ವಿದೇಶ

ಅಮೆರಿಕದ ಸುಂಕ ಬೆದರಿಕೆಗೆ ಭಾರತ ಡೋಂಟ್ ಕೇರ್; ರಷ್ಯಾದಿಂದ ದಾಖಲೆ ಮಟ್ಟದಲ್ಲಿ ತೈಲ ಆಮದು

ಅಮೆರಿಕದ ಸುಂಕದ ಬೆದರಿಕೆಯ ನಡುವೆಯೂ ಭಾರತ ರಷ್ಯಾದಿಂದ ದಾಖಲೆ ಮಟ್ಟದಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆ. ಅದರಲ್ಲೂ, ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಭಾರತ ಜುಲೈನಲ್ಲಿ ದಾಖಲೆ ಮಟ್ಟದಲ್ಲಿ ಕಚ್ಚಾ ತೈಲವನ್ನ ಆಮದು ಮಾಡಿಕೊಂಡಿದೆ. ಹಾಗಾದ್ರೆ, ಭಾರತ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?

ಅಮೆರಿಕದ ಸುಂಕ ಬೆದರಿಕೆಗೆ ಭಾರತ ಡೋಂಟ್ ಕೇರ್; ರಷ್ಯಾದಿಂದ ದಾಖಲೆ ಮಟ್ಟದಲ್ಲಿ ತೈಲ ಆಮದು
ರಷ್ಯಾದಿಂದ ದಾಖಲೆ ಮಟ್ಟದಲ್ಲಿ ಭಾರತ ತೈಲ ಆಮದು — Online Desk
Published On :

ನವದೆಹಲಿ: ಅಮೆರಿಕ ಮತ್ತು ಯುರೋಪ್ ದೇಶಗಳಿಂದ ನಿರಂತರ ಒತ್ತಡ ಮತ್ತು ಸುಂಕದ ಬೆದರಿಕೆಗಳ ನಡುವೆಯೂ ಭಾರತ ತನ್ನ ಇಂಧನ ಅಗತ್ಯಗಳಿಗೆ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೌದು, ದೇಶದ ಇಂಧನ ಭದ್ರತೆಯನ್ನೇ ಮೊದಲ ಆದ್ಯತೆಯಾಗಿ ಇಟ್ಟುಕೊಂಡಿರುವ ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸಿದೆ. ಅದರಲ್ಲೂ, ಇದು ಕಳೆದ ಜುಲೈ ತಿಂಗಳಲ್ಲಿ ರಷ್ಯಾದಿಂದ ಭಾರತಕ್ಕೆ ಆಗಿರುವ ಕಚ್ಚಾ ತೈಲ ಆಮದು ದಾಖಲೆಯ ಮಟ್ಟ ತಲುಪಿದೆ.

ಜುಲೈನಲ್ಲಿ ದಾಖಲೆಯ ಆಮದು!

ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ರಷ್ಯಾದಿಂದ ತೈಲ ಆಮದನ್ನು ಭಾರತ ಕಡಿಮೆ ಮಾಡಿಕೊಂಡಿತ್ತು. ಆದರೆ, ಕಳೆದ ನಾಲ್ಕು ವರ್ಷಗಲ್ಲಿ ಇದೆ ಮೊದಲ ಭಾರಿಗೆ ಜುಲೈ ತಿಂಗಳಲ್ಲಿ ಭಾರತವು ರಷ್ಯಾದಿಂದ ದಿನಂಪ್ರತಿ ದಾಖಲೆಯ 2.8 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಈ ಮೂಲಕ ಭಾರತದ ಒಟ್ಟು ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇಕಡಾ 55 ಕ್ಕಿಂತ ಅಧಿಕ (55.3%) ಮಟ್ಟಕ್ಕೆ ತಲುಪಿದೆ.

