ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಆರೋಗ್ಯ ಗಂಭೀರ? ಅಧ್ಯಕ್ಷ ಪೆಜೆಶ್ಕಿಯಾನ್ ರಹಸ್ಯ ಭೇಟಿ..!
ಭಾನುವಾರ ಇರಾನ್‌ನ ಅರೆ ಸರ್ಕಾರಿ ಸುದ್ದಿ ಸಂಸ್ಥೆ ಮೆಹರ್ ನ್ಯೂಸ್, ದಿನಾಂಕ ನಮೂದಿಸದ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸರ್ವೋಚ್ಚ ನಾಯಕ ಆರೋಗ್ಯವಾಗಿರುವಂತೆ ಕಾಣಿಸಿಕೊಂಡಿದ್ದಾರೆ.

ಟೆಹ್ರಾನ್: ಇರಾನ್ ಸರ್ವೋಚ್ಚ ನಾಯಕ (Supreme Leader) ಆಯತೊಲ್ಲಾ ಮೋಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಬೆನ್ನಲ್ಲೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಖಮೇನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭಾನುವಾರ ನಡೆದ ಈ ಸಭೆಯಲ್ಲಿ ಇರಾನ್‌ನ ಸೇನಾ ಪರಿಸ್ಥಿತಿ, ಆರ್ಥಿಕ ಒತ್ತಡ ಹಾಗೂ ದೇಶದ ಜನರ ಅಗತ್ಯಗಳನ್ನು ಈಡೇರಿಸುವ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಪ್ರೆಸ್ ಟಿವಿ ವರದಿ ಮಾಡಿದೆ.
ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಇರಾನ್ ಎದುರಿಸುತ್ತಿರುವ ಸೇನಾ ಹಾಗೂ ಆರ್ಥಿಕ ಸವಾಲುಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.
ಪ್ರೆಸ್ ಟಿವಿ ವರದಿ ಪ್ರಕಾರ, ಇರಾನ್ ಜನರ ಅಗತ್ಯಗಳು ಹಾಗೂ ಜೀವನೋಪಾಯ, ಪ್ರಸ್ತುತ ಯುದ್ಧದ ಸ್ಥಿತಿ ಮತ್ತು ಅದರ ಮುಂದಿನ ಬೆಳವಣಿಗೆ, ಸೇನಾ ವಲಯದಲ್ಲಿನ ಬೆಳವಣಿಗೆಗಳ ಕುರಿತು ಪೆಜೆಶ್ಕಿಯಾನ್ ಮತ್ತು ಮೊಜ್ತಬಾ ಖಮೇನಿ ಚರ್ಚಿಸಿದ್ದಾರೆ.
ಇರಾನ್‌ನ ಕರೆನ್ಸಿ ರಿಯಾಲ್, ವಿದೇಶಿ ವಿನಿಮಯ ಹಾಗೂ ಇಂಧನಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಸುರಕ್ಷಿತವಾಗಿರಿಸುವುದು ಮತ್ತು ವೆಚ್ಚವನ್ನು ನಿರ್ವಹಿಸುವ ಬಗ್ಗೆಯೂ ಮಾತುಕತೆ ನಡೆದಿದ್ದು, ವಿದೇಶಿ ಪಾಲುದಾರರೊಂದಿಗೆ ಇರಾನ್‌ನ ಆರ್ಥಿಕ ಸಂಬಂಧಗಳು ಹಾಗೂ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ ಎಂದು ವರದಿಗಳು ತಿಳಿಸಿದೆ.
ಮೊಜ್ತಬಾ ಖಮೇನಿ ಅವರಿಗೆ ಸಂಬಂಧಿಸಿದೆ ಎಂದು ಹೇಳಲಾಗುವ ಫಾರ್ಸಿ ಭಾಷೆಯ ‘ಎಕ್ಸ್’ ಖಾತೆಯಲ್ಲೂ ಈ ಭೇಟಿಯ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.
ಮೊಜ್ತಬಾ ಖಮೇನಿ ಅವರ ಆರೋಗ್ಯದ ಕುರಿತು ಹಲವು ದಿನಗಳಿಂದ ಊಹಾಪೋಹಗಳು ಹರಿದಾಡುತ್ತಿವೆ.
ಭಾನುವಾರ ಇರಾನ್‌ನ ಅರೆ ಸರ್ಕಾರಿ ಸುದ್ದಿ ಸಂಸ್ಥೆ ಮೆಹರ್ ನ್ಯೂಸ್, ದಿನಾಂಕ ನಮೂದಿಸದ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸರ್ವೋಚ್ಚ ನಾಯಕ ಆರೋಗ್ಯವಾಗಿರುವಂತೆ ಕಾಣಿಸಿಕೊಂಡಿದ್ದಾರೆ.
ಇಸ್ರೇಲಿ ಮಾಧ್ಯಮಗಳು ಖಮೇನಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಮಾಡಿದ ಬೆನ್ನಲ್ಲೇ ಈ ವಿಡಿಯೊ ಬಿಡುಗಡೆಯಾಗಿದೆ.
ಶುಕ್ರವಾರ ಇಸ್ರೇಲಿ ಮಾಧ್ಯಮಗಳು ಮೊಜ್ತಬಾ ಖಮೇನಿ ಅವರು ‘ಅತ್ಯಂತ ಗಂಭೀರ ಸ್ಥಿತಿಯಲ್ಲಿ’ ಇದ್ದಾರೆ ಎಂದು ವರದಿ ಮಾಡಿದ್ದವು.
