ವಿದೇಶ

ಅಮೆರಿಕಾ-ಇರಾನ್ ನಡುವೆ ಮುಂದುವರೆದ ಶಾಂತಿ ಪ್ರಯತ್ನ: ಪಾಕ್'ನಲ್ಲಿ 2ನೇ ಸುತ್ತಿನ ಸಂಧಾನ ಸಭೆ; ವ್ಯಾನ್ಸ್ ಬದಲು ವಿಟ್ಕಾಫ್, ಕುಶ್ನರ್‌ಗೆ ಜವಾಬ್ದಾರಿ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುತಿದ್ದಾರೆ.

ಅಮೆರಿಕಾ-ಇರಾನ್ ನಡುವೆ ಮುಂದುವರೆದ ಶಾಂತಿ ಪ್ರಯತ್ನ: ಪಾಕ್'ನಲ್ಲಿ 2ನೇ ಸುತ್ತಿನ ಸಂಧಾನ ಸಭೆ; ವ್ಯಾನ್ಸ್ ಬದಲು ವಿಟ್ಕಾಫ್, ಕುಶ್ನರ್‌ಗೆ ಜವಾಬ್ದಾರಿ..!
ಡೊನಾಲ್ಡ್ ಟ್ರಂಪ್-ಇರಾನ್ ಸರ್ವಾಧಿಕಾರಿ ಮೊಜ್ತಾಬಾ ಖಮೇನಿ — online desk
Published On :

ಹಾರ್ಮುಜ್ ಸಂಕಷ್ಟದ ನಡುವೆ ಶಾಂತಿ ಪ್ರಯತ್ನಗಳು ಮತ್ತಷ್ಟು ವೇಗ ಪಡೆದುಕೊಂಡಿದ್ದು, ಪಾಕಿಸ್ತಾನದಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಸಂಧಾನ ಸಭೆಗೆ ವೇದಿಕೆ ಸಜ್ಜಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚುತ್ತಿರುವ ಹಿನ್ನೆಲೆ, ಈ ಮಾತುಕತೆಗಳು ಮಹತ್ವ ಪಡೆದುಕೊಂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುತಿದ್ದಾರೆ.

ಮೊದಲು ಉಪಾಧ್ಯಕ್ಷ ಜೆಡಿ.ವ್ಯಾನ್ಸ್ ಭಾಗವಹಿಸುವ ನಿರೀಕ್ಷೆ ಇದ್ದರೂ, ಅಂತಿಮವಾಗಿ ವಿಟ್ಕಾಫ್ ಮತ್ತು ಕುಶ್ನರ್ ಅವರಿಗೆ ಮಾತುಕತೆಯ ಜವಾಬ್ದಾರಿ ನೀಡಲಾಗಿದೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಭಾಗವಹಿಸಲಿದ್ದು, ಕದನ ವಿರಾಮದ ರೂಪರೇಷೆ, ದಾಳಿಗಳ ತಾತ್ಕಾಲಿಕ ನಿಲುಗಡೆ, ಕೈದಿಗಳ ವಿನಿಮಯ, ಹಾಗೂ ಮಾನವೀಯ ನೆರವು ಸಾಗಾಣಿಕೆ ಕುರಿತಂತೆ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.

ಮೊದಲ ಸುತ್ತಿನ ಮಾತುಕತೆಗಳಲ್ಲಿ ಪರಸ್ಪರ ನಂಬಿಕೆ ಕೊರತೆ, ಯುದ್ಧಭೂಮಿಯಲ್ಲಿನ ಹಿಂಸಾಚಾರ ಮುಂದುವರಿದಿರುವುದು ಹಾಗೂ ಪ್ರಾದೇಶಿಕ ಮೈತ್ರಿಗಳ ಒತ್ತಡಗಳಿಂದ ನಿರೀಕ್ಷಿತ ಪ್ರಗತಿ ಕಂಡುಬಂದಿರಲಿಲ್ಲ. ಹೀಗಾಗಿ, ಈ ಎರಡನೇ ಸುತ್ತಿನ ಸಭೆ ಅತ್ಯಂತ ನಿರ್ಣಾಯಕ ಎಂದು ಪರಿಗಣಿಸಲಾಗುತ್ತಿದೆ.

