ವಿದೇಶ

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಇದು ಅಪಾಯಕಾರಿ-ಬೇಜವಾಬ್ದಾರಿ ನಡೆ; ಅಮೆರಿಕಾ ವಿರುದ್ಧ ಚೀನಾ ಕಿಡಿ

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಅಮೆರಿಕವು ಹಾರ್ಮುಜ್ ನಲ್ಲಿ ಕೈಗೊಂಡಿರುವ ಜಲಸಂಧಿ ದಿಗ್ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಇದು ಅಪಾಯಕಾರಿ-ಬೇಜವಾಬ್ದಾರಿ ನಡೆ; ಅಮೆರಿಕಾ ವಿರುದ್ಧ ಚೀನಾ ಕಿಡಿ
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್- ಹಾರ್ಮೊಜ್ ಜಲಸಂಧಿ — online desk
Published On :

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆಯೇ ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಸೈನಿಕ ಕ್ರಮಗಳು ಪರಿಸ್ಥಿತಿಯನ್ನು ಹದಗೆಡಿಸುತ್ತವೆ ಎಂದು ಎಚ್ಚರಿಸಿ, ರಾಜತಾಂತ್ರಿಕ ಮಾತುಕತೆಗಳೇ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಒತ್ತಿ ಹೇಳಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಅಮೆರಿಕವು ಹಾರ್ಮುಜ್ ನಲ್ಲಿ ಕೈಗೊಂಡಿರುವ ಜಲಸಂಧಿ ದಿಗ್ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ತೈಲ ಸಾಗಣೆ ನಡೆಯುವ ಅತ್ಯಂತ ಪ್ರಮುಖ ಮಾರ್ಗಗಳಲ್ಲಿ ಒಂದಾದ ಈ ಸಮುದ್ರ ಮಾರ್ಗದಲ್ಲಿ ನಿರ್ಬಂಧ ಹೇರುವುದರಿಂದ ಕೇವಲ ಪ್ರಾದೇಶಿಕ ಉದ್ವಿಗ್ನತೆ ಮಾತ್ರವಲ್ಲ, ಜಾಗತಿಕ ಇಂಧನ ಮಾರುಕಟ್ಟೆಯೂ ಅಸ್ಥಿರಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಈ ಕ್ರಮವು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಸಾಗಣೆ ಭದ್ರತೆಯ ಮೇಲೆಯೂ ಪರಿಣಾಮ ಬೀರುತ್ತದೆ ಎಂಬುದಾಗಿ ಚೀನಾ ಆತಂಕ ವ್ಯಕ್ತಪಡಿಸಿದೆ.

ಇದೇ ವೇಳೆ ಪ್ರಸ್ತುತ ಜಾರಿಯಲ್ಲಿರುವ ಕದನ ವಿರಾಮವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದೂ ಹೇಳಿದೆ.

ಯಾವುದೇ ಏಕಪಕ್ಷೀಯ ಸೈನಿಕ ಕ್ರಮಗಳು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸುತ್ತವೆ ಎಂದು ಗುವೊ ಜಿಯಾಕುನ್ ಅವರು ಎಚ್ಚರಿಸಿದ್ದಾರೆ.

ಉಭಯ ರಾಷ್ಟ್ರಗಳು ತಕ್ಷಣ ಮಾತುಕತೆಗಳಿಗೆ ಮರಳಿ, ಮಾತುಕತೆ ಮೂಲಕವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಪೂರಕವಾಗಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು, ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸಲು ಬಹು-ಅಂಶದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

ಈ ಯೋಜನೆಯಲ್ಲಿ ಪ್ರಮುಖವಾಗಿ ರಾಷ್ಟ್ರಗಳ ಸ್ವಾಯತ್ತತೆ ಮತ್ತು ಪ್ರಾದೇಶಿಕ ಅಖಂಡತೆಯನ್ನು ಗೌರವಿಸುವುದು, ಅಂತರರಾಷ್ಟ್ರೀಯ ಕಾನೂನು ಪಾಲನೆ, ಸಮೂಹ ಭದ್ರತೆ ವ್ಯವಸ್ಥೆ ಬಲಪಡಿಸುವುದು ಮತ್ತು ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡುವುದು ಒಳಗೊಂಡಿದೆ.

ಯುದ್ಧ ಮತ್ತು ಸಂಘರ್ಷಗಳ ಮೂಲ ಕಾರಣಗಳನ್ನು ಪರಿಹರಿಸಲು ಅಭಿವೃದ್ಧಿಯೂ ಮುಖ್ಯ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಷಿ ಜಿನ್‌ಪಿಂಗ್, ಜಾಗತಿಕ ಮಟ್ಟದಲ್ಲಿ ಅಂತರರಾಷ್ಟ್ರೀಯ ನಿಯಮಗಳ ದುರ್ಬಲತೆ ಬಗ್ಗೆ ಕೂಡ ಎಚ್ಚರಿಕೆ ನೀಡಿದ್ದಾರೆ. ಏಕಪಕ್ಷೀಯ ಕ್ರಮಗಳು ಹೆಚ್ಚಾದರೆ ನಿಯಮ ದುರ್ಬಲಗೊಂಡು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಹಾನಿಕಾರಕವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಇರಾನ್ ಗೆ ಸೈನಿಕ ನೆರವು ನೀಡಿದೆ ಎಂಬ ಆರೋಪಗಳನ್ನೂ ಚೀನಾ ತಳ್ಳಿ ಹಾಕಿದ್ದು, ಇದು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.

ಯಾವುದೇ ಆರ್ಥಿಕ ನಿರ್ಬಂಧಗಳು ಅಥವಾ ವ್ಯಾಪಾರ ಸಂಬಂಧಿತ ಶಿಕ್ಷೆಗಳು ಹೇರಿದರೆ, ತನ್ನ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೂಡ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.