ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ: ಹಡಗಿನ ಮೇಲೆ IRGC ಗುಂಡಿನ ದಾಳಿ; ಕದನ ವಿರಾಮ ಅನಿಶ್ಚಿತತೆ..?
ಇತ್ತೀಚೆಗೆ ಅಮೆರಿಕಾ ಇರಾನ್‌ಗೆ ಸಂಬಂಧಿಸಿದ ಹಡಗುಗಳನ್ನು ವಶಪಡಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗತ್ನೆ ಮತ್ತೆ ಹೆಚ್ಚಾಗಿದೆ. ಅಮೆರಿಕಾ ಕದನ ವಿರಾಮ ವಿಸ್ತರಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಇರಾನ್ ಹಾರ್ಮುಜ್ ಮೂಲಕ ಸಾಗುತ್ತಿದ್ದ ಕಂಟೇನರ್ ಹಡಗಿನ ಮೇಲೆ ದಾಳಿ ನಡೆಸಿದೆ.
ಇರಾನ್ ರಾಷ್ಟ್ರದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆ ಈ ದಾಳಿ ನಡೆಸಿದ್ದು, ಗನ್ ಹಡಗಿನ ಹತ್ತಿರ ಬಂದು ಗುಂಡು ಹಾರಿಸಿದ್ದು, ಹಡಗಿನ ನಿಯಂತ್ರಣ ಕೊಠಡಿಗೆ (ಕಂಟ್ರೋಲ್ ರೂಂ) ದೊಡ್ಡ ಮಟ್ಟದ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಮಾಹಿತಿ ಪ್ರಕಾರ, ಯಾವುದೇ ಪೂರ್ವ ಎಚ್ಚರಿಕೆ ನೀಡದೇ ಗನ್‌ಬೋಟ್ ದಾಳಿ ನಡೆಸಿದ್ದು, ದಾಳಿಯಲ್ಲಿ ಹಡಗಿನಲ್ಲಿದ್ದ ಯಾವುದೇ ಸಿಬ್ಬಂದಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಅಮೆರಿಕಾ ಇರಾನ್‌ಗೆ ಸಂಬಂಧಿಸಿದ ಹಡಗುಗಳನ್ನು ವಶಪಡಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಇದರ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಆರ್ಥಿಕ ಸ್ಥಿತಿಯನ್ನು ಗುರಿಯಾಗಿಸಿಕೊಂಡು ತೀವ್ರ ಟೀಕೆ ಮಾಡಿದ್ದಾರೆ.
ಇರಾನ್ “ಆರ್ಥಿಕವಾಗಿ ಕುಸಿಯುತ್ತಿದ್ದು, ಪರಿಣಾಮ ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಒತ್ತಡದಲ್ಲಿದೆ ಎಂದು ಹೇಳಿದ್ದಾರೆ.
ಅಮೆರಿಕಾ ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಮುಂದುವರಿಸಿರುವುದರಿಂದ, ಇರಾನ್‌ನ ವ್ಯಾಪಾರ ಹಾಗೂ ತೈಲ ರಫ್ತುಗಳಿಗೆ ಭಾರೀ ಹೊಡೆತ ಬಿದ್ದಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಯುದ್ಧ ವಿರಾಮವನ್ನು ವಿಸ್ತರಿಸಿರುವುದರಿಂದ ಶಾಂತಿ ಮಾತುಕತೆಗಳಿಗೆ ಅವಕಾಶ ಸಿಕ್ಕರೂ, ವಾಸ್ತವಿಕ ಸ್ಥಿತಿ ಮಾತ್ರ ಉದ್ವಿಗ್ನವಾಗಿಯೇ ಮುಂದುವರೆದಿದೆ.
ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಅಮೆರಿಕಾ-ಇರಾನ್ ನಡುವಿನ 2ನೇ ಸುತ್ತಿನ ಶಾಂತಿ ಮಾತುಕತೆಗಳು ಇನ್ನೂ ಆರಂಭವಾಗಿಲ್ಲ. ಅಮೆರಿಕಾ ಉಪಾಧ್ಯಕ್ಷ ಜೆಡಿ ವೆನ್ಸ್ ಅವರ ಭೇಟಿ ರದ್ದಾಗಿರುವುದು ಮತ್ತು ಇರಾನ್ ಇನ್ನೂ ಮಾತುಕತೆಗಳಲ್ಲಿ ಭಾಗವಹಿಸುವುದಾಗಿ ದೃಢಪಡಿಸದಿರುವುದು ಈ ಪ್ರಕ್ರಿಯೆಯನ್ನು ಇನ್ನಷ್ಟು ಅನಿಶ್ಚಿತಗೊಳಿಸಿದೆ.
ಕದನ ವಿರಾಮದ ಗಡುವು ದಾಟಿದರೂ ಹೊಸದಾಗಿ ಯಾವುದೇ ದೊಡ್ಡ ಸೈನಿಕ ಕ್ರಮಗಳು ನಡೆಯದಿರುವುದು ಸ್ವಲ್ಪ ಮಟ್ಟಿಗೆ ನಿರಾಳತೆಯನ್ನು ನೀಡಿದರೂ, ಹಾರ್ಮುಜ್ ಪ್ರದೇಶದಲ್ಲಿ ನಡೆದ ಈ ದಾಳಿ ಪರಿಸ್ಥಿತಿಯನ್ನು ಮತ್ತೆ ಉಲ್ಬಣಗೊಳಿಸಿದೆ. ಇರಾನ್ ಅಧಿಕೃತವಾಗಿ ಈ ದಾಳಿಯನ್ನು ಒಪ್ಪಿಕೊಳ್ಳದಿದ್ದರೂ, ಈ ರೀತಿಯ ಘಟನೆಗಳು ಸಂಘರ್ಷದ ತೀವ್ರತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