ಇನ್ನು, ಭಾರತದ ಈ ನಿರ್ಧಾರಕ್ಕೆ ಮುಖ್ಯ ಕಾರಣ ಏನು ಎಂದು ನೋಡುವುದದಾದ್ರೆ, ಅಮೇರಿಕ - ಇರಾನ್ ಯುದ್ಧ! ಹೌದು, ಪಶ್ಚಿಮ ಏಷ್ಯಾದಲ್ಲಿ ಮುಖ್ಯವಾಗಿ ಹಾರ್ಮುಜ್ ಜಲಸಂಧಿ ಭಾಗದಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಮತ್ತು ಸರಬರಾಜು ವ್ಯತ್ಯಯದಿಂದಾಗಿ ಭಾರತೀಯ ತೈಲ ಶುದ್ಧೀಕರಣ ಸಂಸ್ಥೆಗಳು ರಷ್ಯಾದ ತೈಲವನ್ನು ಸುರಕ್ಷಿತ ಪರ್ಯಾಯವಾಗಿ ಅವಲಂಬಿಸಿವೆ.

ಅಮೆರಿಕದ 100% ಸುಂಕದ ಬೆದರಿಕೆಗೆ ಭಾರತ ಡೋಂಟ್ ಕೇರ್

ಕೆಲವು ದಿನಗಳ ಹಿಂದೆ ರಷ್ಯಾದಿಂದ ಅತಿ ಹೆಚ್ಚು ಇಂಧನ ಖರೀದಿಸುವ ಭಾರತ ಮತ್ತು ಚೀನಾ ಸೇರಿದಂತೆ ಪ್ರಮುಖ 5 ದೇಶಗಳ ಮೇಲೆ ಶೇಕಡಾ 100 ರಷ್ಟು ಹೆಚ್ಚುವರಿ ವ್ಯಾಪಾರ ಸುಂಕ ವಿಧಿಸಲು ಅಮೆರಿಕದ ಸೆನೆಟ್‌ನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿತ್ತು. ಆದ್ರೆ, ಅಮೆರಿಕದ ಈ ಏಕಪಕ್ಷೀಯ ನಿರ್ಧಾರಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯಾವುದೇ ಬೆದರಿಕೆಗಳಿಗೆ ಮಣಿಯದೆ ತನ್ನ ಇಂಧನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ಮುಂದಾಗಿದೆ.

ಭಾರತದ ಲೆಕ್ಕಾಚಾರವೇನು?

ಭಾರತಕ್ಕೆ ಇಂಧನ ಸ್ವಾತಂತ್ರ್ಯ ಬಹಳ ಮುಖ್ಯ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾದಾಗಲೂ ಸ್ಥಿರ ಬೆಲೆಗೆ ತೈಲ ಪೂರೈಕೆಯಾಗಬೇಕು. ಅದರಂತೆ, ರಷ್ಯಾ ರಿಯಾಯಿತಿ ದರದಲ್ಲಿ ತೈಲ ಪೂರೈಕೆ ಮಾಡುವ ಮೂಲಕ ಈ ಅವಕಾಶವನ್ನು ನೀಡುತ್ತಿದೆ. ಇದರೊಂದಿಗೆ ಭಾರತ ಯಾವುದೇ ಒಂದು ದೇಶದ ಮೇಲೆ ಅವಲಂಬಿತವಾಗದೆ ಬಹು ಮೂಲಗಳಿಂದ ತೈಲ ಖರೀದಿಸುವ ನೀತಿಯನ್ನು ಅನುಸರಿಸುತ್ತಿದೆ. ಜೊತೆಗೆ ಅಮೆರಿಕದ ಡಾಲರ್ ಮೇಲಿನ ಅವಲಂಬನೆ ತಗ್ಗಿಸಲು ಭಾರತವು ರಷ್ಯಾದೊಂದಿಗಿನ ತೈಲ ವ್ಯಾಪಾರದಲ್ಲಿ ಭಾರತೀಯ ರೂಪಾಯಿ (INR) ಮೂಲಕವೇ ಶತಕೋಟಿ ಡಾಲರ್ ಮೌಲ್ಯದ ವಹಿವಾಟುಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.