ತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡು AI ಚಿತ್ರ ಪೋಸ್ಟ್: ಭಾರೀ ಟೀಕೆ-ವಿರೋಧ ಬೆನ್ನಲ್ಲೇ ಫೋಟೋ ಡಿಲೀಟ್ ಮಾಡಿದ ಟ್ರಂಪ್
ಫೋಟೋದಲ್ಲಿ ಟ್ರಂಪ್ ಅವರು ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ.

ವಾಷಿಂಗ್ಟನ್: ತಮ್ಮನ್ನು ತಾವು ಯೇಸು ಕ್ರಿಸ್ತನಂತೆ ಬಿಂಬಿಸುವ ಎಐ-ಸೃಷ್ಟಿತ (AI-generated) ಚಿತ್ರವೊಂದನ್ನು ಹಂಚಿಕೊಂಡು ತೀವ್ರ ವಿರೋಧ ಹಾಗೂ ಟೀಕೆಗೆ ಗುರಿಯಾದ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ “ಟ್ರೂತ್” ನಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್ ಅವರು, ತಮ್ಮನ್ನು ಯೇಸು ಕ್ರಿಸ್ತನಂತೆ (Jesus Christ-like figure) ತೋರಿಸುವ AI ಜನಿತ ಚಿತ್ರವನ್ನು ಹಂಚಿಕೊಂಡಿದ್ದರು. ಇದಕ್ಕೆ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು.
ಫೋಟೋದಲ್ಲಿ ಟ್ರಂಪ್ ಅವರು ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ. ಇದು ಬೈಬಲ್‌ನಲ್ಲಿ ಯೇಸು ಕ್ರಿಸ್ತ ಲಾಜರಸ್‌ರನ್ನು ಜೀವಂತಗೊಳಿಸಿದ ಘಟನೆಯನ್ನು ಹೋಲುವಂತಿತ್ತು. ಚಿತ್ರದ ಹಿನ್ನೆಲೆಯಲ್ಲಿ ಅಮೆರಿಕದ ಧ್ವಜ, ಯುದ್ಧ ವಿಮಾನಗಳು ಮತ್ತು ದೇವದೂತರ ಆಕೃತಿಗಳಿರುವುದು ಕಂಡು ಬಂದಿತ್ತು.
ಪೋಪ್ ಲಿಯೋ XIV (Pope Leo XIV) ಅವರು ಇರಾನ್ ಯುದ್ಧದ ವಿಷಯದಲ್ಲಿ ಅಮೆರಿಕದ ಕ್ರಮಗಳನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್ ಅವರು ಪೋಪ್ ಅವರನ್ನು "ದುರ್ಬಲ" ಎಂದು ಕರೆದು, ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ತಮ್ಮನ್ನು ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡು ಎಐ ಚಿತ್ರವನ್ನು ಪೋಸ್ಟ್ ಮಾಡಿದ್ದರು.
ಚಿತ್ರವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಯಿತು.
ಕ್ರೈಸ್ತ ಧಾರ್ಮಿಕ ಸಂಘಟನೆಗಳು, ರಾಜಕೀಯ ವಿಮರ್ಶಕರು ಹಾಗೂ ಸಾರ್ವಜನಿಕರು ಇದನ್ನು “ಧಾರ್ಮಿಕ ಭಾವನೆಗಳಿಗೆ ಧಕ್ಕೆ”, “ಸ್ವಯಂ ದೈವೀಕರಣದ ಪ್ರಯತ್ನ” ಎಂದು ಟೀಕಿಸಿದ್ದರು. ವಿವಾದ ಹೆಚ್ಚಾಗುತ್ತಿದ್ದಂತೆಯೇ ಟ್ರಂಪ್ ಅವರು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಪೋಸ್ಟ್ ಕುರಿತು ಸ್ಪಷ್ಟನೆ ನೀಡಿರುವ ಟ್ರಂಪ್ ಅವರು, ನಾನೇ ಯೇಸು ಕ್ರಿಸ್ತನೆಂದು ತೋರಿಸುವ ಉದ್ದೇಶದಿಂದ ಪೋಸ್ಟ್ ಮಾಡಿರಲಿಲ್ಲ. “ಜನರಿಗೆ ಸಹಾಯ ಮಾಡುವ ವೈದ್ಯ ಅಥವಾ ರೆಡ್ ಕ್ರಾಸ್ ರೀತಿಯ ಸೇವಾ ಭಾವನೆ” ಎಂದು ತೋರಿಸುವ ಪ್ರಯತ್ನವಾಗಿತ್ತು ಎಂದು ತಿಳಿಸಿದ್ದಾರೆ.
ಆದರೆ, ಸ್ಪಷ್ಟನೆಗಳ ನಡುವೆಯೂ ಟೀಕೆಗಳು ನಿಂತಿರಲಿಲ್ಲ. ಇದು ತಪ್ಪು ಸಂದೇಶ ನೀಡುತ್ತದೆ ಮತ್ತು ಧಾರ್ಮಿಕ ಸಂಕೇತಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸುವುದು ಸರಿಯಲ್ಲ ಎಂಬ ಟೀಕೆಗಳು ವ್ಯಕ್ತವಾಗಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಟ್ರಂಪ್ ಅವರು ಇದೀಗ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



