ಭಾರತ-ರಷ್ಯಾ ನಡುವೆ ರೈಲು? ಪುಟಿನ್ ಸರ್ಕಾರದಿಂದ ಮಾಸ್ಟರ್ ಪ್ಲಾನ್!
10,000 ಕಿ.ಮೀ ಕಡಲ ಮಾರ್ಗಕ್ಕೆ ಬ್ರೇಕ್; ಭಾರತ ಹಾಗೂ ರಷ್ಯಾ ನಡುವೆ ರೈಲು ಮಾರ್ಗ? ಪುಟಿನ್ ಸರ್ಕಾರದ ಬಿಗ್ ಪ್ಲಾನ್!

ಮಾಸ್ಕೊ (ರಷ್ಯಾ): ಭಾರತಕ್ಕೂ ರಷ್ಯಾಗೂ ಎತ್ತಣಿಂದೆತ್ತ ಸಂಬಂಧ? ಇಬ್ಬರೂ ಆತ್ಮೀಯ ಸ್ನೇಹಿತರೆ ಆದರೂ ಇಬ್ಬರ ನಡುವೆ ಸುಮಾರು 4,980 ಕಿ.ಮೀ. ದೂರವಿದೆ! ಇದನ್ನು ಕ್ರಮಿಸಲು ಸುಮಾರು 6 ರಿಂದ 7 ಗಂಟೆಗಳ ವಿಮಾನಯಾನ ಬೇಕು; ಆದ್ರೆ, ಐದರಲ್ಲಿ ವಸ್ತುಗಳ ಆಮದು-ರಫ್ತು ಮಾಡುತ್ತೇವೆ ಅಂದ್ರೆ ಕಷ್ಟ; ಹಾಗಾಗಿಯೇ, ಸರಿಸುಮಾರು 5,600 ರಿಂದ 5,647 ನಾಟಿಕಲ್ ಮೈಲುಗಳು ಅಂದ್ರೆ 10,300 ರಿಂದ 10,500 ಕಿಮೀ ದೂರವನ್ನು 24 ದಿನಗಳಲ್ಲಿ ಕ್ರಮಿಸಿ ಎರಡು ರಾಷ್ಟ್ರಗಳ ನಡುವೆ ವ್ಯವಹಾರಗಳು ನಡೆಯುತಿತ್ತು. ಆದ್ರೆ, ಈ 24 ದಿನಗಳ ದೂರವನ್ನು ಕಡಿಮೆ ಮಾಡಲು ಪುಟಿನ್ ಸರ್ಕಾರದಿಂದ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಭಾರತ - ರಷ್ಯಾ ನಡುವೆ ರೈಲು?
ರಷ್ಯಾ ಸರ್ಕಾರವು ಭಾರತದೊಂದಿಗೆ ನೇರ ರೈಲು ಸಂಪರ್ಕವನ್ನು (Direct Rail Link) ಕಲ್ಪಿಸುವ ಮಹತ್ವಾಕಾಂಕ್ಷೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲಿನ್ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಈ ಆಲೋಚನೆಯನ್ನು ಹಂಚಿಕೊಂಡಿದ್ದಾರೆ. ಅದರಂತೆ, ಸಮುದ್ರ ಮಾರ್ಗಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಸುರಕ್ಷಿತವಾದ ಭೂಮಾರ್ಗದ ಮೂಲಕ ಭಾರತದೊಂದಿಗೆ ವಾಣಿಜ್ಯ ಮತ್ತು ವ್ಯಾಪಾರ ಸಂಬಂಧವನ್ನು ಹೆಚ್ಚಿಸುವುದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದ ಈ ಮಾಸ್ಟರ್ ಪ್ಲಾನ್‌ನ ಮುಖ್ಯ ಉದ್ದೇಶವಾಗಿದೆ.
ರೈಲು ಮಾರ್ಗ ಹಾದುಹೋಗುವ ಸಂಭಾವ್ಯ ದೇಶಗಳು:
ರಷ್ಯಾ ಪ್ರಸ್ತಾಪಿಸಿರುವ ಈ ಬೃಹತ್ ರೈಲು ಜಾಲವು ವಿವಿಧ ಏಷ್ಯನ್ ದೇಶಗಳ ಮೂಲಕ ಸಾಗಲಿದೆ:
ರಷ್ಯಾದಿಂದ ಹೊರಡುವ ರೈಲು ಕಝಾಕಿಸ್ತಾನ್ ಅಥವಾ ಉಜ್ಬೇಕಿಸ್ತಾನ್, ತುರ್ಕಮೆನಿಸ್ತಾನ್, ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳನ್ನು ದಾಟಲಿದೆ. ಅಂತಿಮವಾಗಿ ಭಾರತದ ಗಡಿಯನ್ನು ಪ್ರವೇಶಿಸಿ ಹಿಂದೂ ಮಹಾಸಾಗರದ ಬಂದರುಗಳಿಗೆ ಸಂಪರ್ಕ ಕಲ್ಪಿಸಲಿದೆ.
ಈ ಪ್ಲಾನ್‌ನ ಮುಖ್ಯ ಉದ್ದೇಶಗಳೇನು?
