ಪಾಕಿಸ್ತಾನ ನೆಲದಲ್ಲೂ ಮುಖಭಂಗ: ಅಮೆರಿಕ ಪ್ರತಿನಿಧಿಗಳ ಭೇಟಿಯಾಗದೇ ಹೊರಟ Iran ನಿಯೋಗ!
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಶನಿವಾರ ಇಸ್ಲಾಮಾಬಾದ್‌ನಿಂದ ನಿರ್ಗಮಿಸಿತು.

ಇಸ್ಲಾಮಾಬಾದ್: ಮಧ್ಯ ಪ್ರಾಚ್ಯ ಸಂಘರ್ಷ ಮುಂದುವರೆದಿರುವಂತೆಯೇ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಆಯೋಜನೆಯಾಗಿದ್ದ ಇರಾನ್ ಅಮೆರಿಕ ಸಂಧಾನ ಸಭೆ ಮತ್ತೆ ಮುರಿದುಬಿದ್ದಿದ್ದು, ಸಂಧಾನಕ್ಕಾಗಿ ಆಗಮಿಸಿದ್ದ ಅಮೆರಿಕ ಸರ್ಕಾರದ ನಿಯೋಗವನ್ನು ಭೇಟಿಯಾಗದೇ ಇರಾನ್ ಸರ್ಕಾರದ ನಿಯೋಗ ನಿರ್ಗಮಿಸಿದೆ.
ಹೌದು.. ಪಾಕಿಸ್ತಾನದಲ್ಲಿ ಅಮೆರಿಕಕ್ಕೆ ಜಾಗತಿಕ ಮುಜುಗರವಾಗಿದ್ದು, ಅಮೆರಿಕದ ಪ್ರತಿನಿಧಿಯನ್ನು ಭೇಟಿಯಾಗದೆಯೇ ಇರಾನ್ ನಿಯೋಗವು ಪಾಕಿಸ್ತಾನದಿಂದ ನಿರ್ಗಮಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಶನಿವಾರ ಇಸ್ಲಾಮಾಬಾದ್‌ನಿಂದ ನಿರ್ಗಮಿಸಿತು.
ಹೀಗಾಗಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನಕ್ಕೆ ಎರಡೂ ದೇಶಗಳನ್ನು ಮಾತುಕತೆಗೆ ಒಪ್ಪಿಸಲು ಸಾಧ್ಯವಾಗಲಿಲ್ಲ. ಈ ಮಾತುಕತೆಗಾಗಿ ಇಸ್ಲಾಮಾಬಾದ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆ ಹೇರಲಾಗಿತ್ತು. ಅದಾಗ್ಯೂ ಸಂಧಾನ ಮಾತುಕತೆ ವಿಫಲವಾಗಿದ್ದು ಅತ್ತ ಅಮೆರಿಕ ಮತ್ತು ಇತ್ತ ಪಾಕಿಸ್ತಾನಕ್ಕೆ ತೀವ್ರ ಮುಜುಗರವಾಗುವಂತೆ ಮಾಡಿದೆ.
ನೇರ ಮಾತುಕತೆ ನಿರಾಕರಿಸಿದ್ದ ಇರಾನ್
ಇನ್ನು ಈ ಸಭೆಗೂ ಮೊದಲೇ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ನೇತೃತ್ವದ ಅಮೆರಿಕದ ತಂಡವು ಇಸ್ಲಾಮಾಬಾದ್ ತಲುಪುವ ಮೊದಲೇ ಇರಾನ್ ನಿಯೋಗವು ಅಲ್ಲಿಂದ ಹೊರಟು ಹೋಗಿದೆ.
ಇರಾನ್ ಮುನಿಸಿಗೆ ಕಾರಣ?
ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವು ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಆರೋಪಿಸಿದೆ. ವರದಿಗಳ ಪ್ರಕಾರ, ಇರಾನ್ ಕೆಳಹಂತದ ಪ್ರತಿನಿಧಿಗಳ ಬದಲಿಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಮಾತುಕತೆ ನಡೆಸಲು ಆಸಕ್ತಿ ಹೊಂದಿದೆ.
ಈಗಿನ ನಿಯೋಗವನ್ನು ಭೇಟಿಯಾಗುವುದು ತನಗೆ ಮಾಡಿದ "ಅಪಮಾನ" ಎಂದು ಅದು ಭಾವಿಸಿದೆ. ಇದೇ ಕಾರಣಕ್ಕೆ ಮಾತುಕತೆಗೆ ನಿಲ್ಲದೇ ಇರಾನ್ ನಿಯೋಗ ಹೊರಟು ಹೋಗಿದೆ ಎನ್ನಲಾಗಿದೆ.
ಅಂತೆಯೇ ಪಾಕಿಸ್ತಾನದಿಂದ ನಿರ್ಗಮಿಸಿದ ನಂತರ, ಇರಾನ್ ನಿಯೋಗವು ತನ್ನ ರಾಜತಾಂತ್ರಿಕ ಪ್ರವಾಸವನ್ನು ಮಸ್ಕತ್ ಮತ್ತು ಮಾಸ್ಕೋದಲ್ಲಿ ಮುಂದುವರಿಸಲಿದೆ.
ಪಾಕ್ ಪ್ರಧಾನಿ ಷರೀಫ್ ಇರಾನ್ ವಿದೇಶಾಂಗ ಸಚಿವ ಅರಾಘಿ ಭೇಟಿ
ಇದಕ್ಕೂ ಮೊದಲು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕದನ ವಿರಾಮದ ಕುರಿತು ಇರಾನ್‌ನ ಬೇಡಿಕೆಗಳನ್ನು ಮುಂದಿಟ್ಟ ಅರಗ್ಚಿ ಚರ್ಚೆ ಬಳಿಕ ಇರಾನ್ ಗೆ ಮರಳಿದರು ಎನ್ನಲಾಗಿದೆ.
ಈ ಬಗ್ಗೆ ಪಾಕಿಸ್ತಾನದ ಪ್ರಧಾನ ಮಂತ್ರಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, "ಪ್ರದೇಶದ ಪರಿಸ್ಥಿತಿ"ಯ ಮೇಲೆ ಕೇಂದ್ರೀಕರಿಸಿದ ಚರ್ಚೆಗಳಿಗಾಗಿ ಅರಗ್ಚಿ ಪ್ರಧಾನ ಮಂತ್ರಿಗಳ ಮನೆಗೆ ಬಂದರು. ಗಮನಾರ್ಹವಾಗಿ, ನಾಗರಿಕ ನಾಯಕತ್ವವು ಮಿಲಿಟರಿ ಸ್ಥಾಪನೆಯಿಂದ ನಿಕಟವಾಗಿ ಸುತ್ತುವರೆದಿತ್ತು, ಪಾಕಿಸ್ತಾನ ಸೇನಾ ಮುಖ್ಯಸ್ಥ ಮಾರ್ಷಲ್ ಅಸಿಮ್ ಮುನೀರ್ ಮತ್ತು ಉಪ ಪ್ರಧಾನ ಮಂತ್ರಿ ಇಶಾಕ್ ದಾರ್ ಸಹ ಮಾತುಕತೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