ಇದೇ ವೇಳೆ, ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉಂಟಾದ ಸಂಕಷ್ಟ ಜಾಗತಿಕ ಇಂಧನ ಸರಬರಾಜಿನ ಮೇಲೆ ದೊಡ್ಡ ಪರಿಣಾಮ ಬೀರಿದೆ. ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಅಡಚಣೆಗೆ ಒಳಗಾಗಿರುವುದರಿಂದ ಹಲವು ದೇಶಗಳಲ್ಲಿ ಇಂಧನ ಬೆಲೆ ಏರಿಕೆಯ ಆತಂಕ ಮುಂದುವರಿದಿದೆ. ಜಾಗತಿಕ ಆರ್ಥಿಕತೆಯ ಮೇಲೂ ಇದರ ಪರಿಣಾಮ ಕಂಡುಬರುತ್ತಿದ್ದು, ವ್ಯಾಪಾರ ಚಟುವಟಿಕೆಗಳಲ್ಲಿ ಅನಿಶ್ಚಿತತೆ ಉಂಟಾಗಿದೆ.

ಇದರ ಪರಿಣಾಮವಾಗಿ ಬ್ರೆಂಟ್ ಕ್ರೂಡ್ ತೈಲದ ಬೆಲೆಗಳು ನಿರಂತರ ಏರಿಳಿತ ಕಾಣುತ್ತಿದ್ದು, ಯುದ್ಧ ಆರಂಭವಾದ ನಂತರದಿಂದಲೇ ಗರಿಷ್ಠ ಮಟ್ಟದಲ್ಲಿ ಉಳಿದಿವೆ. ಇಂಧನ ಬೆಲೆ ಏರಿಕೆಯಿಂದ ಅನೇಕ ದೇಶಗಳಲ್ಲಿ ದುಬಾರಿ ದರ (inflation) ಹೆಚ್ಚುವ ಭೀತಿ ಎದುರಾಗಿದೆ. ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಿಗೆ ಇದು ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಇದರ ನಡುವೆ ಅಮೆರಿಕ ಸರ್ಕಾರದ ಉನ್ನತ ಮಟ್ಟದ ನಾಯಕರು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಅಮೆರಿಕಾ ಉಪಾಧ್ಯಕ್ಷ ಜೆಡಿ.ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಹಾಗೂ ರಾಷ್ಟ್ರೀಯ ಭದ್ರತಾ ತಂಡದ ಇತರ ಸದಸ್ಯರು ಮಾತುಕತೆಗಳು ನಿರ್ಣಾಯಕ ಹಂತಕ್ಕೆ ತಲುಪಿದರೆ ತಕ್ಷಣವೇ ಪಾಕಿಸ್ತಾನಕ್ಕೆ ತೆರಳಲು ಸಿದ್ಧರಾಗಿದ್ದಾರೆ.

ಇದೇ ವೇಳೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಪಾಕಿಸ್ತಾನಕ್ಕೆ ಹೊರಟ ವೇದಿಕೆಯನ್ನು ತಿಳಿಸುವುದರ ಜೊತೆಗೆ ಒಮಾನ್ ಮತ್ತು ರಷ್ಯಾ ದೇಶಗಳ ಭೇಟಿ ನೀಡುತ್ತಿದ್ದಾರೆ. ಈ ಪ್ರವಾಸದ ಉದ್ದೇಶ ಪ್ರಾದೇಶಿಕ ಬೆಂಬಲವನ್ನು ಬಲಪಡಿಸುವುದು ಮತ್ತು ಮಾತುಕತೆಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವುದಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.