿ-ಅಂಶ ಸಂಗ್ರಹಿಸುವ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಈ ವ್ಯತ್ಯಾಸ ಉಂಟಾಗಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ ನೇಪಾಳ ಪೊಲೀಸರ ಪ್ರಕಾರ, ಕನಿಷ್ಠ 165 ಮಂದಿ ಮೃತಪಟ್ಟಿದ್ದು, 826 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 113 ನೇಪಾಳಿ ಪ್ರವಾಸಿಗರು, 85 ಸೇನೆ ಮತ್ತು ಪೊಲೀಸ್ ಸಿಬ್ಬಂದಿ, ರಸುವಾ ಜಿಲ್ಲೆಯ 161 ನಿವಾಸಿಗಳು ಹಾಗೂ ನೆರೆಯ ನುವಾಕೋಟ್ ಜಿಲ್ಲೆಯ ಒಬ್ಬರು ಸೇರಿದ್ದಾರೆ ಎಂದು ಹೇಳಲಾಗಿದೆ.
500ಕ್ಕೂ ಅಧಿಕ ವಿದೇಶಿಗರ ನಾಪತ್ತೆ
ಇನ್ನು ಈ ಭೀಕರ ಪ್ರವಾಹದಲ್ಲಿ 517 ವಿದೇಶಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿ ಮಾಹಿತಿ ನೀಡಿದೆ.
ನೇಪಾಳದ ಪ್ರವಾಸೋದ್ಯಮ ಮಂಡಳಿ ಮತ್ತು ರಾಷ್ಟ್ರೀಯ ಅಧಿಕಾರಿಗಳ ಮಾಹಿತಿಯಂತೆ, ನಾಪತ್ತೆಯಾದವರಲ್ಲಿ ಹಲವು ದೇಶಗಳ ನಾಗರಿಕರು ಸೇರಿದ್ದು, ಈ ಪೈಕಿ ಅಮೆರಿಕದ 65, ಉಕ್ರೇನ್ ನ 53, ಮಲೇಷ್ಯಾದ 51, ಆಸ್ಟ್ರೇಲಿಯಾದ 35, ಬ್ರಿಟನ್ ನ 33 ಮತ್ತು ಕೆನಡಾದ 25 ಮಂದಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ.
ಅಲ್ಲದೆ ದಕ್ಷಿಣ ಕೊರಿಯಾದ 9, ಸಿಂಗಾಪುರದ 8, ಜರ್ಮನಿಯ 8, ರಷ್ಯಾದ 8, ದಕ್ಷಿಣ ಆಫ್ರಿಕಾದ 6, ಲಾಟ್ವಿಯಾದ 6, ಜಪಾನ್ ನ 5, ನ್ಯೂಜಿಲೆಂಡ್ ನ 5, ಫ್ರಾನ್ಸ್ ನ 4, ಬೆಲ್ಜಿಯಂನ 3 ಮತ್ತು ಸ್ಪೇನ್ ನ 3 ಮಂದಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ.
ಇಟಲಿ, ಕಜಕಿಸ್ತಾನ್, ಪೋರ್ಚುಗಲ್, ಐರ್ಲೆಂಡ್ ಮತ್ತು ನೆದರ್ಲೆಂಡ್ಸ್‌ನ ತಲಾ ಇಬ್ಬರು ನಾಪತ್ತೆಯಾಗಿದ್ದು, ಬೆಲಾರಸ್, ಫಿನ್ಲೆಂಡ್, ಹಂಗೇರಿ, ಇಸ್ರೇಲ್, ಲಿಥುವೇನಿಯಾ, ಫಿಲಿಪ್ಪೀನ್ಸ್, ಬಲ್ಗೇರಿಯಾ, ಸ್ವಿಟ್ಜರ್‌ಲ್ಯಾಂಡ್, ಸರ್ಬಿಯಾ ಮತ್ತು ಸ್ವೀಡನ್‌ನ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.
ಉಕ್ರೇನ್ ಪ್ರವಾಸಿಗರೂ ನಾಪತ್ತೆ
ಉಕ್ರೇನ್ ವಿದೇಶಾಂಗ ಸಚಿವಾಲಯದ ಪ್ರಕಾರ, 53 ಉಕ್ರೇನಿಯನ್ನರು ನಾಪತ್ತೆಯಾಗಿದ್ದಾರೆ. ಇವರಲ್ಲಿ 46 ಮಂದಿ ಪ್ರವಾಸಿಗರಾಗಿದ್ದು, ಅವರೊಂದಿಗೆ ನೇಪಾಳದ ಅಧಿಕಾರಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಇದೇ ವೇಳೆ, ಐದು ಜಪಾನ್ ನಾಗರಿಕರು ಇನ್ನೂ ಪತ್ತೆಯಾಗಿಲ್ಲ ಎಂಬ ವರದಿಗಳ ಬಗ್ಗೆ ಜಪಾನ್ ಪ್ರಧಾನಿ ಸನಾಏ ತಕೈಚಿ ಆತಂಕ ವ್ಯಕ್ತಪಡಿಸಿದ್ದಾರೆ.
ನೇಪಾಳದಲ್ಲಿ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಒಂಬತ್ತು ದಕ್ಷಿಣ ಕೊರಿಯಾ ನಾಗರಿಕರು ಕೂಡ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕೈಲಾಸ ಯಾತ್ರಿಕರ ಆತಂಕ ಹೆಚ್ಚಳ
ಕೈಲಾಸ ಮಾನಸ ಸರೋವರ ಯಾತ್ರೆ ಹಾಗೂ ಟಿಬೆಟ್‌ಗೆ ಪ್ರವಾಸಕ್ಕೆ ತೆರಳಿದ್ದವರ ಪೈಕಿ ಹಲವರು ಈ ದುರಂತದಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಹೀಗಾಗಿ ನಾಪತ್ತೆಯಾದವರ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಮತ್ತು ಚೀನಾ ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯ ನಾಪತ್ತೆಯಾದವರ ನಿಖರ ಸಂಖ್ಯೆಯನ್ನು ಖಚಿತಪಡಿಸುವ ಕಾರ್ಯ ನಡೆಯುತ್ತಿದ್ದು, ರಕ್ಷಣಾ ತಂಡಗಳು ಸಂಪರ್ಕ ಕಡಿತಗೊಂಡ ಪ್ರದೇಶಗಳಿಗೆ ತಲುಪಲು ಪ್ರಯತ್ನಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



