ವಿದೇಶ

ಅಮೆರಿಕದ ಅತಿಯಾದ ಬೇಡಿಕೆ-ದ್ವಂದ್ವ ನೀತಿ ವಿರುದ್ಧ ಇರಾನ್ ಗರಂ: 2ನೇ ಹಂತದ ಶಾಂತಿ ಮಾತುಕತೆಗೆ ನಕಾರ!

ಅಮೆರಿಕಾ ಒಂದೆಡೆ ಶಾಂತಿ ಮಾತುಗಳನ್ನು ಮುಂದುವರಿಸುತ್ತಿದ್ದರೂ, ಮತ್ತೊಂದೆಡೆ ಸೇನಾ ಒತ್ತಡ, ನೌಕಾ ನಿರ್ಬಂಧ ಮತ್ತು ಆರ್ಥಿಕ ದಂಡನೆಗಳನ್ನು ಹೆಚ್ಚಿಸುತ್ತಿದೆ. ಈ ದ್ವಂದ್ವ ನಿಲುವುಗಳಿಂದ ವಿಶ್ವಾಸ ನಿರ್ಮಾಣ ಸಂಪೂರ್ಣವಾಗಿ ಕುಸಿಯುತ್ತಿದೆ.

ಅಮೆರಿಕದ ಅತಿಯಾದ ಬೇಡಿಕೆ-ದ್ವಂದ್ವ ನೀತಿ ವಿರುದ್ಧ ಇರಾನ್ ಗರಂ: 2ನೇ ಹಂತದ ಶಾಂತಿ ಮಾತುಕತೆಗೆ ನಕಾರ!
ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ
Published On :

ಅಮೆರಿಕಾ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದ್ದು, ಎರಡನೇ ಹಂತದ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಅಧಿಕೃತವಾಗಿ ನಿರಾಕರಿಸಿದೆ.

ಅಮೆರಿಕಾ “ಅತಿಯಾದ ಬೇಡಿಕೆಗಳು, ನಿರಂತರ ಆರೋಪ ಮತ್ತು ದಂದ್ವ ನಿಲುವು ತೋರಿಸುತ್ತಿದ್ದು, ಈ ಕಾರಣಗಳಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಅರ್ಥಪೂರ್ಣ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.

ಅಮೆರಿಕಾ ಒಂದೆಡೆ ಶಾಂತಿ ಮಾತುಗಳನ್ನು ಮುಂದುವರಿಸುತ್ತಿದ್ದರೂ, ಮತ್ತೊಂದೆಡೆ ಸೇನಾ ಒತ್ತಡ, ನೌಕಾ ನಿರ್ಬಂಧ ಮತ್ತು ಆರ್ಥಿಕ ದಂಡನೆಗಳನ್ನು ಹೆಚ್ಚಿಸುತ್ತಿದೆ. ಈ ದ್ವಂದ್ವ ನಿಲುವುಗಳಿಂದ ವಿಶ್ವಾಸ ನಿರ್ಮಾಣ ಸಂಪೂರ್ಣವಾಗಿ ಕುಸಿಯುತ್ತಿದೆ ಎಂದು ಆರೋಪಿಸಿದೆ. ಅಲ್ಲದೆ, ಶಾಂತಿ ಮಾತುಕತೆಗಳ ಮೂಲ ಉದ್ದೇಶವನ್ನು ಅಮೆರಿಕಾ ಹಾಳುಮಾಡುತ್ತಿದೆ ಎಂದೂ ಕಿಡಿಕಾರಿದೆ.

ಇದೇ ವೇಳೆ ಅಮೆರಿಕದ ನಿಲುವನ್ನು “ಒತ್ತಡದ ರಾಜತಾಂತ್ರಿಕತೆ” ಮತ್ತು “ರಾಜಕೀಯ ಬಲಪ್ರಯೋಗ” ಎಂದು ಇರಾನ್ ಕರೆದಿದೆ.