ಚಾನೆಲ್ 14, ಇರಾನ್‌ನಲ್ಲಿನ ಮೂಲಗಳನ್ನು ಉಲ್ಲೇಖಿಸಿ, ಹಾಗೂ ‘ಜೆರುಸಲೇಮ್ ಪೋಸ್ಟ್’, ಇರಾನ್‌ವೈರ್ ಮತ್ತು ಪೆಜೆಶ್ಕಿಯಾನ್ ಆಡಳಿತಕ್ಕೆ ಹತ್ತಿರದ ಮೂಲಗಳನ್ನು ಉಲ್ಲೇಖಿಸಿ, ಖಮೇನಿ ಅವರ ಆರೋಗ್ಯದ ಬಗ್ಗೆ ಇರಾನ್ ನಾಯಕತ್ವದಲ್ಲಿ ಆತಂಕ ಮೂಡಿದೆ ಎಂದು ವರದಿ ಮಾಡಿದ್ದವು. ಆದರೆ, ಖಮೇನಿ ಅವರ ಆರೋಗ್ಯದ ಕುರಿತು ಈವರೆಗೆ ಯಾವುದೇ ಸ್ವತಂತ್ರ ದೃಢೀಕರಣ ದೊರೆತಿಲ್ಲ.
ವರದಿಗಳಿಗೆ ತಿರುಗೇಟು ನೀಡುವ ಪ್ರಯತ್ನವೇ?
ಆರೋಗ್ಯದ ಕುರಿತ ವರದಿಗಳ ಬೆನ್ನಲ್ಲೇ ಪೆಜೆಶ್ಕಿಯಾನ್ ಅವರೊಂದಿಗಿನ ಭೇಟಿ ಹಾಗೂ ಖಮೇನಿ ಅವರ ಆರೋಗ್ಯವಾಗಿರುವಂತೆ ತೋರಿಸುವ ವಿಡಿಯೊ ಬಹಿರಂಗವಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಈ ಬೆಳವಣಿಗೆಗಳು ಮೊಜ್ತಬಾ ಖಮೇನಿ ಅವರ ಆರೋಗ್ಯದ ಕುರಿತು ಹರಡುತ್ತಿರುವ ವರದಿಗಳಿಗೆ ತಿರುಗೇಟು ನೀಡುವ ಪ್ರಯತ್ನವಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಯಾವುದೇ ಅಧಿಕಾರಿಗಳು ದೃಢಪಡಿಸಿಲ್ಲ.
ಅಧ್ಯಕ್ಷರಾಗಿ ಮೂರನೇ ವರ್ಷಕ್ಕೆ ಕಾಲಿಟ್ಟ ಪೆಜೆಶ್ಕಿಯಾನ್
ಮೊಜ್ತಬಾ ಖಮೇನಿ ಅವರೊಂದಿಗಿನ ಭೇಟಿ, ಪೆಜೆಶ್ಕಿಯಾನ್ ಅವರು ಅಧ್ಯಕ್ಷರಾಗಿ ಮೂರನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಡೆದಿದೆ.
2024ರ ಜುಲೈ 5ರಂದು ಪೆಜೆಶ್ಕಿಯಾನ್ ಇರಾನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಜುಲೈ 28ರಂದು ಅಂದಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದರು. ಜುಲೈ 30ರಂದು ಅವರು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
2024ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಅಂದಿನ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತಪಟ್ಟ ಬಳಿಕ ನಡೆದ ಚುನಾವಣೆಯಲ್ಲಿ ಪೆಜೆಶ್ಕಿಯಾನ್ ಗೆಲುವು ಸಾಧಿಸಿದ್ದರು.
ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮೊಜ್ತಬಾ ಖಮೇನಿ
ಅಯತೊಲ್ಲಾ ಅಲಿ ಖಮೇನಿ ಅವರು ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ಸೇನಾ ದಾಳಿಯಲ್ಲಿ ಮೃತಪಟ್ಟ ಬಳಿಕ ಮೊಜ್ತಬಾ ಖಮೇನಿ ಸರ್ವೋಚ್ಚ ನಾಯಕನ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
ಆದರೆ, ಅಧಿಕಾರ ವಹಿಸಿಕೊಂಡ ಬಳಿಕ ಅವರು ಬಹುತೇಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಬದಲು ಲಿಖಿತ ಹೇಳಿಕೆಗಳ ಮೂಲಕವೇ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದಾರೆ.
ಅವರ ನಿರಂತರ ಗೈರುಹಾಜರಿ ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಅವರ ಆರೋಗ್ಯದ ಕುರಿತು ಊಹಾಪೋಹಗಳಿಗೆ ಮತ್ತಷ್ಟು ಕಾರಣವಾಗಿದೆ.
ಇದೀಗ ಪೆಜೆಶ್ಕಿಯಾನ್ ಅವರೊಂದಿಗಿನ ಭೇಟಿ, ಇರಾನ್ ಸೇನಾ ಒತ್ತಡ, ಆರ್ಥಿಕ ಸವಾಲುಗಳು ಹಾಗೂ ಮುಂದುವರಿದ ಯುದ್ಧದ ಅನಿಶ್ಚಿತತೆಯ ನಡುವಿನ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




