ವಿದೇಶ

ಅಮೆರಿಕ-ಇರಾನ್ ಮಾತುಕತೆಗೆ ಮಧ್ಯವರ್ತಿಯಾಗಿ ಮುಂದುವರಿಯುತ್ತೇವೆ; ಕದನ ವಿರಾಮಕ್ಕೆ ಪಾಕಿಸ್ತಾನ ಕರೆ

ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸಯ್ಯದ್ ಅಸೀಮ್ ಮುನೀರ್ ಅವರೊಂದಿಗೆ ಸೇರಿ, ಹಲವು ಹಂತಗಳಲ್ಲಿ ನಡೆದ ಮಾತುಕತೆಗಳನ್ನು ಸುಗಮಗೊಳಿಸಿದ್ದೇವೆ. ಈ ಚರ್ಚೆಗಳು ರಾತ್ರಿ ಪೂರ್ತಿ ಮುಂದುವರಿದು ಇಂದು ಬೆಳಗ್ಗೆ ಮುಕ್ತಾಯಗೊಂಡವು ಎಂದರು.

ಅಮೆರಿಕ-ಇರಾನ್ ಮಾತುಕತೆಗೆ ಮಧ್ಯವರ್ತಿಯಾಗಿ ಮುಂದುವರಿಯುತ್ತೇವೆ; ಕದನ ವಿರಾಮಕ್ಕೆ ಪಾಕಿಸ್ತಾನ ಕರೆ
ಇಸ್ಲಾಮಾಬಾದ್‌ನಲ್ಲಿ ಇರಾನ್ ಜೊತೆ ಶಾಂತಿ ಮಾತುಕತೆ ನಂತರ, ವಿಮಾನಕ್ಕೆ ಹತ್ತುವ ಮುನ್ನ ಅಮೆರಿಕದ ಉಪಾಧ್ಯಕ್ಷ ಜೆಡಿ ವೆನ್ಸ್ ಅವರು ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಅವರೊಂದಿಗೆ ಕೈಕುಲುಕಿದರು.
Published On :

ಪಾಕಿಸ್ತಾನ: ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಉನ್ನತ ಮಟ್ಟದ ಮಾತುಕತೆ ಯಾವುದೇ ಮಹತ್ವದ ಫಲಿತಾಂಶ ನೀಡದೆ ಮುಕ್ತಾಯವಾದರೂ, ಎರಡೂ ದೇಶಗಳ ನಡುವಿನ ಸಂವಾದಕ್ಕೆ ಸಹಕಾರ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಪಾಕಿಸ್ತಾನ ಇಂದು ಭಾನುವಾರ ತಿಳಿಸಿದೆ.

ಸುಮಾರು 24 ಗಂಟೆಗಳ ಕಾಲ ನಡೆದ ಮಾತುಕತೆಗಳ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್, ಇಸ್ಲಾಮಾಬಾದ್‌ನಲ್ಲಿ ನಡೆದ ತೀವ್ರ ಹಾಗೂ ರಚನಾತ್ಮಕ ಚರ್ಚೆಗಳಿಗೆ ಪಾಕಿಸ್ತಾನ ಮಧ್ಯವರ್ತಿತ್ವ ವಹಿಸಿದೆ ಎಂದು ಹೇಳಿದರು.

ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸಯ್ಯದ್ ಅಸೀಮ್ ಮುನೀರ್ ಅವರೊಂದಿಗೆ ಸೇರಿ, ಹಲವು ಹಂತಗಳಲ್ಲಿ ನಡೆದ ಮಾತುಕತೆಗಳನ್ನು ಸುಗಮಗೊಳಿಸಿದ್ದೇವೆ. ಈ ಚರ್ಚೆಗಳು ರಾತ್ರಿ ಪೂರ್ತಿ ಮುಂದುವರಿದು ಇಂದು ಬೆಳಗ್ಗೆ ಮುಕ್ತಾಯಗೊಂಡವು ಎಂದರು.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಇಳಿಸುವ ಅಗತ್ಯವನ್ನು ಒತ್ತಿಹೇಳಿದ ದಾರ್, ಇತ್ತೀಚೆಗೆ ಘೋಷಿಸಲಾದ ಯುದ್ಧ ವಿರಾಮವನ್ನು ಎರಡೂ ದೇಶಗಳು ಪಾಲಿಸಬೇಕು ಎಂದು ಕರೆ ನೀಡಿದರು. ಎರಡೂ ದೇಶಗಳು ತಮ್ಮ ಬದ್ಧತೆಯನ್ನು ಮುಂದುವರಿಸುವುದು ಅತ್ಯಗತ್ಯ ಎಂದರು. ನಿರಂತರ ಸಂವಾದದಿಂದ ಶಾಶ್ವತ ಶಾಂತಿ ಹಾಗೂ ಪ್ರಾದೇಶಿಕ ಸ್ಥಿರತೆ ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಪಾಕಿಸ್ತಾನದ ಪಾತ್ರವನ್ನು ಪುನರುಚ್ಚರಿಸಿದ ಅವರು, ಮುಂದಿನ ದಿನಗಳಲ್ಲಿಯೂ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಸಂವಾದಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಯುದ್ಧ ವಿರಾಮದ ಪ್ರಸ್ತಾವನೆಯನ್ನು ಅಂಗೀಕರಿಸಿದಕ್ಕಾಗಿ ಹಾಗೂ ಪಾಕಿಸ್ತಾನದ ಮಧ್ಯವರ್ತಿತ್ವ ಪ್ರಯತ್ನಗಳನ್ನು ಗುರುತಿಸಿದಕ್ಕಾಗಿ, ಎರಡೂ ದೇಶಗಳಿಗೆ ಅವರು ಧನ್ಯವಾದಗಳನ್ನು ಸಲ್ಲಿಸಿದರು.

ಇಸ್ಲಾಮಾಬಾದ್‌ನಲ್ಲಿ ನಡೆದ ಈ ಮಾತುಕತೆಗಳು, 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಮೊದಲ ನೇರ ಉನ್ನತ ಮಟ್ಟದ ಸಂವಾದವಾಗಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಿತು.

ಇರಾನ್ ಪ್ರತಿನಿಧಿ ಮಂಡಳಿಯನ್ನು ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವ ವಹಿಸಿದ್ದರು. ಅಮೆರಿಕ ಪ್ರತಿನಿಧಿ ಮಂಡಳಿಯನ್ನು ಉಪಾಧ್ಯಕ್ಷ ಜೆಡಿ ವೆನ್ಸ್ ಮುನ್ನಡೆಸಿದ್ದು, ಜಾರೆಡ್ ಕುಶ್ನರ್ ಹಾಗೂ ಮಧ್ಯಪೂರ್ವದ ವಿಶೇಷ ದೂತ ಸ್ಟೀವ್ ವಿಟ್‌ಕಾಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಶುಕ್ರವಾರ ರಾತ್ರಿಯಿಂದ ನಿನ್ನೆ ಶನಿವಾರ ಮಧ್ಯೆ ಎರಡೂ ದೇಶಗಳ ಪ್ರತಿನಿಧಿಗಳು ಇಸ್ಲಾಮಾಬಾದ್‌ಗೆ ಆಗಮಿಸಿದ್ದರು. ಎರಡು ವಾರಗಳ ಯುದ್ಧ ವಿರಾಮ ಘೋಷಣೆಯ ನಂತರ ನಡೆದ ಈ ಮಾತುಕತೆ ರಾಜತಾಂತ್ರಿಕ ಸಾಧನೆಗೆ ದಾರಿ ಮಾಡಿಕೊಡಬಹುದೆಂಬ ನಿರೀಕ್ಷೆ ಹುಟ್ಟಿಸಿದರೂ, ಯಾವುದೇ ಸ್ಪಷ್ಟ ಫಲಿತಾಂಶ ದೊರೆತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.