ಸಮುದ್ರ ಮಾರ್ಗದ ಅಪಾಯಗಳಿಂದ ಪಾರಾಗುವುದು: ಸದ್ಯ ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರವು ಜಲಮಾರ್ಗದ ಮೂಲಕ ನಡೆಯುತ್ತದೆ. ಆದರೆ ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಉದ್ವಿಗ್ನತೆಯಿಂದಾಗಿ ಹೊರ್ಮುಜ್ ಜಲಸಂಧಿ ಮತ್ತು ಬಾಸ್ಫರಸ್ ಜಲಸಂಧಿಯಂತಹ ಪ್ರಮುಖ ಜಾಗತಿಕ ಹಡಗು ಮಾರ್ಗಗಳಲ್ಲಿ ಭದ್ರತಾ ಅಪಾಯಗಳು ಹೆಚ್ಚಾಗಿವೆ. ಇದಕ್ಕೆ ಪರ್ಯಾಯವಾಗಿ ಸುರಕ್ಷಿತ ಭೂಮಾರ್ಗವನ್ನು ಸೃಷ್ಟಿಸುವುದು ರಷ್ಯಾದ ಗುರಿಯಾಗಿದೆ.
ವ್ಯಾಪಾರ ವೃದ್ಧಿ ಮತ್ತು ಇಂಧನ ಭದ್ರತೆ: ಭಾರತ ಮತ್ತು ರಷ್ಯಾ ದೇಶಗಳು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $100 ಬಿಲಿಯನ್ (ಸುಮಾರು ₹8.4 ಲಕ್ಷ ಕೋಟಿಗೂ ಅಧಿಕ) ಮುಟ್ಟಿಸುವ ಗುರಿ ಹೊಂದಿವೆ. ರಷ್ಯಾದ ಕಚ್ಚಾ ತೈಲ, ಕಲ್ಲಿದ್ದಲು ಮತ್ತು ರಸಗೊಬ್ಬರಗಳನ್ನು ಭಾರತಕ್ಕೆ ಯಾವುದೇ ಅಡೆತಡೆಯಿಲ್ಲದೆ ವೇಗವಾಗಿ ತಲುಪಿಸಲು ಈ ರೈಲು ಮಾರ್ಗ ನೆರವಾಗಲಿದೆ.
ವೆಚ್ಚ ಮತ್ತು ಸಮಯದ ಉಳಿತಾಯ: ಈಗಾಗಲೇ ಜಾರಿಯಲ್ಲಿರುವ ಇಂಟರ್ನ್ಯಾಷನಲ್ ನಾರ್ತ್-ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ (INSTC) ಮಲ್ಟಿಮೋಡಲ್ ಜಾಲವನ್ನು ವಿಸ್ತರಿಸುವ ಮೂಲಕ, ಸಾಂಪ್ರದಾಯಿಕ ಸುಯೆಜ್ ಕಾಲುವೆ ಮಾರ್ಗಕ್ಕಿಂತ ಶೇ. 30 ರಷ್ಟು ಕಡಿಮೆ ವೆಚ್ಚದಲ್ಲಿ ಮತ್ತು ಶೇ. 40 ರಷ್ಟು ವೇಗವಾಗಿ ಸರಕು ಸಾಗಣೆ ಮಾಡಲು ಸಾಧ್ಯವಾಗುತ್ತದೆ.
ಮುಂದುವರೆದು, ಇದು ಸದ್ಯಕ್ಕೆ ಕೇವಲ ಚರ್ಚೆ ಮತ್ತು ಪರಿಶೀಲನೆಯ ಹಂತದಲ್ಲಿದೆ. ಯಾವುದೇ ಅಧಿಕೃತ ನಿರ್ಮಾಣದ ದಿನಾಂಕವಾಗಲಿ ಅಥವಾ ಪ್ರಯಾಣಿಕರ ರೈಲು ಸೇವೆಯ ವಿವರಗಳಾಗಲಿ ಇನ್ನೂ ಅಂತಿಮಗೊಂಡಿಲ್ಲ. ಅದರಲ್ಲೂ, ಈ ರೈಲು ಮಾರ್ಗವು ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದ ಮೂಲಕ ಹಾದುಹೋಗಬೇಕಿರುವುದರಿಂದ, ಈ ವಲಯದಲ್ಲಿನ ರಾಜತಾಂತ್ರಿಕ ಬಿಕ್ಕಟ್ಟುಗಳು ಮತ್ತು ಭಾರತ-ಪಾಕ್ ನಡುವಿನ ಉದ್ವಿಗ್ನ ಸಂಬಂಧಗಳು ಈ ಯೋಜನೆಗೆ ದೊಡ್ಡ ಸವಾಲಾಗಿವೆ. ಜೊತೆಗೆ ಬೇರೆ ಬೇರೆ ದೇಶಗಳಲ್ಲಿ ಇರುವ ರೈಲ್ವೆ ಟ್ರ್ಯಾಕ್‌ಗಳ ಗಾತ್ರದ ವ್ಯತ್ಯಾಸವೂ ತಾಂತ್ರಿಕ ತೊಂದರೆಯನ್ನು ತಂದೊಡ್ಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