ಮಾತುಕತೆಗಳ ಬದಲು ಭಯ, ಆರ್ಥಿಕ ನಿರ್ಬಂಧ ಮತ್ತು ಸೈನಿಕ ತಾಕೀತುಗಳ ಮೂಲಕ ಒಪ್ಪಂದಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಮತೋಲನದ ಒಪ್ಪಂದ ಸಾಧ್ಯವಿಲ್ಲ ಎಂದು ಇರಾನ್ ಹೇಳಿದೆ. ಈ ನಿರ್ಧಾರವು ಮಧ್ಯಪ್ರಾಚ್ಯದ ಈಗಾಗಲೇ ಅಸ್ಥಿರವಾಗಿರುವ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಹಾರ್ಮುಜ್ ಜಲಸಂಧಿ ಸುತ್ತಲಿನ ಉದ್ವಿಗ್ನತೆ ಈಗಾಗಲೇ ಜಾಗತಿಕ ಗಮನ ಸೆಳೆದಿದ್ದು, ಅಮೆರಿಕಾ ಮತ್ತು ಇರಾನ್ ನೌಕಾಪಡೆಗಳ ನಡುವೆ ಹೆಚ್ಚುತ್ತಿರುವ ಸಂಘರ್ಷ ಪರಿಸ್ಥಿತಿ ಆತಂಕವನ್ನು ಹೆಚ್ಚಿಸಿದೆ. ಇತ್ತೀಚೆಗೆ ಅಮೆರಿಕಾ ಇರಾನ್ ಧ್ವಜದ ಹಡಗನ್ನು ವಶಪಡಿಸಿಕೊಂಡ ಘಟನೆ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಈ ಬೆಳವಣಿಗೆಗಳ ಮಧ್ಯೆ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗು ಸಂಚಾರಕ್ಕೂ ದೊಡ್ಡ ಅಡಚಣೆ ಉಂಟಾಗಿದೆ. ಅನೇಕ ಹಡಗುಗಳು ಮಾರ್ಗ ಬದಲಾಯಿಸುತ್ತಿವೆ. ಇದು ಜಗತ್ತಿನ ತೈಲ ಸರಬರಾಜಿಗೆ ನೇರ ಪರಿಣಾಮ ಬೀರುತ್ತಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯ ಆತಂಕ ಹೆಚ್ಚಾಗಿದೆ.

ಇರಾನ್ ನಾಯಕರು ತಮ್ಮ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಅಮೆರಿಕಾ ತನ್ನ ನೌಕಾ ಮತ್ತು ಆರ್ಥಿಕ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವವರೆಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಿಶೇಷವಾಗಿ ತೈಲ ರಫ್ತು ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂಬುದು ಇರಾನ್ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.

ಇದೇ ವೇಳೆ, ಶಾಂತಿ ಮಾತುಕತೆಗಳು ನಡೆಯಬೇಕಿದ್ದ ಸ್ಥಳಗಳ ಬಗ್ಗೆ ಕೂಡ ಅನಿಶ್ಚಿತತೆ ಇದೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಂಭಾವ್ಯ ಸಭೆ ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ರಾಜತಾಂತ್ರಿಕ ವಲಯಗಳು ಈ ಪರಿಸ್ಥಿತಿಯನ್ನು “ಗಂಭೀರ ವಿಶ್ವಾಸಾರ್ಹ ಬಿಕ್ಕಟ್ಟು” ಎಂದು ವರ್ಣಿಸುತ್ತಿವೆ.

ವಿಶ್ಲೇಷಕರ ಪ್ರಕಾರ, ಎರಡೂ ದೇಶಗಳ ನಡುವಿನ ಈ ಸ್ಥಿತಿ ಇದೇ ರೀತಿ ಮುಂದುವರೆದರೆ, ಅದು ಕೇವಲ ರಾಜತಾಂತ್ರಿಕ ಬಿಕ್ಕಟ್ಟಾಗಿಯೇ ಉಳಿಯದೆ, ಸಮುದ್ರ ಸುರಕ್ಷತೆ, ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಪ್ರಾದೇಶಿಕ ಶಾಂತಿಗೆ ದೊಡ್ಡ ಹೊಡೆತ ನೀಡಬಹುದು. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವುದರಿಂದ, ಇಲ್ಲಿ ಯಾವುದೇ ಅಸ್ಥಿರತೆ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಒಟ್ಟಾರೆ, ಅಮೆರಿಕಾ–ಇರಾನ್ ನಡುವಿನ ಮಾತುಕತೆ ಪ್ರಕ್ರಿಯೆ ಈಗ ಸಂಪೂರ್ಣ ಅಸ್ಪಷ್ಟತೆಯ ಹಂತಕ್ಕೆ ತಲುಪಿದ್ದು, ರಾಜತಾಂತ್ರಿಕ ಪರಿಹಾರದ ಅವಕಾಶಗಳು ದಿನದಿಂದ ದಿನಕ್ಕೆ ಕುಸಿಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.