'ಮುಸ್ಲಿಮರು ಕಾಫೀರರೊಂದಿಗೆ ಸ್ನೇಹ ಬೆಳೆಸಬಾರದು': ಭಾರತ-ಅಫ್ಘಾನ್ ಗೆಳತನಕ್ಕೆ Pak ಅಸೂಯೆ; Quran ಉಲ್ಲೇಖಿಸಿ ವಿಷ ಕಾರಿದ ಸೇನಾ ವಕ್ತಾರ..!
ಇತ್ತೀಚೆಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಮತ್ತು ಭಾರತದ ನಡುವೆ ಹಲವು ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ನಡೆದಿವೆ. ಈ ವೇಳೆ ಅಫ್ಘಾನ್ ಸಚಿವರೊಬ್ಬರು "ಭಾರತ ಮತ್ತು ಅಫ್ಘಾನಿಸ್ತಾನದವರ ಡಿಎನ್‌ಎ (DNA) ಒಂದೇ" ಎಂದು ಹೇಳಿಕೆ ನೀಡಿದ್ದರು.

ಇಸ್ಲಾಮಾಬಾದ್: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ದಿನೇ ದಿನೇ ಗಟ್ಟಿಯಾಗುತ್ತಿರುವ ರಾಜತಾಂತ್ರಿಕ ಸಂಬಂಧವನ್ನು ಸಹಿಸದ ಪಾಕಿಸ್ತಾನ ಸೇನೆ, ಈಗ ಧಾರ್ಮಿಕ ದ್ವೇಷದ ಹೇಳಿಕೆ ನೀಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.
ಪಾಕಿಸ್ತಾನ ಸೇನೆಯ ಅಧಿಕೃತ ವಕ್ತಾರ (DG ISPR) ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ, "ಮುಸ್ಲಿಮರು 'ಕಾಫಿರರೊಂದಿಗೆ' (ಅಲ್ಲಾಹನನ್ನು ನಂಬದವರು) ಸ್ನೇಹ ಬೆಳೆಸಬಾರದು" ಎಂದು ಕುರಾನ್ ವಾಕ್ಯಗಳನ್ನು ಉಲ್ಲೇಖಿಸಿ ಭಾರತದ ವಿರುದ್ಧ ವಿಷ ಕಾರಿದ್ದಾರೆ.
ಇತ್ತೀಚೆಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಮತ್ತು ಭಾರತದ ನಡುವೆ ಹಲವು ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ನಡೆದಿವೆ. ಈ ವೇಳೆ ಅಫ್ಘಾನ್ ಸಚಿವರೊಬ್ಬರು "ಭಾರತ ಮತ್ತು ಅಫ್ಘಾನಿಸ್ತಾನದವರ ಡಿಎನ್‌ಎ (DNA) ಒಂದೇ" ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ತೀವ್ರ ಆಕ್ಷೇಪ ಎತ್ತಿದ ಪಾಕ್ ಜನರಲ್, "ಅಫ್ಘನ್ನರು ತಮ್ಮ ಡಿಎನ್‌ಎ ಭಾರತೀಯರಂತೆಯೇ ಇದೆ ಎನ್ನುತ್ತಾರೆ. ಹಾಗಿದ್ದರೆ ಅಫ್ಘನ್ನರು ಮುಸ್ಲಿಮರಾಗಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸುವ ಮೂಲಕ ಧಾರ್ಮಿಕ ಕಿಡಿ ಹೊತ್ತಿಸಿದ್ದಾರೆ.
ಅಹ್ಮದ್ ಷರೀಫ್ ಚೌಧರಿ ಹೇಳಿದ್ದೇನು?
"ನಾನು ಅಫ್ಘಾನ್ ಜನರ ಬಗ್ಗೆ ಮಾತನಾಡುತ್ತಿಲ್ಲ. ತಾಲಿಬಾನ್ ಆಡಳಿತದ ಬಗ್ಗೆ ಮಾತನಾಡುತ್ತಿದ್ದೇನೆ. ಸಾಮಾನ್ಯ ಅಫ್ಘಾನ್ ಜನರ ಡಿಎನ್‌ಎ ಮತ್ತು ತಾಲಿಬಾನ್ ಆಡಳಿತದ ಡಿಎನ್‌ಎ ಒಂದೇ ಅಲ್ಲ. ಸಾಮಾನ್ಯ ಜನರು ತಾಲಿಬಾನ್ ದಬ್ಬಾಳಿಕೆಯಿಂದ ನರಳುತ್ತಿದ್ದಾರೆ.
ತಾಲಿಬಾನ್ ಆಡಳಿತದ ನಡೆ-ನುಡಿಯಲ್ಲಿ ಇಸ್ಲಾಮಿಕ್ ಮೌಲ್ಯಗಳೇನಿವೆ? ಮಹಿಳೆಯರ ಮೇಲಿನ ವರ್ತನೆ, ಮಕ್ಕಳ ಮೇಲಿನ ದೌರ್ಜನ್ಯ, ಫತ್ವಾಗಳ ಮೂಲಕ ಮುಸ್ಲಿಮರ ರಕ್ತ ಸುರಿಸಲು ಅನುಮತಿ ನೀಡುವುದು – ಇವುಗಳಿಗೆ ಇಸ್ಲಾಂನೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಟೀಕಿಸಿದರು.
ಇದೇ ವೇಳೆ ಕುರಾನ್‌ನ ಉಲ್ಲೇಖ ನೀಡಿ, "ಅಲ್ಲಾಹನು ಸ್ಪಷ್ಟವಾಗಿ ಹೇಳಿದ್ದಾನೆ – ಕಾಫಿರರನ್ನು ನಿಮ್ಮ ಸ್ನೇಹಿತರಾಗಿ ಅಥವಾ ರಕ್ಷಕರಾಗಿ ಸ್ವೀಕರಿಸಬೇಡಿ. ಹಾಗೆ ಮಾಡಿದರೆ ನೀವು ಮುಸ್ಲಿಮರಲ್ಲ. ಆದ್ದರಿಂದ ಇದು ಕೇವಲ ಡಿಎನ್‌ಎ ವಿಚಾರವಲ್ಲ, ಆ ಡಿಎನ್‌ಎ ಯಾವ ತತ್ವವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದರು.
ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧವೂ ವಾಗ್ದಾಳಿ
ಬಳಿಕ ಭಾರತದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಾಗೂ ತಾಲಿಬಾನ್ ಆಡಳಿತದ ನಡುವಿನ ಸಂಬಂಧ ಯಜಮಾನ-ಸೇವಕರ ಸಂಬಂಧದಂತಿದೆ. ಭಾರತದಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ತಾಲಿಬಾನ್ ಅದೇ ಕಾರ್ಯಸೂಚಿಗೆ ಸೇವೆ ಸಲ್ಲಿಸುತ್ತಿದೆ. ಇದು ಯಾವ ರೀತಿಯ ಇಸ್ಲಾಂ?" ಎಂದು ಆರೋಪಿಸಿದರು.
ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಉಗ್ರ ದಾಳಿಗಳು, ಚೀನಾ ಬೆಂಬಲಿತ ಸಿಪಿಇಸಿ (CPEC) ಯೋಜನೆಗಳ ಭದ್ರತೆ ಸೇರಿದಂತೆ ಆಂತರಿಕ ಭದ್ರತಾ ಸವಾಲುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನದ ಭಾಗವಾಗಿ ಈ ಹೇಳಿಕೆಯನ್ನು ನೋಡಲಾಗುತ್ತಿದೆ.
ಮೂಲಗಳ ಪ್ರಕಾರ, ಭಾರತದ ವಿರುದ್ಧ ಪಾಕಿಸ್ತಾನ ಮಾಡುತ್ತಿರುವ ಉಗ್ರಗಾಮಿ ಆರೋಪಗಳಿಗೆ ಇದುವರೆಗೆ ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ. ಅಲ್ಲದೆ, "ಫಿತ್ನಾ ಅಲ್-ಹಿಂದೂಸ್ತಾನ್" ಎಂಬ ಪದಪ್ರಯೋಗವನ್ನು ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳಿಗೆ ಭಾರತ ಮತ್ತು ಅಫ್ಘಾನಿಸ್ತಾನವನ್ನು ಹೊಣೆಗಾರರನ್ನಾಗಿ ತೋರಿಸುವ ರಾಜಕೀಯ ಹಾಗೂ ಕಾನೂನುಬದ್ಧ ನಿರೂಪಣೆಯ ಭಾಗವಾಗಿ ಬಳಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಈ ನಡುವೆ ಪಾಕ್ ಸೇನೆಯ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಮುಸ್ಲಿಮರು ಮುಸ್ಲಿಮೇತರರೊಂದಿಗೆ ಸ್ನೇಹ ಮಾಡಬಾರದು ಎನ್ನುವುದಾದರೆ, ಚೀನಾ ಮತ್ತು ಅಮೆರಿಕದಂತಹ ದೇಶಗಳ ಮುಂದೆ ಪಾಕಿಸ್ತಾನ ಯಾಕೆ ಕೈಚಾಚುತ್ತದೆ? ಚೀನಾದಿಂದ ಸಾಲ ಪಡೆಯುವಾಗ ಈ ಧರ್ಮ ನೆನಪಿಗೆ ಬರಲಿಲ್ವಾ?" ಎಂದು ನೆಟ್ಟಿಗರು ಪಾಕ್ ಸೇನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕ್ ಸೇನೆಯೇ ಅಧಿಕೃತವಾಗಿ ಇಂತಹ ಧಾರ್ಮಿಕ ದ್ವೇಷದ ಭಾಷಣ ಮಾಡಿರುವುದರಿಂದ, ಪಾಕಿಸ್ತಾನದಲ್ಲಿ ಉಳಿದುಕೊಂಡಿರುವ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯಗಳ ಸುರಕ್ಷತೆಗೆ ಮತ್ತಷ್ಟು ಧಕ್ಕೆ ಬರಲಿದೆ ಎಂಬ ಆತಂಕಗಳೂ ವ್ಯಕ್ತವಾಗುತ್ತಿವೆ.
ಪಾಕಿಸ್ತಾನ ಸದ್ಯ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ದೇಶದಲ್ಲಿ ಹಣದುಬ್ಬರ ಮತ್ತು ಉಗ್ರರ ದಾಳಿ ಹೆಚ್ಚಾಗಿದೆ. ಜನಸಾಮಾನ್ಯರು ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಈ ಎಲ್ಲಾ ಆಂತರಿಕ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪಾಕ್ ಸೇನೆ ಭಾರತದ ಹೆಸರನ್ನು ಬಳಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



